ಸರ್ಕಾರಿ ಬಸ್ ಫುಲ್ ರಶ್ – ಜೆಸಿಬಿ ಏರಿ ಶಾಲೆಗೆ ತೆರಳಿದ ವಿದ್ಯಾರ್ಥಿಗಳು!
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ಬಳಿಕ ಮಹಿಳೆಯರ ಓಡಾಟ ಹೆಚ್ಚಿದೆ. ಸಾರಿಗೆ ಬಸ್‌ಗಳಿಗೆ ಭಾರೀ ಡಿಮಾಂಡ್ ಸೃಷ್ಟಿಯಾಗಿದೆ. ಯಾವ ಸರ್ಕಾರಿ ಬಸ್ ನೋಡಿದ್ರೂ ಫುಲ್ ರಶ್ ಆಗಿದೆ. ಇದೀಗ ಮುಂಜಾನೆ ಶಾಲಾ – ಕಾಲೇಜುಗಳಿಗೆ ತೆರಳಲು ಬಸ್‌ಗಳನ್ನೇ ನಂಬಿಕೊಂಡಿದ್ದ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಉಚಿತ ಬಸ್ ಪ್ರಯಾಣ ಆರಂಭವಾದಾಗಿಂದ ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ ಬಸ್ಗಳು ಅಧಿಕ ಪ್ರಯಾಣಿಕರಿಂದ ಭರ್ತಿಯಾಗುತ್ತಿದ್ದು, ಇದರ ಎಫೆಕ್ಟ್ ವಿದ್ಯಾರ್ಥಿಗಳಿಗೂ ತಟ್ಟಿದೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಶಾಖಾಪೂರ ಗ್ರಾಮದಿಂದ ಹಿರೇಅರಳಹಳ್ಳಿ ಗ್ರಾಮಕ್ಕೆ ವಿದ್ಯಾರ್ಥಿಗಳು ಬಸ್ ಇಲ್ಲದೆ, ಜೆಸಿಬಿ ಮೂಲಕ ಶಾಲೆಗೆ ತೆರಳಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಸವಾಲಾದ ಕ್ಷೀರಭಾಗ್ಯ – ಯೋಜನೆಗೆ ಹಾಲಿನ ಪೌಡರ್ ಪೂರೈಸಲು ಹಾಲು ಒಕ್ಕೂಟ ಹಿಂದೇಟು
ಶಾಲೆಗೆ ಹೋಗಲು ಬಸ್ ಸಿಗದೇ ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಜೆಸಿಬಿ ಮೂಲಕ ಶಾಲೆಗೆ ತೆರಳಿದ್ದಾರೆ. ವಿದ್ಯಾರ್ಥಿಗಳು ಜೆಸಿಬಿ ಮೂಲಕ ಶಾಲೆಗೆ ತೆರಳುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಸಾರ್ವಜನಿಕರು ಈ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ನಂತರದ ದಿನಗಳಲ್ಲಿ ಸರ್ಕಾರಿ ಬಸ್ಗಳು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಇದನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.