ರೋಚಕ ಪಂದ್ಯವೊಂದಕ್ಕೆ ಸಜ್ಜಾಗಿ! – ಕೆ.ಎಲ್ ರಾಹುಲ್ ಜೀವನಾಧಾರಿತ ಚಿತ್ರ ನಿರ್ಮಾಣ?

ಕ್ರಿಕೆಟರ್ ಗಳಿಗೆ ಸಿನಿಮಾ ನಂಟು ಹೊಸತೇನಲ್ಲ. ಆರ್‌ಸಿಬಿ ಪಂದ್ಯಗಳ ವೇಳೆ ಕೆಜಿಎಫ್ ಚಾಪ್ಟರ್-2 ಪ್ರಚಾರ, ಆಟಗಾರರಿಗೆ ಕೆಜಿಎಫ್ ಚಿತ್ರ ತೋರಿಸಿದ್ದೆಲ್ಲ ಗೊತ್ತೇ ಇದೆ. ಈ ಹಿಂದೆ ಆರ್‌ಸಿಬಿ ಜೊತೆ ಹೊಂಬಾಳೆ ಫಿಲಂಸ್ ಕೈ ಜೋಡಿಸಿತ್ತು. ಅಷ್ಟೇ ಅಲ್ಲದೇ ಕೆಲ ಕ್ರಿಕೆಟ್ ದಿಗ್ಗಜರ ಕುರಿತು ಕೆಲ ಸಿನಿಮಾಗಳು ಈಗಾಗಲೇ ಮೂಡಿಬಂದಿವೆ. ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ಒಡೆತನದ ಸಂಸ್ಥೆ, ಕ್ರಿಕೆಟರ್ ಒಬ್ಬರ ಜೀವನದ ಕುರಿತಾದ ಚಿತ್ರವೊಂದಕ್ಕೆ ಸಜ್ಜಾಗಿದ್ದಾರೆ.
ಹೌದು, ಕ್ರಿಕೆಟರ್ಸ್‌ಗಳ ಜೀವನಾಧಾರಿತ ಸಿನಿಮಾ ನಿರ್ಮಾಣಗೊಳ್ಳುವುದು ಹೊಸತೇನಲ್ಲ. ಈ ಹಿಂದೆಯೂ ಸಿನಿಮಾಗಳು ಮೂಡಿಬಂದಿವೆ. ನಿರ್ಮಾಪಕ ವಿಜಯ್ ಕಿರಗಂದೂರು ಒಡೆತನದ ಸಂಸ್ಥೆ ಕನ್ನಡಿಗ, ಕ್ರಿಕೆಟಿಗ ಕೆ.ಎಲ್.ರಾಹುಲ್ ಬದುಕಿನ ಕೆಲ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಪೃಥ್ವಿರಾಜ್ ಸುಕುಮಾರನ್‌ಗೆ ಗಂಭೀರ ಏಟು – ಆಸ್ಪತ್ರೆಗೆ ದಾಖಲು
ಈ ಸಿನಿಮಾಗೆ ‘ಕಿರಿಕ್ ಎಟ್ʼಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ನಟರಾದ ದಾನೀಶ್ ಸೇಟ್ ಹಾಗೂ ನವೀನ್ ಶಂಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಹಲವು ವಿಶೇಷಗಳನ್ನು ಹೊಂದಿದೆ. ʼದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’ಯಂತಹ ಸೂಪರ್ ಹಿಟ್ ವೆಬ್ ಸರಣಿಗಳ ಬರಹಗಾರ ಸುಮನ್ ಕುಮಾರ್ ಈ ಚಿತ್ರದ ನಿರ್ದೇಶಕರು. ಸ್ಟ್ಯಾಂಡಪ್ ಕಾಮಿಡಿಯನ್ ಆಗಿರುವ ಸುಮನ್ ಮೂಲತಃ ಬೆಂಗಳೂರಿನವರು. ಕೆಆರ್‌ಜಿಯ ಕಾರ್ತೀಕ್ ಗೌಡ ಮತ್ತು ಸಂಗಡಿಗರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಫ್ಯಾಮಿಲಿಮೆನ್‌ನ ಮತ್ತೋರ್ವ ಬರಹಗಾರ ಮನೋಜ್‌ಕುಮಾ ಕಲೈವಣ್ಣನ್ ಈ ಚಿತ್ರದ ಬರಹಗಾರರು.
ಕ್ರಿಕೆಟ್ ಆಟದ ಜೊತೆಗೆ ಹಾಸ್ಯ ಲೇಪನ ಹೊಂದಿರುವ ಕಥೆಯಲ್ಲಿ ಕೆ.ಎಲ್.ರಾಹುಲ್ ಅವರ ಕ್ರಿಕೆಟ್ ಬದುಕಿನ ಕೆಲಷ್ಟು ಅಂಶಗಳು ಬರಲಿವೆ ಎಂದು ಮೂಲಗಳು ಹೇಳುತ್ತಿವೆ. ಈ ಕುರಿತು ಒಂದಷ್ಟು ಪೋಸ್ಟ್‌ಗಳನ್ನು ಪ್ರಚಾರದ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಬಿಡಲಾಗಿದೆ. ಟ್ವಿಟರ್‌ನಲ್ಲಿ ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಲಾಗಿದ್ದು, ರೋಚಕ ಪಂದ್ಯವೊಂದಕ್ಕೆ ಸಜ್ಜಾಗಿ! ಕ್ರಿಕೆಟ್ ಆಡೋದು ಆಡ್ಸೋದು ಅಷ್ಟು ಸುಲಭ ಅಲ್ಲ – ಬಹಳ ಕಿರಿಕ್ ಮಾಡ್ಬೇಕು! ಪ್ರಸ್ತುತ ಪಡಿಸುತ್ತಿದ್ದೇವೆ ಕಿರಿಕ್’et’11 , ಕೆ.ಆರ್.ಜಿ ಯ ಮುಂದಿನ ಚಿತ್ರ ಎಂದು ಪೋಸ್ಟ್ ಮಾಡಲಾಗಿದೆ.
ಕ್ರಿಕೆಟ್ ಅಂಗಳದಲ್ಲಿ ಕಿರಿಕ್ ಮಾಡುತ್ತ, ನಗಿಸುವ ದಾನೀಶ್ ಸೇಟ್ ಸಾಕಷ್ಟು ವರ್ಷಗಳಿಂದ ಕ್ರಿಕೆಟ್ ತಂಡಗಳ ಜೊತೆಗೆ ನಂಟು ಹೊಂದಿದ್ದಾರೆ. ಆರ್‌ಸಿಬಿಯ ಡ್ರೆಸಿಂಗ್ ರೂಮಿನ ಹಾಸ್ಯ ವಿಡಿಯೊಗಳು, ಇಂಟರ್‌ವ್ಯೂಗಳಿಂದಲೇ ಇವರು ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೀಗಾಗಿ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ವಾಸುಕಿ ವೈಭವ್ ಸಂಗೀತ ಈ ಚಿತ್ರಕ್ಕಿದೆ. ಕಥೆ ಅಂತಿಮವಾಗಿದ್ದು ಮುಂದಿನ ಪ್ರಕ್ರಿಯೆಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಚಿತ್ರ ನಿರ್ಮಾಣ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.