‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?

‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?

ಗೂಗಲ್.. ಅತೀ ಹೆಚ್ಚು ಬಳಕೆದಾರರನ್ನ ಹೊಂದಿರುವ ಟೆಕ್ ಲೋಕದ ದೊಡ್ಡ ಅಪ್ಲಿಕೇಶನ್. ಸುಮಾರು 30 ವರ್ಷಗಳಿಂದ ತಂತ್ರಜ್ಞಾನವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಅಪ್ಲಿಕೇಶನ್. ಆದ್ರೆ ಚಾಟ್ ಜಿಪಿಟಿ (ChatGPT) ಲಾಂಚ್ ಆದಾಗ ಗೂಗಲ್​ಗೆ ದೊಡ್ಡ ಅಪಾಯ ಎದುರಾಗಿತ್ತು. ಸದ್ಯ ಪ್ರಪಂಚದಾದ್ಯಂತ ಕೇಳಿ ಬರುತ್ತಿರುವ ಸೆನ್ಸೇಷನಲ್ ಪದ ChatGPT. ಗೂಗಲ್​ಗೆ ಪರ್ಯಾಯವೆಂದೇ ಬಿಂಬಿತವಾಗಿರೋ ಚಾಟ್GPT ಈಗ ಟೆಕ್ ಲೋಕದಲ್ಲಿ ಹೆಚ್ಚು ಸದ್ದು ಮಾಡ್ತಿದೆ.

ಇದನ್ನೂ ಓದಿ : ‘ಬಾಯ್ಕಾಟ್’ಗೆ ಗೋಲಿ.. ಬಾಕ್ಸಾಫೀಸ್ ಲೂಟಿ – ಗಲ್ಲಾಪೆಟ್ಟಿಗೆಯಲ್ಲಿ ₹542 ಕೋಟಿ ಬಾಚಿದ ‘ಪಠಾಣ್’!

ಏನಿದು ಚಾಟ್ ಜಿಪಿಟಿ?

ಭವಿಷ್ಯದ ತಂತ್ರಜ್ಞಾನವೆಂದು ಕರೆಸಿಕೊಳ್ಳುತ್ತಿರುವ ಚಾಟ್ ಜಿಪಿಟಿ, ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಂಶೋಧನಾ ಸಂಸ್ಥೆ OpenAI ಅಭಿವೃದ್ಧಿ ಪಡಿಸಿದ AI ಆಧಾರಿತ ಅಪ್ಲಿಕೇಶನ್ ಆಗಿದೆ. ಇದು ಕ್ಷಣ ಮಾತ್ರದಲ್ಲೇ ನಮ್ಮೆಲ್ಲ ಪ್ರಶ್ನೆಗಳಿಗೆ ಮನುಷ್ಯನ ಭಾಷೆಯಲ್ಲಿ ಉತ್ತರಿಸುವ ಸಾಮರ್ಥ್ಯವನ್ನ ಹೊಂದಿದೆ. ಹಾಗಿದ್ರೆ ಗೂಗಲ್ ಕೂಡಾ ಇದನ್ನೇ ಮಾಡ್ತಾ ಇರೋದು ಅನ್ನೋ ಪ್ರಶ್ನೆ ಬರೋದು ಕಾಮನ್. ಆದರೆ ಇಲ್ಲೊಂದು ವ್ಯತ್ಯಾಸವಿದೆ.

ಗೂಗಲ್ ಗಿಂತ ಚಾಟ್ ಜಿಪಿಟಿ ಹೇಗೆ ಭಿನ್ನ?

