ಮತದಾನಕ್ಕಾಗಿ ನೆನಪಾಯಿತು ಮುಚ್ಚಿ ಹೋದ ಸರ್ಕಾರಿ ಶಾಲೆಗಳು – ದಿಢೀರ್ ಬಾಗಿಲು ಓಪನ್, ಶಾಲೆಗಳು ಕ್ಲೀನ್.. ಕ್ಲೀನ್..!

ಮತದಾನಕ್ಕಾಗಿ ನೆನಪಾಯಿತು ಮುಚ್ಚಿ ಹೋದ ಸರ್ಕಾರಿ ಶಾಲೆಗಳು – ದಿಢೀರ್ ಬಾಗಿಲು ಓಪನ್, ಶಾಲೆಗಳು ಕ್ಲೀನ್.. ಕ್ಲೀನ್..!

ಈ ಬಾರಿಯ ಚುನಾವಣೆಯಿಂದ ಏನೆಲ್ಲಾ ಸಾಧ್ಯವಿದೆಯೋ ಇಲ್ಲವೋ.. ಆದರೆ, ಮತದಾನದ ದಿನವೇ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿರುವ ಶಾಲೆಗಳು ಓಪನ್ ಆಗುತ್ತಿವೆ. ಇಷ್ಟು ದಿನ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಿದ್ದವು. ಆದರೆ, ಮತದಾನದ ದಿನ ಅದೇ ಸರ್ಕಾರಿ ಶಾಲೆಗಳನ್ನು ತೆರೆಯಲಾಗುತ್ತಿದೆ. ರಾಜ್ಯದ ಸಾಕಷ್ಟು ಸರಕಾರಿ ಶಾಲೆಗಳಿಗೆ ಸಂಪೂರ್ಣ ಬೀಗ ಹಾಕಿರುವುದರಿಂದ ಈಗ ಬಾಗಿಲು ಮುಚ್ಚಿರುವ ಶಾಲೆಗಳನ್ನು ಗುರುತಿಸಿ ರಾಜ್ಯದ ಜಿಲ್ಲಾ ಹಂತದ ಚುನಾವಣಾಧಿಕಾರಿಗಳು ಬೀಗ ತೆರೆಸಿ ಸ್ವಚ್ಛತೆ ಕಾಪಾಡುವ ಜತೆಗೆ, ಮೂಲಸೌಕರ್ಯ ಒದಗಿಸಲಾಗುತ್ತಿದೆ.

ಇದನ್ನೂ ಓದಿ:  ಮತದಾನೋತ್ಸವಕ್ಕೆ ಸಜ್ಜಾಯ್ತು ಕರ್ನಾಟಕ – ಮತಗಟ್ಟೆಗಳ ಸುತ್ತ ಬಿಗಿ ಬಂದೋಬಸ್ತ್!

ಚುನಾವಣಾ ಆಯೋಗದ ಪ್ರಕಾರ ಮತದಾನ ಕೇಂದ್ರವನ್ನು ಸರಕಾರಿ ಶಾಲೆಗಳಲ್ಲೇ ಮಾಡಬೇಕೆಂಬ ನಿಯಮವಿದೆ. ಚುನಾವಣಾ ಆಯೋಗ ಗುರುತಿಸಿರುವ ರಾಜ್ಯದ 52282 ಮತಗಟ್ಟೆಗಳ ಪೈಕಿ ಎಲ್ಲಾ ಮತಗಟ್ಟೆಗಳು ಬಹುತೇಕ ಸರಕಾರಿ ಶಾಲೆಗಳಲ್ಲೇ ಇವೆ. ಆದರೆ ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ 2380 ಪ್ರಾಥಮಿಕ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಮುಚ್ಚಲಾಗಿದ್ದು, ಚುನಾವಣಾ ಆಯೋಗ ಮತಗಟ್ಟೆಗಳಾಗಿಸಿದ್ದ ಮುಚ್ಚಿರುವ ಶಾಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಗುರುತಿಸಿ, ಆ ಶಾಲೆಗಳ ಬಾಗಿಲು ತೆಗೆಸಿ ಮೂಲಸೌಕರ್ಯ ಒದಗಿಸಲಾಗುತ್ತಿದೆ.

