ಲಾಲ್ ಬಾಗ್ನಲ್ಲಿ ವಾಹನಗಳಿಗೆ ನೋ ಎಂಟ್ರಿ – ಸಚಿವರು, ಅಧಿಕಾರಿಗಳಿಗೂ ಸೈಕಲ್ಲೇ ಗಟ್ಟಿ..!

ಬೆಂಗಳೂರು: ಸಸ್ಯಕಾಶಿ ಲಾಲ್ಬಾಗ್ಗೆ ಹೋಗುವ ಸಾರ್ವಜನಿಕರಿಗೆ ಗುಡ್ನ್ಯೂಸ್ ಇದೆ. ಇನ್ಮೇಲೆ ವಾಹನಗಳ ಕಿರಿಕಿರಿಯೇ ಇಲ್ಲದೆ ನೀವು ಆರಾಮಾಗಿ ರೌಂಡ್ಸ್ ಹಾಕಬಹುದು. ಸಚಿವರು, ಅಧಿಕಾರಿಗಳಿಗೂ ಕೂಡ ಉದ್ಯಾನದೊಳಗೆ ವಾಹನ ಬಳಕೆ ನಿಷೇಧ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ ಸಚಿವರೂ ಸೇರಿದಂತೆ ಯಾರೂ ಕಾರು, ದ್ವಿಚಕ್ರ ವಾಹನ ಬಳಸುವಂತಿಲ್ಲ. ಎಲ್ಲರೂ ಸೈಕಲ್ ತುಳಿದುಕೊಂಡೇ ಉದ್ಯಾನದಲ್ಲಿ ಸಂಚರಿಸಬೇಕು.
ಇದನ್ನೂ ಓದಿ:ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ! – ನಿಷೇಧದ ಬಗ್ಗೆ ನಡೀತಿದೆ ಜೋರು ಚರ್ಚೆ..!
ಲಾಲ್‌ಬಾಗ್‌ನಲ್ಲಿ ಹೊಸ ನಿಯಮದ ಪ್ರಕಾರ ಸಾರ್ವಜನಿಕ ವಾಹನಗಳು ಮಾತ್ರವಲ್ಲದೆ ಸರ್ಕಾರಿ ವಾಹನಗಳು, ಸ್ವತಃ ತೋಟಗಾರಿಕೆ ಇಲಾಖೆಯ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೂಡ ಕಾರು ಏರುವಂತಿಲ್ಲ. ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ, ಐಎಎಸ್, ಕೆಎಎಸ್ ಅಧಿಕಾರಿಗಳೂ ಕೂಡ ವಾಹನ ಬಳಸುವಂತಿಲ್ಲ. ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶನಾಲಯ ಸೇರಿದಂತೆ ನಾನಾ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ನಿರ್ದೇಶಕರ ಕಚೇರಿ ಲಾಲ್‌ಬಾಗ್‌ನ ಮುಖ್ಯ ಪ್ರವೇಶ ದ್ವಾರಕ್ಕೆ ಹತ್ತಿರದಲ್ಲಿದ್ದರೂ ಉಪನಿರ್ದೇಶಕರ ಕಚೇರಿ, ವಾರ್ತಾ ಸಭಾಂಗಣ, ತುಂತುರು-ಹನಿ ನೀರಾವರಿ ಕಚೇರಿ, ಗಾಜಿನ ಮನೆ ಹೀಗೆ ಇಲಾಖೆಯ ನಾನಾ ವಿಭಾಗಗಳು ಉದ್ಯಾನವನದ ವಿವಿಧ ಭಾಗಗಳಲ್ಲಿವೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕನಿಷ್ಠ ಅರ್ಧ ಕಿ.ಮೀ. ನಿಂದ ಒಂದು ಕಿ.ಮೀ. ದೂರವಿದೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಮೀಟಿಂಗ್, ಫೈಲ್‌ಗಳಿಗೆ ಸಹಿ ಹಾಕಿಸುವುದು ಮತ್ತಿತರ ಚಟುವಟಿಕೆಗಳಿಗಾಗಿ ಈ ಹಿಂದೆ ಕಾರಿನಲ್ಲಿಓಡಾಡುತ್ತಿದ್ದರು. ಆದರೆ ಹೊಸ ನಿಯಮದ ಅನ್ವಯ ಪಾರ್ಕ್ನಲ್ಲಿ ಅಧಿಕಾರಿಗಳೂ ನಡೆದುಕೊಂಡು ಹೋಗಬೇಕು. ಇಲ್ಲವೇ ಸೈಕಲ್ ಏರಿ ಹೋಗಬೇಕು.