ನಾವು ಯಾವುದೇ ವಿಷಯವನ್ನ ಗೂಗಲ್ ಸರ್ಚ್ ಮಾಡಿದಾಗ ಗೂಗಲ್ ತನ್ನ ಸರ್ಚ್ ಎಂಜಿನ್ ಮೂಲಕ ಹಲವಾರು ವೆಬ್ ಪುಟಗಳನ್ನ ವಿಶ್ಲೇಷಣೆ ಮಾಡುತ್ತದೆ ಮತ್ತು ನಾವು ಕೇಳಿದ ಪ್ರಶ್ನೆಗೆ ಸಂಬಂಧಿತ ಹಲವಾರು ವೆಬ್ ಪುಟಗಳೊಂದಿಗೆ ತೆರೆದುಕೊಳ್ಳುತ್ತದೆ. ಈ ಮೂಲಕ ನಮಗೆ ಬೇಕಾದ ಉತ್ತರವನ್ನ ಆಯ್ಕೆ ಮಾಡಿಕೊಳ್ಳುವ ವೇದಿಕೆಯಂತೆ ಗೂಗಲ್ ಕಂಡು ಬರುತ್ತದೆ. ಆದರೆ ಚಾಟ್ ಜಿಪಿಟಿ ಹಾಗಲ್ಲ. ಅದು ಬಳಕೆದಾರರಿಗೆ ವರ್ಚುವಲ್ ಸಹಾಯಕನಂತೆ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಪ್ರೋಗ್ರಾಮಿಂಗ್ ಮೂಲಕ ಮಾಹಿತಿಗಳನ್ನ ಫೀಡ್ ಮಾಡಲಾಗಿರುತ್ತದೆ. ತನಗೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಬಳಕೆದಾರರ ಪ್ರಶ್ನೆಗಳಿಗೆ ಸಂವಹನಾತ್ಮಕ ಮಾದರಿಯಲ್ಲಿ ಉತ್ತರ ನೀಡುತ್ತದೆ. ನಾವು ಕೇಳಿದ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ನೀಡಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ. ನಾವು ಕೇಳಿದ ಪ್ರಶ್ನೆಗಳಿಗೆ ಒಂದು ಉತ್ತರ ಸಿಕ್ಕರೆ, ಸಿಕ್ಕ ಉತ್ತರದ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಬಹುದು. ಹೀಗೆ ಪ್ರಶ್ನೆ ಕೇಳುತ್ತಾ ಹೋದರೆ, ನಿಮ್ಮ ಆಪ್ತ ಸಹಾಯಕನ ರೀತಿಯಲ್ಲಿ ಉತ್ತರಿಸುತ್ತದೆ. ಇದು ಉತ್ತರಿಸುವ ರೀತಿ ಹೇಗಿರುತ್ತೆ  ಎಂದರೆ ನೀವು ಪರಿಣಿತರ ಜೊತೆ ಕುಳಿತು ಪರಿಹಾರ ಪಡೆಯುವಂತಹ ಅನುಭವ ನೀಡಲಿದೆ.

ಚಾಟ್ ಜಿಪಿಟಿ ಯಿಂದ ಏನೆಲ್ಲಾ ಉಪಯೋಗ?

ಇದು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯುವ ಮತ್ತು ಡೀಬಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಂಗೀತ, ಟೆಲಿಪ್ಲೇಗಳು, ಕಾಲ್ಪನಿಕ ಕಥೆಗಳು ಮತ್ತು ವಿದ್ಯಾರ್ಥಿ ಪ್ರಬಂಧಗಳನ್ನು ಸಂಯೋಜಿಸಲು, ಕವನ ಮತ್ತು ಹಾಡಿನ ಸಾಹಿತ್ಯವನ್ನು ಬರೆಯಲು, ಕಷ್ಟಕರವಾದ ಮ್ಯಾಥ್ಸ್ ಪ್ರಾಬ್ಲಮ್ ಪರಿಹರಿಸಲು, ಜಾಬ್ ರೆಸ್ಯೂಮ್ ತಯಾರಿ ಮಾಡಲು ಹೀಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತಾ ಇದೆ.

ಚಾಟ್ ಜಿಪಿಟಿಯ ಸದ್ದಿಗೆ ಹೆದರಿದ ಗೂಗಲ್!

ಚಾಟ್ ಜಿಪಿಟಿ ಟೆಕ್ ವಲಯದಲ್ಲಿ ಸದ್ದು ಮಾಡುತ್ತಿದ್ದಂತೆ ಗೂಗಲ್ ಇದನ್ನ ಗಂಭೀರವಾಗಿ ಪರಿಗಣಿಸಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ ಗೂಗಲ್ ಸಿಇಓ ಸುಂದರ್ ಪಿಚೈ ಈಗಾಗಲೇ ತಮ್ಮ ಉದ್ಯೋಗಿಗಳಿಗೆ AI ಆಧಾರಿತ ಪ್ರಾಡಕ್ಟ್ ಗಳನ್ನ ಅಭಿವೃದ್ಧಿ ಪಡಿಸುವ ಕಡೆ ಗಮನ ಕೊಡುವಂತೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಚಾಟ್ ಜಿಪಿಟಿ ತಂತ್ರಜ್ಞಾನ ವರವೋ, ಶಾಪವೋ?

