ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ – ರೈಲಿನಲ್ಲಿ ಸಿಗಲಿದೆ 20 ರೂ.ಗೆ ತಿಂಡಿ, 3 ರೂ.ಗೆ ನೀರು!

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ – ರೈಲಿನಲ್ಲಿ ಸಿಗಲಿದೆ 20 ರೂ.ಗೆ ತಿಂಡಿ, 3 ರೂ.ಗೆ ನೀರು!

ನವದೆಹಲಿ: ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ರೈಲ್ವೇ ಇಲಾಖೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರು ಇನ್ನು ಊಟಕ್ಕಾಗಿ ಪರದಾಡಬೇಕಾಗಿಲ್ಲ. ಇನ್ನು ಮುಂದೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.

ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣದ ಅನುಭವವನ್ನು ಉತ್ತಮಗೊಳಿಸಲು ಸಾಮಾನ್ಯ ಕೋಚ್ ಪ್ರಯಾಣಿಕರಿಗೆ ವಿಶೇಷವಾಗಿ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕೇಜ್ಡ್ ನೀರನ್ನು ನೀಡಲು ನಿರ್ಧರಿಸಿದೆ. ರೈಲ್ವೆ ಮಂಡಳಿಯು ಹೊರಡಿಸಿರುವ ಆದೇಶದ ಪ್ರಕಾರ, ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಜನರಲ್ ಕೋಚ್ ಎದುರು ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುವುದು. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ಪಾನೀಯ ಇಲ್ಲಿ ದೊರಕಲಿದೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.

ಇದನ್ನೂ ಓದಿ: ಜುಲೈ 27ಕ್ಕೆ ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಖಾಸಗಿ ಬಸ್ – ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್‌ಗೆ ಕರೆ

ಸಾಮಾನ್ಯವಾಗಿ ಜನರಲ್ ಬೋಗಿಗಳಲ್ಲಿ ಜನದಟ್ಟಣೆ ಹಾಗೂ ಸೀಟು ಸಮಸ್ಯೆಯಿಂದಾಗಿ ಪ್ರಯಾಣಿಕರು ಕೋಚ್ ನಿಂದ ಕೆಳಗಿಳಿಯಲು ಸಾಧ್ಯವಾಗುತ್ತಿಲ್ಲ. ಹೇಗೋ ಪ್ಲಾಟ್ ಫಾರಂ ಮೇಲೆ ಇಳಿದರೂ ಕ್ಯಾಟರಿಂಗ್ ಸ್ಟಾಲ್ ತಲುಪುವಷ್ಟರಲ್ಲಿ ರೈಲು ಹೊರಡಲು ಶುರುವಾಗುತ್ತದೆ. ಇದರಿಂದಾಗಿ ಹಲವು ಬಾರಿ ಪ್ಲಾಟ್‌ಫಾರ್ಮ್‌ಗೆ ಇಳಿದರೂ ಪ್ರಯಾಣಿಕರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಹೊಸ ಸೌಲಭ್ಯ ನೀಡಲಾಗುತ್ತಿದೆ.

ಈ ಹೊಸ ಯೋಜನೆಯಲ್ಲಿ ರೈಲ್ವೇ ನಿಲ್ದಾಣದಲ್ಲಿ 20 ರೂಪಾಯಿಗೆ ಪೂರಿ, ತರಕಾರಿ ಪಲ್ಯ ಮತ್ತು ಉಪ್ಪಿನಕಾಯಿ ನೀಡುವ ಯೋಜನೆ ಇದೆ. ಇದು 7 ಪೂರಿ ಮತ್ತು 150 ಗ್ರಾಂ ತರಕಾರಿಗಳನ್ನು ಹೊಂದಿರುತ್ತದೆ. ಈ ಸೌಲಭ್ಯದ ಪರಿಚಯದಿಂದ ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಇದಲ್ಲದೆ, ಲಘು ಊಟದ ಬೆಲೆ 50 ರೂ. ಆಗಿರಲಿದೆ. ಈ ಊಟದಲ್ಲಿ ರಾಜ್ಮಾ-ಅನ್ನ, ಖಿಚಡಿ, ಕುಲ್ಚೆ-ಚೋಲೆ, ಚೋಲೆ-ಭಾತುರೆ, ಪಾವ್‌ಬಾಜಿ ಅಥವಾ ಮಸಾಲೆ ದೋಸೆಯನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ ಪ್ರಯಾಣಿಕರಿಗೆ 200 ಮಿಲಿ ಲೀಟರ್ ನೀರು 3 ರೂ.ಗೆ ಸಿಗಲಿದೆ.

ರೈಲ್ವೇ ಇಲಾಖೆಯ ಹೊಸ ಸೌಲಭ್ಯ ಯಾವೆಲ್ಲಾ ನಿಲ್ದಾಣದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ನೀಡಿದೆ. ಪ್ರಸ್ತುತ ಈ ಸೌಲಭ್ಯವನ್ನು ವಾಯುವ್ಯ ರೈಲ್ವೆಯ ಫುಲೇರಾ, ಅಜ್ಮೀರ್, ರೇವಾರಿ, ಅಬು ರೋಡ್, ನಾಗೌರ್, ಜೈಪುರ, ಅಲ್ವಾರ್, ಉದಯಪುರ ಮತ್ತು ಅಜ್ಮೀರ್ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಗೋರಖ್‌ಪುರ ಜಂಕ್ಷನ್ ಸೇರಿದಂತೆ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಪ್ಲಾಟ್‌ಫಾರ್ಮ್‌ನಲ್ಲಿ ಜನರಲ್ ಕೋಚ್‌ನ ಮುಂಭಾಗದಲ್ಲಿ ಈ ಸ್ಟಾಲ್ ಅನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ.

suddiyaana