ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನಿಸ್ತಾನ ಧೂಳಿಪಟ – ಗ್ಲೇನ್ ಮ್ಯಾಕ್ಸ್ವೆಲ್ ದಾಖಲೆಯ ಭರ್ಜರಿ ದ್ವಿಶತಕ
ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನೋಡಿದವರಿಗೆ ನಿಜಕ್ಕೂ ಕ್ರಿಕೆಟ್ ಹಬ್ಬವನ್ನೇ ನೋಡಿದ ಅನುಭವ. ಗ್ಲೇನ್ ಮ್ಯಾಕ್ಸ್‌ವೆಲ್ ಬೆಂಕಿ ಆಟಕ್ಕೆ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರೆ, ಅಫ್ಘನ್ನರು ಸರಿಯಾಗಿ ಹೊಡೆಸಿಕೊಂಡು ಹೈರಾಣಾಗಿ ಹೋಗಿದ್ದರು. ಮ್ಯಾಕ್ಸಿ ಹೊಡೆದ ಭರ್ಜರಿ ದ್ವಿಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಂದ್ಯಗೆದ್ದು ಸೆಮೀಸ್ ಪ್ರವೇಶಿಸುವ ಆಸೆಯಲ್ಲಿದ್ದ ಅಫ್ಘಾನಿಸ್ತಾನ ತಂಡದ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: ಫಸ್ಟ್ ಟೈಮ್.. TIMED OUT! – ಒಂದೂ ಎಸೆತ ಎದುರಿಸಿದೇ ಔಟ್ ಆದ ಮೊದಲ ಕ್ರಿಕೆಟಿಗ..!
ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2023 ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ ಅಜೇಯ 201 ರನ್ ಸಿಡಿಸಿದ್ದಾರೆ. ಇದರ ಜೊತೆ ಹಲವು ದಾಖಲೆಗಳನ್ನೂ ಸಹ ನಿರ್ಮಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಗ್ಲೆನ್ 21 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ದ್ವಿಶತಕದೊಂದಿಗೆ ಗ್ಲೆನ್ ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಾರ್ಟಿನ್ ಗಪ್ಟಿಲ್ ಮತ್ತು ಕ್ರಿಸ್ ಗೇಲ್ ನಂತರ ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್‌ನಲ್ಲಿ ಚೇಸಿಂಗ್ ಮಾಡುವಾಗ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಗ್ಲೆನ್, 12 ವರ್ಷಗಳ ಹಿಂದೆ ವಿಶ್ವಕಪ್ ಚೇಸ್ನಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನೂ ಮುರಿದಿದ್ದಾರೆ. 2011ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧ ಸ್ಟ್ರಾಸ್ 158 ರನ್ ಗಳಿಸಿದ್ದರು. ಇದೀಗ ಈ ದಾಖಲೆ ಮ್ಯಾಕ್ಸ್‌ವೆಲ್ ಪಾಲಾಗಿದೆ. ಈ ಹಿಂದೆ 2015 ರ ವಿಶ್ವಕಪ್ನಲ್ಲಿ ಇದೇ ಅಫ್ಘಾನಿಸ್ತಾನ ವಿರುದ್ಧ ಡೇವಿಡ್ ವಾರ್ನರ್ 178 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಆ ದಾಖಲೆಯನ್ನು ಗ್ಲೆನ್ ಮುರಿದಿದ್ದಾರೆ. 1983 ರ ವಿಶ್ವಕಪ್‌ನಲ್ಲಿ 6ನೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 175 ರನ್ ಸಿಡಿಸಿದ್ದ ಕಪಿಲ್ ದೇವ್ ಅವರ ದಾಖಲೆಯನ್ನೂ ಮ್ಯಾಕ್ಸ್‌ವೆಲ್ ಮುರಿದಿದ್ದಾರೆ.