ದಿವಾಳಿ ಆಗುತ್ತಾ ಪಾಕ್ ಕ್ರಿಕೆಟ್? ‘ಅಧಿಕಾರ ಕೊಡಿ, ಇಲ್ಲ.. ರಾಜೀನಾಮೆ’
ರಿಜ್ವಾನ್, ಬಾಬರ್ ಸಿಡಿದೆದ್ದಿದ್ದೇಕೆ?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಮುಜುಗರ ಎದುರಾಗಿದೆ. ಈ ಬಾರಿ ಪಿಸಿಬಿ ವಿರುದ್ಧವೇ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ತಿರುಗಿ ಬಿದ್ದಿದ್ದಾರೆ. ಪ್ರಮುಖವಾಗಿ ಮಾಜಿ ನಾಯಕರಾದ ಮಹಮದ್ ರಿಜ್ವಾನ್ ಮತ್ತು ತಂಡದ ಸ್ಟಾರ್ ಆಟಗಾರ ಬಾಬರ್ ಆಜಂ ಪಿಸಿಬಿ ವಿರುದ್ಧ ಕಿಡಿಕಾರಿದ್ದು, ನಮಗೆ ಹೆಚ್ಚುವರಿ ಅಧಿಕಾರ ಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಟಿ20 ಸರಣಿ ಸೋಲು ಬೆನ್ನಲ್ಲೇ ಏಕದಿನ ಸರಣಿಯಲ್ಲೂ ವೈಟ್ ವಾಶ್ ಸರಣಿ ಸೋಲು ಕಂಡಿತ್ತು. ಈ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಮುಖವಾಗಿ ತಂಡದ ಸ್ಟಾರ್ ಆಟಗಾರರ ವಿರುದ್ಧ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಂಡದ ಆಯ್ಕೆಯೇ ಸರಿ ಇಲ್ಲ.. ನಮಗೆ ಹೆಚ್ಚು ಅಧಿಕಾರ ಕೊಡಿ’
ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ನ ಯುವ ಆಟಗಾರರು ಭಾಗಿಯಾಗಿದ್ದು, ಈ ಅನನುಭವಿ ಆಟಗಾರರ ವಿರುದ್ಧವೂ ಪಾಕಿಸ್ತಾನ ಅನುಭವಿ ತಂಡ ಸೋತು ಸುಣ್ಣವಾಗಿದೆ. ಮೊದಲು 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಸೋತಿದ್ದ ಪಾಕಿಸ್ತಾನ ಬಳಿಕ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನೂ 3-0 ಅಂತರದಲ್ಲಿ ಕಳೆದುಕೊಂಡಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿನ ಕಹಿ ಅನುಭವದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಹಿರಿಯ ಆಟಗಾರರು ಪಿಸಿಬಿ ಮತ್ತು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರುತ್ತಿದ್ದಾರೆ. ತಂಡದ ಇಂದಿನ ಹೀನಾಯ ಪರಿಸ್ಥಿತಿಗೆ ಪಿಸಿಬಿ ಮತ್ತು ಆಯ್ಕೆ ಸಮಿತಿ ಕಾರಣ. ನಮಗೆ ಸೂಕ್ತ ತಂಡವನ್ನು ಕಲ್ಪಿಸುತ್ತಿಲ್ಲ. ತಂಡದ ಆಯ್ಕೆ ಪ್ರಕ್ರಿಯೆಲ್ಲಿ ನಮಗೂ ಅಧಿಕಾರ ಬೇಕು ಎಂದು ಪಾಕಿಸ್ತಾನದ ನಾಯಕ ಮಹಮದ್ ರಿಜ್ವಾನ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಮಹಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ರಾಜಿನಾಮೆ ನೀಡುತ್ತಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.