ಬಾಗಿಲು ಮುಚ್ಚಿರುವ ಸರಕಾರಿ ಶಾಲೆಗಳನ್ನು ಓಪನ್ ಮಾಡಲಾಗಿದೆ. ಆದರೆ, ಓಪನ್ ಮಾಡಿದಷ್ಟು ಸುಲಭವಾಗಿ ಶಾಲೆಗಳನ್ನು ಸಿದ್ಧತೆ ಮಾಡಲಾಗುತ್ತಿಲ್ಲ. ಸ್ವಚ್ಛತೆ ಕೈಗೊಳ್ಳಲು ಮುಂದಾಗುತ್ತಿರುವ ಅಧಿಕಾರಿಗಳಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಕೆಲ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ, ಶೌಚಾಲಯ ಸಮಸ್ಯೆ ಇದ್ದರೆ, ಕೆಲವು ಶಾಲೆಗಳು ನಿರ್ವಹಣೆ ಕೊರತೆಯಿಂದ ಛಾವಣಿಗಳು ಸೋರುತ್ತಿವೆ. ಕೆಲವು ಕಡೆ ಮರಗಿಡಗಳಿಂದ ಶಾಲೆಗಳೇ ಮುಚ್ಚಿಹೋಗಿವೆ. ಇನ್ನು ಕೆಲ ಶಾಲೆಗಳ ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದು ಮುರಿದಿದ್ದು, ಇವುಗಳ ರಿಪೇರಿಗೂ ಅಧಿಕಾರಿಗಳು ಹರಸಾಹ ಪಟ್ಟು ಸಿದ್ಧತೆ ಮಾಡಿಕೊಳ್ಳುವಂತಾಗಿದೆ. ಬಾಗಿಲು ಮುಚ್ಚಿರುವ ಸರಕಾರಿ ಶಾಲೆಗಳಿರುವ ಹಳ್ಳಿಯಲ್ಲಿ ಸ್ವಾತಂತ್ರ್ಯ ದಿನ, ಕನ್ನಡರಾಜ್ಯೋತ್ಸವ ಆಚರಣೆಯೂ ನಿಂತಿದೆ. ಜತೆಗೆ ನಿತ್ಯ ನಾಡಗೀತೆ, ರಾಷ್ಟ್ರಗೀತೆ ಸದ್ದು ಮೊಳಗುವುದು ನಿಂತಿದೆ. ಸಾಮೂಹಿಕ ಸಭೆ, ಜನರ ಜಾಗೃತಿಗೆ ವೇದಿಕೆಯಾಗಿದ್ದ ಸರಕಾರಿ ಶಾಲೆಗಳ ಬೆಲೆ ಈಗ ಚುನಾವಣಾ ಸಂದರ್ಭದಲ್ಲಾದರೂ ಬಂದಿದೆಯಲ್ಲಾ ಅನ್ನೋದೇ ಸದ್ಯದ ಸಮಾಧಾನದ ವಿಚಾರ. ಒಂದು ಶಾಲೆ ಮುಚ್ಚುವುದರಿಂದ ಎಷ್ಟೆಲ್ಲಾ ತೊಂದರೆಗಳಿವೆ ಎಂಬುದು ಚುನಾವಣೆ ವೇಳೆ ಬೆಳಕಿಗೆ ಬಂದಿದ್ಯಲ್ಲಾ ಅಷ್ಟೇ ಸಾಕು ಅನ್ನೋ ಮಾತುಗಳು ಕೂಡಾ ಕೇಳಿಬರುತ್ತಿದೆ.

suddiyaana