ಶುಂಠಿ ಟೀ ಇಷ್ಟನಾ? – ಬೇಸಿಗೆಗಾಲದಲ್ಲಿ ಇದನ್ನ ಕುಡಿದ್ರೆ ಕತೆ ಗೋವಿಂದಾ?

ಬೇಸಿಗೆ ಕಾಲ ಆರಂಭವಾಗಿದೆ. ಈ ಸೀಸನ್ನಲ್ಲಿ ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪಾ ಆಹಾರ ಪದ್ಧತಿ ಅನುಸರಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆರೋಗ್ಯಕರ ಆಹಾರ”ದ ಜೊತೆಗೆ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ಅನೇಕ ಮಂದಿ ಈ ಸೀಸನ್ನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಆದರೆ ನಿಮ್ಮ ಈ ಅಭ್ಯಾಸ ನಿಮಗೆ ಹಾನಿಯುಂಟು ಮಾಡುತ್ತದೆ. ಇದ್ರಲ್ಲಿ ಟೀ ಕುಡಿಯುವುದು ಕೂಡ ಒಂದು. ಬೇಸಿಗೆ ಕಾಲದಲ್ಲಿ ಟೀ ಕುಡಿಯೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡೋರಿಗೆ ಅಡ್ವಾಂಟೇಜ್ – ಆರ್ ಸಿಬಿ ಗೆಲ್ಲುತ್ತಾ?
ಹೌದು, ಬೇಸಿಗೆಯಲ್ಲಿ, ಹೆಚ್ಚಿನ ಜನರು ತಾಪಮಾನ ಹೆಚ್ಚಾಗುವುದರಿಂದ ತಲೆನೋವು, ಆಯಾಸ ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೂ ಕೂಡ ಚಹಾ, ಕಾಫಿ, ಸೇವನೆ ಮಾಡುವುದನ್ನು ಬಿಡುವುದಿಲ್ಲ. ಈ ರೀತಿಯ ಬಿಸಿಯಾಗಿರುವ ಪಾನೀಯಗಳು ಕೆಲವೊಮ್ಮೆ ದೇಹದಲ್ಲಿ ಶಾಖ ಹೆಚ್ಚಾಗುವಂತೆ ಮಾಡುತ್ತದೆ. ಪರಿಣಾಮವಾಗಿ, ಒತ್ತಡ, ಅಸ್ವಸ್ಥತೆ ಮತ್ತು ಅತಿಯಾದ ಬೆವರುವಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳು ವಯಸ್ಸಾದವರು, ಚಿಕ್ಕ ಮಕ್ಕಳು ಮತ್ತು ದೇಹ ಸ್ವಲ್ಪ ತೆಳ್ಳಗಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಮಾಸಗಳಲ್ಲಿ ಸಾಧ್ಯವಾದಷ್ಟು ದೇಹವನ್ನು ತಂಪಾಗಿಡುವುದು ಅವಶ್ಯಕ. ಆದ ಕಾರಣ ಚಹಾ, ಕಾಫಿ ಅದರಲ್ಲಿಯೂ ಶುಂಠಿ ಚಹಾದ ಬಳಕೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ.
ಗ್ಯಾಸ್, ಆಮ್ಲೀಯತೆ, ಅಜೀರ್ಣಕ್ಕೆ ಕಾರಣವಾಗಬಹುದು
ಶುಂಠಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದರಿಂದ ಚಹಾ ಮಾಡಿ ಸೇವನೆ ಮಾಡುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಇದನ್ನು ದಿನದಲ್ಲಿ ಹೆಚ್ಚು ಹೆಚ್ಚು ಬಾರಿ ಕುಡಿಯುವುದರಿಂದ ಗ್ಯಾಸ್, ಆಮ್ಲೀಯತೆ, ಅಜೀರ್ಣ, ಎದೆಯುರಿಯಂತಹ ಸಮಸ್ಯೆಗಳು ಉಂಟಾಗಬಹುದು.ಈಗಾಗಲೇ ತಾಪಮಾನ ಹೆಚ್ಚಾಗಿರುವುದರಿಂದ ಶುಂಠಿ ಚಹಾ ಈ ಸಮಯಕ್ಕೆ ಒಳ್ಳೆಯದಲ್ಲ.
