ಗಿಚ್ಚಿಗಿಲಿಗಿಲಿ ವೇದಿಕೆಯಲ್ಲಿ ಮದುವೆಯಾದ ಚಂದ್ರಪ್ರಭಾಗೆ ಸಿಕ್ತು ವಿನ್ನರ್ ಪಟ್ಟ..!

ಗಿಚ್ಚಿಗಿಲಿಗಿಲಿ ವೇದಿಕೆಯಲ್ಲಿ ಮದುವೆಯಾದ ಚಂದ್ರಪ್ರಭಾಗೆ ಸಿಕ್ತು ವಿನ್ನರ್ ಪಟ್ಟ..!

ಮಜಾಟಾಕೀಸ್, ಮಜಾಭಾರತ,  ಕಾಮಿಡಿ ಟಾಕೀಸ್, ಮಜಾ ವೀಕೆಂಡ್ ನಲ್ಲಿ ಮೆರೆದಾಡಿದ ಚಂದ್ರಪ್ರಭಾ ಈಗ ಗಿಚ್ಚಿಗಿಲಿ ಗಿಲಿಯಲ್ಲಿ ತನ್ನದೇ ಕಾಮಿಡಿಯ ಪ್ರಭಾವಳಿಯ ಮೂಲಕ ಗೆದ್ದು ಬೀಗಿದ್ದಾರೆ. ಚಂದ್ರಪ್ರಭಾ ವೇದಿಕೆ ಮೇಲೆ ಬಂದ್ರೆ ಅಂದ್ರೆ ಅಲ್ಲಿ ಕಾಮಿಡಿಯ ಕಚಗುಳಿಯಿರುತ್ತೆ. ಚಂದ್ರಪ್ರಭಾ ಡೈಲಾಗ್ ಡೆಲಿವರಿ ಕೇಳಿದ್ರೆ ಮನಸಾರೆ ನಕ್ಕು ನಕ್ಕು ಖುಷಿಪಡೋದಂತೂ ಗ್ಯಾರಂಟಿ. ಗ್ರಾಮೀಣ ಸೊಗಡಿನ ಡೈಲಾಗ್ , ಅಪ್ಪಟ ಹಳ್ಳಿಯ ಹೈದನಂತೆ ಮಾತಾಡೋ ಶೈಲಿ, ವಿಭಿನ್ನರೀತಿಯ ಹೇರ್ ಸ್ಟೈಲ್, ಹಾಸ್ಯಕ್ಕೆ ತಕ್ಕಂತೆ ಮಾಡೋ ಬಾಡಿ ಲಾಂಗ್ವೇಜ್ ನಿಂದ ಚಂದ್ರಪ್ರಭಾ ಎಲ್ಲರ ಫೆವರೇಟ್ ಕಾಮಿಡಿ ಹೀರೋ ಆಗಿದ್ದಾರೆ. ಈಗ ಗಿಚ್ಚಿ ಗಿಲಿಗಿಲಿ ಸೀಸನ್ -2 ವಿನ್ ಆಗುವ ಮೂಲಕ ಮತ್ತೊಮ್ಮೆ ತಾನೆಂಥಾ ಕಾಮಿಡಿ ಕಲಾವಿದ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಅಂಬಿ ಮಗನ ಮದುವೆ – ರಜಿನಿಕಾಂತ್, ಸುಹಾಸಿನಿ ಸೇರಿದಂತೆ ಗಣ್ಯರಿಂದ ಶುಭಾಶಯ

ಗಿಚ್ಚಿ ಗಿಲಿಗಿಲಿ ಸೀಸನ್ -2 ವಿನ್ನರ್ ಆಗುವ ಮೊದಲು ಚಂದ್ರಪ್ರಭಾ, ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೇ ಮದುವೆ ಕೂಡಾ ಆದರು. ಕೆಲದಿನಗಳ ಹಿಂದೆ ವಿವಾಹವಾಗಿದ್ದರೂ ಕೂಡಾ ಯಾರಿಗೂ ಹೇಳಿಲ್ಲ ಅನ್ನೋ ಬೇಸರವನ್ನು ಅನೇಕರು ಹೊರಹಾಕಿದ್ದರು. ಅಭಿಮಾನಿಗಳು ಕೂಡಾ ಚಂದ್ರಪ್ರಭಾ ಮದುವೆ ನೋಡಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಹೀಗಾಗಿಯೇ ತಾನು ಮೆಚ್ಚಿ ಮದುವೆಯಾದ ಮಡದಿ ಭಾರತಿ ಪ್ರಿಯಾ ಜೊತೆ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮದುವೆಯಾದರು.

ಬಹುತೇಕ ಹಾಸ್ಯಕಲಾವಿದರ ಬಾಳಲ್ಲಿ ನಗುವಿನ ಲಾಸ್ಯ ಹುಟ್ಟಿರೋದು ಬಡತನದಿಂದಲೇ.. ಚಂದ್ರಪ್ರಭಾ ಅವ್ರ ಜೀವನ ಕೂಡಾ ಇದರಿಂದ ಹೊರತೇನಲ್ಲ. ಈಸಬೇಕು ಇದ್ದು ಜೈಸಬೇಕು.. ಬಾಳಿನಲ್ಲಿ ಎಲ್ಲರನ್ನೂ ನಗಿಸಬೇಕು ಅಂತಾ ತನ್ನಲ್ಲಿ ಅದೆಷ್ಟೇ ನೋವಿದ್ದರೂ ಬೇರೋಬ್ಬರ ಮುಖದಲ್ಲಿ ನಗುತರೋ ಮುಗ್ಧಮನಸಿನ ಚಂದ್ರಪ್ರಭಾ ಎಲ್ಲರಿಗೂ ಇಷ್ಟವಾಗ್ತಾರೆ. ಇವರ ಬದುಕಿನಲ್ಲಿ ಅನೇಕ ಸಂಘರ್ಷಗಳನ್ನ ಕಂಡಿದ್ದಾರೆ. ತನ್ನ ಬಾಳಲ್ಲಿ ಅನೇಕ ರೋಚಕ ತಿರುವು ಬಂದರೂ ಬೇರೆಯವರನ್ನ ನಗಿಸೋದನ್ನ ಮರೆತಿಲ್ಲ ಇವರು. ಶ್ರೀರಂಗಪಟ್ಟಣದ ದೊಡ್ಡೇಗೌಡನ ಕೊಪ್ಪಲಿನ ಚಂದ್ರಪ್ರಭಾ ಈಗ ಒಬ್ಬ ಹಾಸ್ಯಕಲಾವಿದನಾಗಿ ಗುರುತಿಸಿಕೊಂಡಿದ್ದರ ಹಿಂದೆ ಸಾಕಷ್ಟು ಶ್ರಮವಿದೆ. ಬದುಕಿನುದ್ದಕ್ಕೂ ಪಟ್ಟ ಕಷ್ಟದ ಕಥೆಯಿದೆ. ಓದು ತಲೆಗೆ ಹತ್ತಲಿಲ್ಲ. ಹೀಗಾಗಿ ಬರೀ ಹತ್ತನೆತರಗತಿಯವರೆಗೆ ಓದಿ ಅದರಲ್ಲೂ ಫೇಲ್ ಆಗಿ ತಾನೊಬ್ಬ ಕಲಾವಿದನಾಗಬೇಕು ಅನ್ನೋ ಆಸೆಯನ್ನ ತನ್ನಲ್ಲೇ ಹತ್ತಿಕ್ಕಿಕ್ಕೊಂಡಿದ್ದರು. ಹೆಚ್ಚು ಓದಿಲ್ಲದ ಕಾರಣ ಕೂಲಿ ಕೆಲಸ, ಕಬ್ಬು ಕಡಿಯೋ ಕೆಲಸ, ಗಾರೆ ಕೆಲಸ ಮಾಡಿಕೊಂಡು ತನ್ನ ಕುಟುಂಬದವರಿಗೆ ಆಧಾರವಾಗಿ ನಿಂತರು. ಆಮೇಲೆ ರೆಸಾರ್ಟ್ ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಕ್ತು. ಆದ್ರೆ, ಮನದಲ್ಲೇ ತಾನೊಬ್ಬ ಹಾಸ್ಯ ಕಲಾವಿದನಾಗಬೇಕು ಅನ್ನೋ ಛಲ ಮಾತ್ರ ಬಿಡಲಿಲ್ಲ. ಕಂಡ ಕಂಡಲ್ಲಿ ಅವಕಾಶಕ್ಕಾಗಿ ಹುಡುಕಾಡಿದ್ದರು. ಅದೇ ಹುಡುಕಾಟ ಇವತ್ತು ಒಬ್ಬ ಒಳ್ಳೇ ಕಾಮಿಡಿ ಸ್ಟಾರ್ ವರೆಗೂ ಕರೆತಂದಿದೆ.

suddiyaana