ಸರ್ಕಾರಿ ನೌಕರರು, ಐಷಾರಾಮಿ ಕಾರು ಮಾಲೀಕರೇ BPL​ ಫಲಾನುಭವಿಗಳು! – ತನಿಖೆಯಲ್ಲಿ ಗೊತ್ತಾಗಿದ್ದೇನು?

ಸರ್ಕಾರಿ ನೌಕರರು, ಐಷಾರಾಮಿ ಕಾರು ಮಾಲೀಕರೇ BPL​ ಫಲಾನುಭವಿಗಳು! – ತನಿಖೆಯಲ್ಲಿ ಗೊತ್ತಾಗಿದ್ದೇನು?

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನರು ಸುಳ್ಳು ದಾಖಲೆಗಳನ್ನು  ಸೃಷ್ಟಿಸುತ್ತಾರೆ. ಸಾಕಷ್ಟು ವೈಯುಕ್ತಿಕ ಲಾಭಗಳನ್ನು ಪಡೆಯುತ್ತಿರುವ ಅಕ್ರಮಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಕರ್ನಾಟಕದಲ್ಲಿ ಅಕ್ರಮವಾಗಿ ಪಡಿತರದ ಚೀಟಿ ಪಡೆಯುತ್ತಿರುವುದರ ಕುರಿತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕಾಂಗ್ರೆಸ್‌ ನ ಐದು ಗ್ಯಾರಂಟಿ ಪಡೆಯಲು ಜನರ ಸರ್ಕಸ್‌ – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌!

ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರು ಸರಕಾರ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಲು ಅಳವಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಬಿಪಿಎಲ್ ಪಡಿತರ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜನವರಿ 2021 ರಲ್ಲಿ ಪ್ರಾರಂಭಿಸಿದ ತನಿಖೆಯಲ್ಲಿ 13 ಕೋಟಿ ರೂ ದಂಡವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 17,521 ಸರ್ಕಾರಿ ನೌಕರರಿಂದ 11 ಕೋಟಿ ಸಂಗ್ರಹವಾಗಿದೆ.

ಅನರ್ಹವಾಗಿದ್ದರೂ ಅಂತ್ಯೋದಯ ಅನ್ನ ಯೋಜನೆ (ಎವೈವೈ) ಮತ್ತು ಆದ್ಯತಾ ಕುಟುಂಬಗಳ (ಪಿಎಚ್‌ಎಚ್) ಕಾರ್ಡ್‌ಗಳನ್ನು ಹೊಂದಿರುವ 4.63 ಲಕ್ಷ ಕುಟುಂಬಗಳನ್ನು ಇಲಾಖೆ ಇದುವರೆಗೆ ಗುರುತಿಸಿದೆ. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಡೇಟಾಬೇಸ್ ಬಳಸಿ ಸರ್ಕಾರಿ ನೌಕರರನ್ನು ಗುರುತಿಸಲಾಗಿದೆ ಮತ್ತು ಆಧಾರ್ ವಿವರಗಳೊಂದಿಗೆ ವಿವರಗಳನ್ನು ಪರಿಶೀಲಿಸಲಾಗಿದೆ. ಅಲ್ಲದೆ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಕುಟುಂಬಗಳು ಪಿಎಚ್‌ಎಚ್ ಕಾರ್ಡ್ ಪಡೆದಿರುವುದನ್ನು ಗುರುತಿಸಲು ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಗಳೊಂದಿಗೆ ಕೆಲಸ ಮಾಡಿದೆ. ಅಚ್ಚರಿಯ ಸಂಗತಿ ಎಂದರೆ 12,012 ಐಷಾರಾಮಿ ಕಾಲು ಮಾಲೀಕರು ಪಿಎಚ್‌ಎಚ್‌ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತ (ಪ್ರಭಾರ) ಮತ್ತು ವಿಜಿಲೆನ್ಸ್ ಮತ್ತು ಐಟಿ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.

ಇನ್ನು ಆದಾಯ ತೆರಿಗೆ ಪಾವತಿದಾರರಿಂದ 88 ಲಕ್ಷ ದೂರುಗಳು ಬಂದಿವೆ. ಇದರ ಆಧಾರದ ಮೇಲೆ ಅನರ್ಹ ಕಾರ್ಡುದಾರರಿಂದ ರೂ 85 ಲಕ್ಷ ಹಾಗೂ ನಾಲ್ಕು ಚಕ್ರದ ಮಾಲೀಕರಿಂದ ರೂ 28 ಲಕ್ಷ ದಂಡ ವಸೂಲಿಯಾಗಿದೆ. 4.63 ಲಕ್ಷ ಅನರ್ಹ ಕಾರ್ಡ್ ಹೊಂದಿರುವವರ ಪೈಕಿ 3.33 ಲಕ್ಷ ಕಾರ್ಡ್‌ಗಳನ್ನು ಅರ್ಹತಾ ಮಾನದಂಡಗಳನ್ನು ಅನುಸರಿಸಿ ಎಪಿಎಲ್‌ಗೆ ಮೇಲ್ದರ್ಜೆಗೇರಿಸಲಾಗಿದೆ. ಪಡಿತರ ಚೀಟಿಗಳ ದುರುಪಯೋಗವನ್ನು ತಡೆಯಲು ಇಲಾಖೆಯು ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತದೆ ಎಂದು ಜ್ಞಾನೇಂದ್ರ ಗಂಗ್ವಾರ್ ತಿಳಿಸಿದ್ದಾರೆ.

suddiyaana