ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ಮೌಲ್ಯಮಾಪನದಲ್ಲಿ ತಿದ್ದುಪಡಿ  

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ಮೌಲ್ಯಮಾಪನದಲ್ಲಿ ತಿದ್ದುಪಡಿ  

ಬೆಂಗಳೂರು: ದ್ವಿತೀಯ ಪಿಯುಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಶೇ. 6 ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಮಾತ್ರ ಅದನ್ನು ಪರಿಗಣಿಸಲಾಗುತ್ತಿತ್ತು. ಶೇ.6ಕ್ಕಿಂತ ಕಡಿಮೆ ಅಂಕಗಳು ಬಂದಲ್ಲಿ ಪರಿಗಣಿಸುತ್ತಿರಲಿಲ್ಲ. ಇದೀಗ ರಾಜ್ಯ ಸರ್ಕಾರ ವಿದ್ಯಾರ್ಥಿ ಸ್ನೇಹಿ ಕ್ರಮವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ “ಒಂದು ಅಂಕ” ಹೆಚ್ಚು ಬಂದರೂ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ:ದೇಶದಲ್ಲೇ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪ ಪತ್ತೆ – ಏನೆಲ್ಲಾ ಉಪಯೋಗ?

ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2023ರ ಮಾರ್ಚ್‌ನಲ್ಲಿ ನಡೆಯುವ ‘ವಾರ್ಷಿಕ ಪರೀಕ್ಷೆ’ಯಿಂದ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಪತ್ರಿಕೆಯ ಒಟ್ಟು ಅಂಕದ ಶೇ.6ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಶೇ.6ಕ್ಕಿಂತ ಕಡಿಮೆ ಅಂಕಗಳು ಬಂದಲ್ಲಿ ಪರಿಗಣಿಸುತ್ತಿರಲಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅಂಕವು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಒಂದು ಅಂಕ’ವನ್ನೂ ಪರಿಗಣಿಸುವ ‘ವಿದ್ಯಾರ್ಥಿ ಸ್ನೇಹಿ’ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈ ಸಂಬಂಧ ಶೀಘ್ರದಲ್ಲೇ ‘ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು-1997’ಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದ್ದಾರೆ.

suddiyaana