ನಾವ್ ಮಾಡಿದ್ದು ತಪ್ಪು, ನಮ್ಮನ್ನ ಬಿಟ್ಟು ಬಿಡಿ – ಬೇಡಿಕೊಂಡ ಶಿವಾಜಿನಗರದಲ್ಲಿ ಹಲ್ಲೆ ಮಾಡಿದ ಆರೋಪಿಗಳು

ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವು ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ, ನಮ್ಮ ಕರ್ನಾಟಕ ಸೇನೆಯ ಬಸವರಾಜ್ ಪಡುಕೋಟೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ವಿಡಿಯೋ ಬಿಡುಗಡೆ ಮಾಡಿ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದ ಈತನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಡರಾತ್ರಿ ಬಂಧಿಸಿದ್ದು, ಈವರೆಗೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ನಾವು ಮಾಡಿದ್ದು ತಪ್ಪು ಎಂದು ಆರೋಪಿಗಳು ಕೈ ಮುಗಿದು ಬೇಡಿಕೊಂಡಿದ್ದಾರೆ.
ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ಜಿಬಿಎ ಅಧಿಕಾರಿಗಳು ಫುಟ್ಪಾತ್ ಮೇಲಿನ ಅಕ್ರಮ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಈ ವೇಳೆ ದಿಢೀರ್ ಪ್ರತ್ಯಕ್ಷರಾದ ಸ್ಥಳೀಯ ವ್ಯಾಪಾರಿ ಬಸವರಾಜ ಪಡುಕೋಟೆ ಹಾಗೂ ಆತನ ಬೆಂಬಲಿಗರ ಪಡೆ, ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ ತೀವ್ರ ವಾಗ್ವಾದಕ್ಕಿಳಿದಿದ್ದರು. ಮಾತು ಬೆಳೆದು ಕಡೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಬಸ್ ಸ್ಟ್ಯಾಂಡ್ ಬಳಿ ಬೆಳಿಗ್ಗೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದಾಗ, ಮಧ್ಯಾಹ್ನ 12:30ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ಬಂದ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ಏಕಾಏಕಿ ಅಧಿಕಾರಿಗಳ ಮೇಲೆ ಮುಗಿಬಿದ್ದಿದೆ.
ಇದನ್ನೂ ಓದಿ: ಧೂಳು ಹಿಡಿದ ಫೆರಾರಿ KL ರಾಹುಲ್ – BCCI ಆಟಕ್ಕೆ ಖದರ್ ಕಳ್ಕೊಂಡ್ರಾ?
ಬಂಧನಕ್ಕೊಳಗಾಗುವ ಮೊದಲು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ ಬಸವರಾಜ್, ಪ್ರಕರಣಕ್ಕೆ ಹೊಸ ತಿರುವು ನೀಡಲು ಯತ್ನಿಸಿದ್ದರು. “ನಾವು ಫುಟ್ ಪಾತ್ ವಿಚಾರಕ್ಕೆ ಗಲಾಟೆ ಮಾಡಿಲ್ಲ. ಅಲ್ಲಿ ನಮ್ಮ ಕನ್ನಡ ಸೇನೆಯಿಂದ ಕನ್ನಡ ಧ್ವಜ ಹಾರಿಸಲಾಗಿತ್ತು ಮತ್ತು ಗಣೇಶ ದೇವಸ್ಥಾನವಿತ್ತು. ಅಧಿಕಾರಿಗಳು ಯಾವುದಾದರೇನು ತೆಗೆದುಹಾಕಿ ಎಂದು ಉದ್ಧಟತನದಿಂದ ಮಾತನಾಡಿದರು. ಅದಕ್ಕೆ ನಾವು ಪ್ರತಿರೋಧ ಒಡ್ಡಿದೆವು” ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ನಾಳೆ ತಾನೇ ಪೊಲೀಸರಿಗೆ ಶರಣಾಗುವುದಾಗಿ ವಿಡಿಯೋದಲ್ಲಿ ತಿಳಿಸಿದ್ದ.
ಆದರೆ, ಆರೋಪಿ ಶರಣಾಗುವ ಮೊದಲೇ ಹದ್ದಿನ ಕಣ್ಣಿಟ್ಟಿದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು , ಬಸವರಾಜ್ ಇದ್ದ ಜಾಗ ಪತ್ತೆ ಹಚ್ಚಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಜಿಬಿಎ ಶಿವಾಜಿನಗರ ಉಪ ವಿಭಾಗದ ಎಇ ಮಾಧವ್ ರಾವ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ 109(1), 132, 74 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಈವರೆಗೆ ಒಟ್ಟು 11 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸಿದ್ದಾಪುರದ ಭರತ್, ಕೊಟ್ರೇಶ್, ಬಸವರಾಜ್, ಪರಶುರಾಮ್, ರಘು, ರಂಜಿತ್, ಮುಜಾಹಿದ್ ಅಹಮದ್, ಪಂಪಣ್ಣ, ರಂಗಸ್ವಾಮಿ ಮತ್ತು ಕಿರಣ್ ಎಸ್. ನಾಯಕ್ ಸೇರಿದ್ದಾರೆ.

ನೋಡಿರಿ

