ಬೆಲೆ ಏರಿಕೆಯಿಂದ ತತ್ತರಿಸಿದ ಜನಕ್ಕೆ ಗುಡ್‌ನ್ಯೂಸ್!‌ – 29 ರೂ.ಗೆ ಸಿಗಲಿದೆ ʻಭಾರತ್‌ ಅಕ್ಕಿʼ !

ಬೆಲೆ ಏರಿಕೆಯಿಂದ ತತ್ತರಿಸಿದ ಜನಕ್ಕೆ ಗುಡ್‌ನ್ಯೂಸ್!‌ – 29 ರೂ.ಗೆ ಸಿಗಲಿದೆ ʻಭಾರತ್‌ ಅಕ್ಕಿʼ !

ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಕ್ಕಿ, ಧಾನ್ಯ ಮುಂತಾದವುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿಹೋಗಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ಒಂದನ್ನು ನೀಡಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದಲೇ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ಜೋರಾಗಿ ಮಾತಾಡಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕೇಸ್!

ಹೌದು, ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರವೇ ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೇ ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈ ಬಗ್ಗೆ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ದರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ. ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ʻಭಾರತ್‌ ಬ್ರ್ಯಾಂಡ್‌ʼ ಗೋದಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟವಾಗುತ್ತಿದೆ. ಗೋದಿ ಹಿಟ್ಟು ಪ್ರತಿ ಕೆ.ಜಿಗೆ 27.50 ರೂ. ಕಡಲೆ ಬೇಳೆ ಪ್ರತಿ ಕೆ.ಜಿಗೆ 60 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಅಕ್ಕಿಯೂ ಮಾರಾಟವಾಗಲಿದೆ. ಪ್ರತಿ ಕೆಜಿ ಅಕ್ಕಿಗೆ 29 ರೂ. ನಿಗದಿಪಡಿಸಲಾಗಿದೆ. 5 ಕೆಜಿ ಮತ್ತು 10 ಕೆಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತ್‌ ಬ್ಯಾಂಡ್‌ ಅಕ್ಕಿ ಎಲ್ಲಿ ಮಾರಾಟ?

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ, ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟಕ್ಕೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

Shwetha M