ಉದ್ಯಾನದೊಳಗೆ ವಾಯುಮಾಲಿನ್ಯವನ್ನ ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಕೊರೊನಾಗೂ ಮುನ್ನವೇ ಈ ನಿಯಮ ಜಾರಿಗೆ ತರಲಾಗಿತ್ತು. ಆರಂಭದಲ್ಲಿಎಲ್ಲರೂ ನಡೆದುಕೊಂಡೇ ಹೋಗುತ್ತಿದ್ದರು. ಆದರೆ ಕೆಲವೊಮ್ಮೆ ಸಮಯದ ಒತ್ತಡ ಮತ್ತು ಇತರೆ ಕಾರಣಗಳಿಂದಾಗಿ ನಡೆದು ಬರುವುದು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ತೋಟಗಾರಿಕೆ ಇಲಾಖೆ ಸೈಕಲ್‌ಗಳನ್ನು ಪರಿಚಯಿಸಿದೆ. ಹೀಗಾಗಿ ಸೈಕಲ್‌ಗಳೇ ಅಧಿಕಾರಿಗಳ ಇಷ್ಟದ ವಾಹನಗಳಾಗಿವೆ.
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯ ಸುಮಾರು 15ಕ್ಕೂ ಹೆಚ್ಚು ವಿಭಾಗಗಳಿವೆ. ಪ್ರತಿ ವಿಭಾಗದ ಮುಂದೆಯೂ ಒಂದೊಂದು ಸೈಕಲ್ ನಿಲ್ಲಿಸಲಾಗಿರುತ್ತದೆ. ಕೆಲವು ಗಾರ್ಡನರ್‌ಗಳಿಗೂ ಸೈಕಲ್‌ಗಳನ್ನು ವಿತರಿಸಲಾಗಿದೆ. ಉದ್ಯಾನದಲ್ಲಿ ಸದ್ಯ 30 ಸೈಕಲ್ಗಳಿದ್ದು, ಈ ಪೈಕಿ ನಾಲ್ಕು ಸೈಕಲ್ಗಳನ್ನ ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಸೈಕಲ್ ತುಳಿಯಲಾಗದ ಸಿಬ್ಬಂದಿಗಾಗಿ ಕೆಲವು ಬ್ಯಾಟರಿ ಚಾಲಿತ ಸೈಕಲ್‌ಗಳೂ ಲಾಲ್‌ಬಾಗ್‌ನಲ್ಲಿವೆ.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ವಿವಿಧ ಕಡೆಗಳಿಂದ ತಮ್ಮ ವಾಹನಗಳಲ್ಲಿ ಲಾಲ್ಬಾಗ್ಗೆ ಬರುತ್ತಾರೆ. ಹೀಗೆ ಬರುವ ಅಧಿಕಾರಿಗಳು ಲಾಲ್‌ಬಾಗ್‌ನ ಡಬಲ್ ರೋಡ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಬಳಿಕ ಅಲ್ಲಿಯೇ ಸೈಕಲ್ ಇದ್ದರೆ ಹತ್ತಿ ಒಳ ಹೋಗುತ್ತಾರೆ, ಇಲ್ಲದಿದ್ರೆ ಕಾಲ್ನಡಿಗೆಯಲ್ಲೇ ಬರುತ್ತಾರೆ. ಪಾರ್ಕ್ನಲ್ಲಿ ವಾಯುಮಾಲಿನ್ಯವನ್ನ ಸಂಪೂರ್ಣವಾಗಿ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ವಾಹನಗಳಿಂದ ಉಂಟಾಗುವ ಕಿರಿಕಿರಿ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.