ಸದ್ಯ ಚಾಟ್ ಜಿಪಿಟಿ ಪ್ರಾಯೋಗಿಕ ಹಂತದಲ್ಲಿ ಇದ್ದು ಕೆಲವೊಮ್ಮೆ ತಪ್ಪು ಮಾಹಿತಿಗಳನ್ನ ನೀಡುತ್ತಿದೆ ಎಂದೂ Open AI ಒಪ್ಪಿಕೊಂಡಿದೆ. ಹೊಸ ಹೊಸ ತಂತ್ರಜ್ಞಾನಗಳು ಮನುಷ್ಯನ ಬದುಕನ್ನ ಸುಲಭ ಮಾಡುತ್ತಿದ್ದರೂ  ಭವಿಷ್ಯದಲ್ಲಿ ಚಾಟ್ ಜಿಪಿಟಿಯು ಪೂರ್ಣ ರೂಪದೊಂದಿಗೆ ಬಂದಾಗ ಸಾಫ್ಟ್​ವೇರ್ ವಲಯದ ಕೆಲವೊಂದು ಉದ್ಯೋಗಗಳಿಗೆ ಮತ್ತು ಕಂಟೆಂಟ್ ರೈಟಿಂಗ್ ನಂತ ಉದ್ಯೋಗಗಳಿಗೆ ಕತ್ತರಿ ಬೀಳಬಹುದು ಎಂದೂ ಹೇಳಲಾಗುತ್ತಿದೆ.

ಶೈಕ್ಷಣಿಕ ಕ್ಷೇತ್ರದ ಗೇಮ್ ಚೇಂಜರ್ ಚಾಟ್ ಜಿಪಿಟಿ!

ಈಗಾಗಲೇ ಪ್ರಾಯೋಗಿಕ ಹಂತದಲ್ಲಿರುವ ಚಾಟ್ ಜಿಪಿಟಿಯ ಕೆಲವೊಂದು ಫೀಚರ್ಸ್ ನೋಡಿದಾಗ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟಕ್ಕೆ ದೊಡ್ಡ ಹೊಡೆತ ಬೀಳುವ ಹಾಗೇ ಕಂಡು ಬರುತ್ತಿದೆ. ಕ್ಷಣ ಮಾತ್ರದಲ್ಲಿ ಮಾಹಿತಿ ಕೊಡುವ ಚಾಟ್ ಜಿಪಿಟಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನ ಕುಂದಿಸಬಹುದು. ಯೋಚನಾ ಶಕ್ತಿಯನ್ನ ನಿಗ್ರಹಿಸಬಹುದು. ಈ ಕಾರಣದಿಂದ ಚಾಟ್ ಜಿಪಿಟಿಗೆ ಕಡಿವಾಣ ಹಾಕಲು ಕೆಲವೊಂದು ಕಾಲೇಜುಗಳು ಮುಂದಾಗಿವೆ.

ಅಮೆರಿಕದ University of Minnesota ಕಾನೂನು ಮತ್ತು ವೈದ್ಯಕೀಯ ಪರವಾನಗಿ ಪರೀಕ್ಷೆಯನ್ನು ಚಾಟ್ ಜಿಪಿಟಿ ಬಳಸಿ ಪಾಸ್ ಮಾಡಿದೆ. University of Pennsylvania ದ Wharton School MBA ಪದವಿ ಪರೀಕ್ಷೆಯನ್ನ ಚಾಟ್ ಜಿಪಿಟಿ ಕ್ಲಿಯರ್ ಮಾಡಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಬೆಂಗಳೂರಿನ RV ಕಾಲೇಜು ಸೇರಿದಂತೆ ಕೆಲವೊಂದು ಕಾಲೇಜುಗಳು ವಿದ್ಯಾರ್ಥಿಗಳು ಚಾಟ್ ಜಿಪಿಟಿಯನ್ನ ಬಳಸದಂತೆ ಎಚ್ಚರಿಕೆ ನೀಡಿದೆ. ಹಾಗೇ ತಮ್ಮ ಟ್ಯೂಟೋರಿಯಲ್ ಅವಧಿಯಲ್ಲಿ ಚಾಟ್ ಜಿಪಿಟಿ ಯನ್ನ ಬ್ಯಾನ್ ಮಾಡಿದೆ.

ಒಟ್ಟಿನಲ್ಲಿ ಪ್ರಾಯೋಗಿಕ ಹಂತದ ಚಾಟ್ ಜಿಪಿಟಿ ಟೆಕ್ ವಲಯದಲ್ಲಿ ಸಂಚಲನ ಮೂಡಿಸಿದೆಯಾದ್ರೂ ಭವಿಷ್ಯದಲ್ಲಿ ಪೂರ್ಣ ರೂಪದೊಂದಿಗೆ ಬಂದಾಗ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂದೂ ಕಾದು ನೋಡಬೇಕಷ್ಟೆ.

suddiyaana