ಡ್ರೆಸ್ಸಿಂಗ್ ರೂಂ ರೂಲ್ಸ್.. ಸರ್ಫರಾಜ್ ಭವಿಷ್ಯ ಖತಂ? – ತಪ್ಪು ಮುಚ್ಚಿಕೊಳ್ಳಲು ಗಂಭೀರ್ ಆಟ?
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಪ್ರದರ್ಶನ ನೀಡಿ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಸೋತಿತ್ತು. ಈ ಸೋಲಿನ ಬಳಿಕ ಹೆಡ್ ಕೋಚ್ ಗೌತಂ ಗಂಭೀರ್ ಸೇರಿದಂತೆ, ಹಲವು ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ. ಇತ್ತೀಚೆಗೆ ಗಂಭೀರ್ ಸೇರಿದಂತೆ ಹಲವು ಅಧಿಕಾರಿಗಳನ್ನ ಒಳಗೊಂಡಂತೆ ಬಿಸಿಸಿಐ ಸಭೆಯನ್ನೂ ನಡೆಸಿದೆ. ಈ ಸಭೆಯಲ್ಲಿಯೇ ಗೌತಮ್ ಗಂಭೀರ್ ಅವರು ಸರ್ಫರಾಜ್ ಖಾನ್ ವಿರುದ್ಧ ಬಹುದೊಡ್ಡ ಆರೋಪವನ್ನೇ ಮಾಡಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ನಡೆಯುವ ವಿದ್ಯಮಾನಗಳು / ಮಾತುಕತೆಗಳನ್ನು ಒಬ್ಬ ಬ್ಯಾಟ್ಸಮ್ಯಾನ್ ಲೀಕ್ ಮಾಡುತ್ತಿದ್ದಾರೆಂದು ಸರ್ಫರಾಜ್ ಖಾನ್ರನ್ನು ಉದ್ದೇಶಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಪತ್ನಿಯರಿಗೆ ಬ್ರೇಕ್.. ಲಗೇಜ್ ಗೂ ಕತ್ತರಿ – ಚಾಂಪಿಯನ್ಸ್ ಟ್ರೋಫಿಗೆ ಟಫ್ ರೂಲ್ಸ್
ಅಷ್ಟಕ್ಕೂ ಏನಪ್ಪಾ ವಿವಾದ ಇದು ಅಂದ್ರೆ ಮೆಲ್ಬೋರ್ನ್ ನಲ್ಲಿ ನಡೆದಂತ ಬಾಕ್ಸಿಂಗ್ ಡೇ ಪಂದ್ಯವನ್ನ ಸೋತ ಬಳಿಕ ಗೌತಮ್ ಗಂಭೀರ್ ಟೀಂ ಇಂಡಿಯಾ ಆಟಗಾರರ ಮೇಲೆ ಸಿಟ್ಟಾಗಿದ್ರು. ನಂತ್ರ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಪ್ಲೇಯಿಂಗ್ 11 ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿಯಾಗಿತ್ತು. ಆ ಟೆಸ್ಟ್ ಪಂದ್ಯವನ್ನು ಭಾರತ 184 ರನ್ನುಗಳಿಂದ ಸೋತಿತ್ತು. ಮುಂದಿನ ಪಂದ್ಯಗಳಲ್ಲಿ ಕೈಬಿಡುವ ಎಚ್ಚರಿಕೆಯನ್ನು ಗಂಭೀರ್ ನೀಡಿದ್ದರು. ಬಹುತ್ ಹೋಗಯಾ ಎಂದು ಯಾರನ್ನೂ ನಿರ್ದಿಷ್ಟವಾಗಿ ಟಾರ್ಗೆಟ್ ಮಾಡದೇ, ಆಟಗಾರರ ಮೇಲೆ ಅಸಮಾಧಾನ ತೋರಿಸಿದ್ರು. ನನ್ನ ನಿರ್ದೇಶನವನ್ನು ಪಾಲಿಸದೇ ಇದ್ರೆ ತಂಡದಿಂದ ಕೈಬಿಡಲಾಗುವುದು ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು.ಈ ವೇಳೆ ರೋಹಿತ್ ಮತ್ತು ಗಂಭೀರ್ ನಡುವೆ ವಾಗ್ವಾದಗಳು ನಡೆದಿವೆ ಎನ್ನಲಾಗಿದೆ. ಆದ್ರೆ ಆಟಗಾರರ ಮತ್ತು ಕೋಚ್ ನಡುವಿನ ಮಾತುಕತೆಗಳು ಡ್ರೆಸ್ಸಿಂಗ್ ರೂಂ ಹೊರಗೆ ಹೋಗಬಾರದು ಎನ್ನುವ ಕಠಿಣ ಎಚ್ಚರಿಕೆಯ ನಡುವೆಯೂ, ಮಾಹಿತಿ ಹೊರಗೆ ