ಶಾಲಾ ಮಕ್ಕಳಿಗೆಗುಡ್‌ ನ್ಯೂಸ್‌ – ಬ್ಯಾಗ್‌ ಹೊರೆ ಇಳಿಸಿದ ಶಿಕ್ಷಣ ಇಲಾಖೆ

ಶಾಲಾ ಮಕ್ಕಳಿಗೆಗುಡ್‌ ನ್ಯೂಸ್‌ – ಬ್ಯಾಗ್‌ ಹೊರೆ ಇಳಿಸಿದ ಶಿಕ್ಷಣ ಇಲಾಖೆ

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್​ನ ಭಾರ ತಗ್ಗಿಸುವ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಶಾಲಾ ಮಕ್ಕಳ ಬ್ಯಾಗ್‌ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕ ಇಂತಿಷ್ಟೇ ಇರಬೇಕಕು ಎಂದು ಶಿಕ್ಷಣ ಇಲಾಖೆ ನಿಗದಿ ಮಾಡಿದೆ.

ಶಾಲಾ ಮಕ್ಕಳ ಬ್ಯಾಗ್‌ ಹೊರೆ ಇಳಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ – ಚೆನ್ನೈನಿಂದ ಬರಲಿದೆ ರಾಶಿ ರಾಶಿ ಮೀನು..!

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ 1ರಿಂದ 2ನೇ ತರಗತಿಯ ಮಕ್ಕಳಿಗೆ 1.5ರಿಂದ 2 ಕೆ.ಜಿ, 3ರಿಂದ 5ನೇ ತರಗತಿ 2ರಿಂದ 3 ಕೆ.ಜಿ, 6 ರಿಂದ 8 ನೇ ತರಗತಿ 3 ರಿಂದ 4 ಕೆ.ಜಿ ಹಾಗೂ 9ರಿಂದ 10ನೇ ತರಗತಿಯ ಮಕ್ಕಳಿಗೆ 4 ರಿಂದ 5 ಕೆ.ಜಿ.ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ. ಶಾಲಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಅಂದಿನ ಪಠ್ಯಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಮಾತ್ರ ತರುವಂತೆ ನೋಡಿಕೊಳ್ಳಬೇಕು. 200 ಪುಟ ಮೀರದ ನೊಟ್‌ಬುಕ್‌ ಬಳಸಲು ಸೂಚಿಸಬೇಕು. ಶಾಲೆಗಳಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಬ್ಯಾಗ್ ಹೊರೆಯಿಂದ ಆಗುವ ದುಷ್ಪರಿಣಾಮಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವ ಶಿಕ್ಷಕರು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸರ್ಕಾರವು 2019ರಲ್ಲಿಯೇ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿದೆ. ಆದರೂ ಬಹುತೇಕ ಶಾಲೆಗಳು ವೇಳಾಪಟ್ಟಿಯನ್ನು ನಿಗದಿ ಮಾಡದ ಪರಿಣಾಮ ಮಕ್ಕಳು ಬೆನ್ನುಮೂಳೆ ಮುರಿಯುವಂತೆ ಪುಸ್ತಕಗಳನ್ನು ಹೊರುವಂತಾಗಿದೆ. ಶೈಕ್ಷಣಿಕ ವರ್ಷಾರಂಭ ಹಿನ್ನೆಲೆ ಕಡ್ಡಾಯವಾಗಿ ‘ಶಾಲಾ ಬ್ಯಾಗ್ ಹೊರೆ ತಗ್ಗಿಸುವಂತೆ’ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಅಧ್ಯಯನ ನಡೆಸಿ 1-10ನೇ ಕ್ಲಾಸ್ ಮಕ್ಕಳ ಬ್ಯಾಗ್ ತೂಕ ಎಷ್ಟು ಇರಬೇಕು ಎಂಬುದನ್ನು ಸೂಚಿಸಿದೆ. ವಿದ್ಯಾರ್ಥಿಗಳ ದೇಹದ ತೂಕದ ಶೇ.10ರಿಂದ 15 ರಷ್ಟು ಮಾತ್ರ ಶಾಲಾ ಬ್ಯಾಗ್ ತೂಕವಿರಬೇಕು ಎಂದು ಶಿಫಾರಸು ಮಾಡಿದ್ದು, ಇದನ್ನು ಮೂಳೆತಜ್ಞರು ಕೂಡ ಅಂಗೀಕರಿಸಿದ್ದಾರೆ.

suddiyaana