ರಮ್ಮಿ ಆಡಲು ಲಕ್ಷ ಲಕ್ಷ ಸಾಲ ಮಾಡಿದ – ಸಾಲ ತೀರಿಸಲು ಕದ್ದ ಎಳನೀರು ಸೇಲ್‌ ಮಾಡಿ ಸಿಕ್ಕಿಬಿದ್ದ!

ರಮ್ಮಿ ಆಡಲು ಲಕ್ಷ ಲಕ್ಷ ಸಾಲ ಮಾಡಿದ – ಸಾಲ ತೀರಿಸಲು ಕದ್ದ ಎಳನೀರು ಸೇಲ್‌ ಮಾಡಿ ಸಿಕ್ಕಿಬಿದ್ದ!

ಕಳ್ಳರು ಹೆಚ್ಚಾಗಿ ಬ್ಯಾಂಕ್‌ಗಳಲ್ಲಿ, ಚಿನ್ನಾಭರಣ ಮಳಿಗೆಗಳಲ್ಲಿ, ಶ್ರೀಮಂತರ ಮನೆಗಳಲ್ಲಿ ಹೆಚ್ಚಾಗಿ ಕಳ್ಳತನ ಮಾಡುತ್ತಾರೆ. ಇನ್ನೂ ಕೆಲವರು ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಚಿನ್ನಾಭರಣ ದೋಚುತ್ತಾರೆ. ಕದ್ದ ಕೂಡಲೇ ಅದನ್ನ ಮಾರಾಟ ಮಾಡುತ್ತಾರೆ. ಇಲ್ಲೂ ಒಬ್ಬ ಕಳ್ಳತನದ ಮಾರ್ಗ ಹಿಡಿದಿದ್ದಾನೆ. ಆತ ಕಳ್ಳತನ ಮಾಡಿರುವುದು ಹಣ, ಚಿನ್ನಾಭರಣವಲ್ಲ. ಅಸಲಿಗೆ ಆತ ಕದ್ದಿರುವುದು ಎಳನೀರನ್ನು.

ಹೌದು, ಈ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಮೋಹನ್​ ಎಂಬಾತ ಎಳನೀರನ್ನು ಕಳ್ಳತನ ಮಾಡಿ, ಬಳಿಕ ಅದನ್ನು ಮಾರಾಟ ಮಾಡುತ್ತಿದ್ದ. ಇದೀಗ ಆತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹಾವು ಕಚ್ಚಿತೆಂದು ಆಸ್ಪತ್ರೆಗೆ ಓಡೋಡಿ ಬಂದ.. – ಆತನ ಕೈಯಲ್ಲಿದ್ದ ಚೀಲ ನೋಡಿ ವೈದ್ಯರೇ ಶಾಕ್!‌

ಕೃತ್ಯ ಬಯಲಾಗಿದ್ದು ಹೇಗೆ?

ವ್ಯಾಪಾರಿ ರಾಜಣ್ಣ ಎಂಬುವರು ಕೆಲವು ದಿನಗಳ ಹಿಂದೆ ಮಾರಾಟ ಮಾಡಲು 12 ಸಾವಿರ ಎಳನೀರು ತಂದಿದ್ದರು. ಆದರೆ ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಎಳನೀರು ಕಾಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಗಿರಿನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಗಿರಿನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಪೊಲೀಸರು ಕಳ್ಳತನಕ್ಕೆ ಬಳಸಿದ್ದ ಕಾರು, ಒಂದು ನ್ ಫೀಲ್ಡ್ ಬೈಕ್​ ಸಹಿತ 8 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ.

3 ತಿಂಗಳಿನಿಂದ ಕಳ್ಳತನದಲ್ಲಿ ತೊಡಗಿದ್ದ ಆರೋಪಿ!

ಮೋಹನ್‌ ರಾತ್ರಿ ವೇಳೆ ಎಳನೀರನ್ನು ಕದಿಯುತ್ತಿದ್ದನು. ಕಾರ್​ನಲ್ಲಿ ಬಂದು ರಸ್ತೆಯ ಪಕ್ಕ ಇಟ್ಟ ಎಳನೀರುಗಳನ್ನು ಕದಿಯುತ್ತಿದ್ದನು. ಬಳಿಕ ಅದನ್ನು ಬೆಳಗ್ಗೆ ಮಾರಾಟ ಮಾಡುತ್ತಿದ್ದ. ‌ಕಳೆದ ಮೂರು ತಿಂಗಳಿನಿಂದ ಆತ ಎಳನೀರನ್ನು ಕಳ್ಳತನ ಮಾಡುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

ಕಳ್ಳತನದ ಹಿಂದಿನ ಕಹಾನಿ ಏನು?

ಈ ಹಿಂದೆ ಮೋಹನ್​ ಎಳನೀರು ವ್ಯಾಪಾರಿಯಾಗಿದ್ದನು. ಬಿಡುವಿನ ಸಮಯದಲ್ಲಿ ರಮ್ಮಿ ಆಟವಾಡಿ ಲಕ್ಷ ಲಕ್ಷ ರೂ. ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಕಾರ್ ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸಲು ಆರಂಭಿಸಿದನು. ಹೀಗೆ ಒಂದು ರಾತ್ರಿ ಕಾರಿನಲ್ಲಿ ಹೋಗುವಾಗ ಎಳನೀರು ನೋಡಿದ್ದಾನೆ. ಆಗ ಮೋಹನ್​​​ಗೆ ಕಳ್ಳತನದ ಪ್ಲ್ಯಾನ್ ಹೊಳೆದಿದೆ. ಕದ್ದ ಎಳನೀರನ್ನು ಮಾರಲು ಗ್ರಾಹಕರನ್ನು ಸಹ ಹುಡುಕಿಕೊಂಡಿದ್ದನು. ಪ್ಯ್ಲಾನ್​ ಪ್ರಕಾರ ಎಲ್ಲ ಸೆಟ್​ ಆದ ಮೇಲೆ ಪ್ರತಿರಾತ್ರಿ 100 ಎಳನೀರನ್ನು ಕದ್ದು ಕ್ಯಾಬ್​ನಲ್ಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದನು. ಬೆಳಗ್ಗೆ ಎಳನೀರನ್ನು ಮಾರಿ ಹಣ ಪಡೆಯುತ್ತಿದ್ದನು. ಇದೇ ರೀತಿ ಕಳೆದ ಮೂರು ತಿಂಗಳಿಂದ ಕಳ್ಳತನ ಮಾಡುತ್ತಿದ್ದನು. ಎಳನೀರು ಕಳೆದುಕೊಂಡು ವ್ಯಾಪಾರಿಗಳು ಯಾರು ದೂರು ನೀಡಲು ಮುಂದಾಗಿರಲಿಲ್ಲ. ಕೊನೆಗೆ ರಾಜಣ್ಣ ಎಂಬುವವರು ದೂರು ಕೊಟ್ಟ ಬಳಿಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

Shwetha M