ತಲೆನೋವು, ಆಯಾಸ ಉಂಟಾಗಬಹುದು
ಬೇಸಿಗೆಯಲ್ಲಿ, ದೇಹ ಬೆವರುವುದರಿಂದ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಬಿಸಿ ಬಿಸಿಯಾಗಿರುವ ಶುಂಠಿ ಚಹಾವನ್ನು ಕುಡಿಯುವುದರಿಂದ ಇದು ದೇಹದಲ್ಲಿನ ನೀರಿನ ಅಂಶವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಇದು ನಿರ್ಜಲೀಕರಣ, ತಲೆನೋವು, ಆಯಾಸ, ಅತಿಯಾದ ಬಾಯಾರಿಕೆ ಮತ್ತು ದೇಹದಲ್ಲಿ ದೌರ್ಬಲ್ಯಕ್ಕೂ ಕಾರಣವಾಗಬಹುದು. ಅತಿಯಾಗಿ ಹೊರಗೆ ಹೋಗುವವರು ಅಥವಾ ನೀರು ಕುಡಿಯದವರು ಈ ರೀತಿಯ ಸಮಸ್ಯೆಗೆ ಒಳಗಾಗುತ್ತಾರೆ.
ನಿದ್ರಾಹೀನತೆಗೆ ಕಾರಣವಾಗಬಹುದು
ಬೇಸಿಗೆಯಲ್ಲಿ ಶುಂಠಿ ಚಹಾವನ್ನು ಪದೇ ಪದೇ ಕುಡಿಯುವುದರಿಂದ ಕೆಲವರಿಗೆ ಅತಿಸಾರ, ಕರುಳಿನ ಸಮಸ್ಯೆಗಳು, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಮತ್ತು ಚರ್ಮದ ಅಲರ್ಜಿಗಳಂತಹ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ಶುಂಠಿ ಚಹಾವನ್ನು ರಾತ್ರಿ ಸಮಯದಲ್ಲಿ ಕುಡಿಯುವುದರಿಂದ, ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಬಹುದು. ಇದಲ್ಲದೆ, ಅಲರ್ಜಿ ಮತ್ತು ಉಸಿರಾಟ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಬೇಸಿಗೆಯಲ್ಲಿ ಶುಂಠಿ ಚಹಾದ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.
ರಕ್ತವನ್ನು ತೆಳುಗೊಳಿಸುತ್ತದೆ
ಶುಂಠಿ ಚಹಾವು ರಕ್ತ ತೆಳುವಾಗಲು ಕಾರಣವಾಗಬಹುದು. ಹಾಗಾಗಿ ಇದು ಚಳಿಗಾಲಕ್ಕೆ ಒಳ್ಳೆಯದಾಗಿದ್ದು ಬೇಸಿಗೆ ಸಮಯದಲ್ಲಿ ಸೇವನೆ ಮಾಡುವುದು ಹಾನಿಕಾರಕವಾಗಿದೆ. ಅದರಲ್ಲಿಯೂ ರಕ್ತ ತೆಳುಗೊಳಿಸುವ ಔಷಧಿಗಳನ್ನು ಬಳಸುವವರು ಬಹಳ ಜಾಗರೂಕರಾಗಿರಬೇಕು. ಚಳಿಗಾಲಕ್ಕೆ ಬಹಳ ಉಪಯುಕ್ತವಾಗಿರುವ ಪಾನೀಯ ಬೇಸಿಗೆ ಸಮಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮಿತವಾಗಿ ಕುಡಿಯುವುದು ಅಥವಾ ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಬಹಳ ಉತ್ತಮ.