ಗೂಗಲ್ ನಲ್ಲಿ ಹೊಸ ಬದಲಾವಣೆ – ನಿಮ್ಮ ಖಾತೆ ಕೂಡ ಡಿಲೀಟ್ ಆಗುತ್ತಾ?
ಗೂಗಲ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಹೊಸ ಫೀಚರ್ ಗಳನ್ನು ಆಗಾಗ ಪರಿಚಯಿಸುತ್ತಾ ಬಂದಿದೆ. ಅಷ್ಟೇ ಅಲ್ಲದೇ ಅಪ್ಲಿಕೇಷನ್ ನಲ್ಲಿ ಸಾಕಷ್ಟು ಬದಲಾವಣೆ ಕೂಡ ತರುತ್ತಾ ಬಂದಿದೆ. ಇದೀಗ ಗೂಗಲ್ ಜಿಮೇಲ್ ವಿಚಾರವಾಗಿ ಹೊಸ ಬದಲಾವಣೆಯೊಂದನ್ನು ಮಾಡಿದೆ. ಗೂಗಲ್ ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳ ನೀತಿಯಲ್ಲಿ ಹೊಸ ಬದಲಾವಣೆ ತಂದಿದೆ.
ಇದನ್ನೂ ಓದಿ:ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ಸೈಬರ್‌ಕಾಂಡ್ರಿಯಾಸಿಸ್ ಸಮಸ್ಯೆ!
ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗ್‌ಇನ್ ಮಾಡಲು ಹಾಗೂ ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಹೇಳಿತ್ತು. ಆದರೀಗ ಇಡೀ ಖಾತೆಯನ್ನೇ ಅಳಿಸಿ ಹಾಕುವುದಾಗಿ ಗೂಗಲ್ ಎಚ್ಚರಿಕೆ ನೀಡಿದೆ.
ಈ ವರ್ಷದ ನಂತರ ಗೂಗಲ್ ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ ನಾವು ಖಾತೆಯನ್ನು ಹಾಗೂ ಅದರಲ್ಲಿರುವ ಡೇಟಾಗಳನ್ನು ಅಳಿಸಬಹುದು. ಅವುಗಳಲ್ಲಿ ಗೂಗಲ್ ವರ್ಕ್‌ಸ್ಪೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಕ್ಯಾಲೆಂಡರ್), ಯೂಟ್ಯೂಬ್, ಹಾಗೂ ಗೂಗಲ್ ಫೋಟೋಸ್ ಸೇರಿರುತ್ತವೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಹೊಸ ನೀತಿಯ ಬಗ್ಗೆ ಬಳಕೆದಾರರು ಈ ವರ್ಷದ ಡಿಸೆಂಬರ್ ವರೆಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜಿಮೇಲ್‌ನಲ್ಲಿ ಸಕ್ರಿಯವಾಗಿಲ್ಲದ ಬಳಕೆದಾರರು ತಮ್ಮ ಹಳೆಯ ಖಾತೆಯನ್ನು ಹಿಂಪಡೆಯಲು ಇನ್ನೂ ಸಮಯವಿದೆ. ಆದರೆ ಒಂದು ಬಾರಿ ಡಿಲೀಟ್ ಆದ ಖಾತೆಯನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಹೇಳಿದೆ.