ಓಂ ಸ್ಟೈಲ್ನಲ್ಲೇ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ ಶಿವಣ್ಣ – ಘೋಸ್ಟ್ ಟೀಸರ್ ಗೆ ಜೈ ಎಂದ ಫ್ಯಾನ್ಸ್
ರಾಕಿಭಾಯ್ ರೇಂಜಲ್ಲೇ ಸಿಗರೇಟ್ಗೆ ಬೆಂಕಿ. ಓಂ ಸ್ಟೈಲ್ನಲ್ಲೇ ಕಣ್ಣಲ್ಲಿ ಕಿಡಿ. ನಾನು ಗ್ಯಾಂಗ್ ಸ್ಟರ್ ಅಂತಾನೇ ಶಿವಣ್ಣ ಮತ್ತೊಮ್ಮೆ ಅಂಡರ್ವರ್ಲ್ಡ್ಗೆ ಇಳಿದಿದ್ದಾರೆ. ಘೋಸ್ಟ್ ಸಿನಿಮಾ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನಡಿ ಬರೆದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಟೀಸರ್ ಬುಧವಾರ ರಿಲೀಸ್ ಆಗಿ.
ನಟ ಶಿವರಾಜ್ ಕುಮಾರ್ ಅವರು ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಅವರ ಬರ್ತಡೇಗೆ ಘೋಸ್ಟ್ ಸಿನಿಮಾ ತಂಡ ಭರ್ಜರಿ ಗಿಫ್ಟ್ ನೀಡಿದೆ. ಘೋಸ್ಟ್ ಸಿನಿಮಾದ ಬಿಗ್ ಡ್ಯಾಡಿ ಟೀಸರ್ ಬಿಡುಗಡೆ ಮಾಡಲಾಗಿದೆ. ಘೋಸ್ಟ್ ಟೀಸರ್ ನಲ್ಲಿ ಶಿವರಾಜ್ ಕುಮಾರ್ ಅವರ ಲುಕ್, ಸ್ಟೈಲ್ ಮತ್ತೊಮ್ಮೆ ಓಂ ಸಿನಿಮಾವನ್ನು ನೆನಪು ಮಾಡಿದಂತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಘೋಸ್ಟ್ ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ.
ಇದನ್ನೂ ಓದಿ: 61ನೇ ವಸಂತಕ್ಕೆ ಕಾಲಿಟ್ಟ ಸೆಂಚುರಿ ಸ್ಟಾರ್ ಶಿವಣ್ಣ – ‘ಘೋಸ್ಟ್’ ಸಿನಿಮಾ ತಂಡದಿಂದ ಸ್ಪೆಷಲ್ ಗಿಫ್ಟ್
ಘೋಸ್ಟ್ ಸಿನಿಮಾದ ಈ ಟೀಸರ್‌ಗಾಗಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಗೆ ತಕ್ಕಂತೆ ಈ ಟೀಸರ್ ಮೂಡಿಬಂದಿದ್ದು, ಅಭಿಮಾನಿಗಳ ಮನಗೆದ್ದಿದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಗಮನ ಸೆಳೆಯುತ್ತಿದೆ. ತುಂಬ ರಗಡ್ ಆಗಿ ಅವರು ಎಂಟ್ರಿ ನೀಡಿದ್ದಾರೆ. ಹತ್ತಾರು ಗನ್ ಹಿಡಿದು ಬರುವ ಗುಂಪನ್ನು ಶಿವಣ್ಣ ಕಣ್ಣಿನಲ್ಲೇ ಹೆದರಿಸುತ್ತಾರೆ. ಆಗ ಅವರು ಹೇಳುವ ಡೈಲಾಗ್ ಕೂಡ ಖಡಕ್ ಆಗಿದೆ. ಶಿವರಾಜ್ಕುಮಾರ್ ಅವರ ಅಭಿಮಾನಿಗಳಿಗೆ ‘ಬಿಗ್ ಡ್ಯಾಡಿ’ ಟೀಸರ್ ಸಖತ್ ಇಷ್ಟ ಆಗಿದೆ.
‘ನೀವು ಗನ್ನಲ್ಲಿ ಎಷ್ಟು ಜನರನ್ನು ಹೆದರಿಸಿದ್ದೀರೋ ಅದಕ್ಕಿಂತ ಜಾಸ್ತಿ ಜನರನ್ನ ನಾನು ಬರೀ ಕಣ್ಣಲ್ಲಿ ಹೆದರಿಸಿದ್ದೀನಿ. ಅವರು ನನ್ನ ಒ.ಜಿ. ಅಂತಾರೆ. ಒರಿಜಿನಲ್ ಗ್ಯಾಂಗ್ಸ್ಟರ್’ ಎಂದು ಶಿವರಾಜ್ಕುಮಾರ್ ಅವರು ಭರ್ಜರಿಯಾಗಿ ಡೈಲಾಗ್ ಹೊಡೆದಿದ್ದಾರೆ. ಈ ಪಾತ್ರದಲ್ಲಿ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ವರ್ಷ ದಸರಾ ವೇಳೆಗೆ ‘ಘೋಸ್ಟ್’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದತ್ತಣ್ಣ, ಅನುಪಮ್ ಖೇರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ಅಭಿಜಿತ್, ಜಯರಾಂ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.