ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಗಿಲ್ ಕ್ಯಾಪ್ಟನ್ – ರೋಹಿತ್ ಶರ್ಮಾ ಇದ್ದರೂ ನಾಯಕನ ಸ್ಥಾನವಿಲ್ಲ..!

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಏಕದಿನ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದ್ದು, ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ಗೆ ನಾಯಕನ ಪಟ್ಟ ಕಟ್ಟಲಾಗಿದೆ.
ಇದನ್ನೂ ಓದಿ; 3211 ದಿನಗಳ ಬಳಿಕ ಕೆಎಲ್ ರಾಹುಲ್ ಶತಕ – ಬೆರಳು ಚೀಪುತ್ತಾ ಮಗಳಿಗೆ ಶತಕ ಅರ್ಪಿಸಿದ ಕನ್ನಡಿಗ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಬಿಸಿಸಿಐ, ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ವಿಂಡೀಸ್ ವಿರುದ್ಧ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಈ ಪ್ರವಾಸ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಮೊದಲು ಏಕದಿನ ಸರಣಿ ನಡೆಯಲಿದೆ. ನವೆಂಬರ್ 8 ರಂದು ಟಿ20 ಪಂದ್ಯದೊಂದಿಗೆ ಪ್ರವಾಸ ಅಂತ್ಯವಾಗಲಿದೆ.
ಆಸೀಸ್ ಪ್ರವಾಸಕ್ಕೆ ಆಯ್ಕೆಯಾಗಿರುವ ಟಿ20 ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗದಿದ್ದರೂ, ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಆ ಪ್ರಕಾರ ತಂಡದ ನಾಯಕತ್ವವನ್ನು ಬದಲಾಯಿಸಲಾಗಿದ್ದು, ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ಗೆ ವಹಿಸಲಾಗಿದೆ. ಹಾಗೆಯೇ ತಂಡದ ಉಪನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ಗೆ ನೀಡಲಾಗಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟವಾಗಿರುವ ಎರಡೂ ತಂಡಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ಸ್ಥಾನ ನೀಡಲಾಗಿಲ್ಲ. ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕಾಲಿಗೆ ಗಂಭೀರವಾಗಿ ಗಾಯಮಾಡಿಕೊಂಡಿದ್ದ ಪಂತ್ ಪ್ರಸ್ತುತ ಚೇತರಿಕೆಯ ಹಂತದಲಿದ್ದಾರೆ. ಹೀಗಾಗಿ ಅವರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ತಂಡದ ಮೊದಲ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದು, ಧ್ರುವ್ ಜುರೇಲ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಅಂದರೆ ರಾಹುಲ್ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವುದು ಖಚಿತವಾಗಿದೆ. ಇತ್ತ ಟಿ20 ತಂಡದಲ್ಲಿ ಜಿತೇಶ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ಗಳಾಗಿ ಆಯ್ಕೆಯಾಗಿದ್ದಾರೆ.

ನೋಡಿರಿ

