ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನ – ಕಾಂಗ್ರೆಸ್‌ಗೆ ಕೆಜಿಎಫ್ ಬಾಬು ಗುಡ್‌ಬೈ
ಐಟಿ ದಾಳಿ ಬೆನ್ನಲ್ಲೇ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಕೆಜಿಎಫ್ ಬಾಬು ರಾಜೀನಾಮೆ ನೀಡಿದ್ದಾರೆ. ಕೆಜಿಎಫ್ ಬಾಬು, ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ತೊರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಪಕ್ಷದ ಇತ್ತೀಚಿನ ವಿದ್ಯಮಾನಗಳಿಂದ ಬೇಸೆತ್ತು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಕೊಡುತ್ತಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಕನಕಪುರದಲ್ಲಿ ಕೊನೇ ಕ್ಷಣದ ಟ್ವಿಸ್ಟ್ – ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ
ಚಿಕ್ಕಪೇಟೆಯಲ್ಲಿ ಆರ್. ವಿ ದೇವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಕೆ.ಜಿ.ಎಫ್ ಬಾಬು ಕಾಂಗ್ರೆಸ್ ಪ್ರಾಥಮಿಕ ಸದಸ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಜಿಎಫ್ ಬಾಬು ಅವರ ಪತ್ನಿ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ನಡುವೆ ಬಾಬು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು.
ತಮ್ಮ ಪತ್ನಿ ಪರವಾಗಿ ವಿಧಾನಸಭಾ ಚುನಾವಣಾ ಸಿದ್ಧತೆಯಲ್ಲಿರುವ ಕೆಜಿಎಫ್ ಬಾಬು ನಿವಾಸದ ಮೇಲೆ ಬುಧವಾರ ಐಟಿ ದಾಳಿ ನಡೆದಿತ್ತು. ಬಾಬು ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಐಟಿ ದಾಳಿಯ ಸಂದರ್ಭದಲ್ಲಿ ಕೆಜಿಎಫ್ ಬಾಬು ಅವರ ಮನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಡಿಡಿ ಹಾಗೂ 5 ಸಾವಿರ ರೇಷ್ಮೆ ಸೀರೆಗಳನ್ನು ಜಪ್ತಿ ಮಾಡಲಾಗಿದೆ. ಸೀರೆ ಹಾಗೂ ಡಿಡಿ ಚೆಕ್ ಗಳಿದ್ದ ಪ್ಯಾಕೇಟ್ ಗಳ ಮೇಲೆ ಬಾಬು ಅವರ ಫೋಟೋ ಇರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿರುವ ರುಕ್ಸಾನಾ ಪ್ಯಾಲೇಸ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ರುಕ್ಸಾನಾ ಪ್ಯಾಲೇಸ್ ಬಾಬು ಅವರಿಗೆ ಸೇರಿದ್ದು ಎನ್ನಲಾಗಿತ್ತು. ಬಾಬು ಅವರು ಮಾತ್ರವಲ್ಲದೆ, ಸುಮಾರು 50 ಕಾಂಗ್ರೆಸ್ ಶಾಸಕರ ಮನೆಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ರೈಡ್ ನಡೆಸಿದ್ದರು. ಇನ್ನು, ಚಾಮರಾಜನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ, ಕರಿಕಲ್ಲು ಉದ್ಯಮಿಯಾಗಿರುವ ವೃಷಭೇಂದ್ರಪ್ಪ ಅವರ ಬೈಕ್ ಶೋರೂಂ ಮೇಲೆ ಐಟಿ ಅಧಿಕಾರಿಗಳು ರೈಡ್ ನಡೆಸಿದ್ದರು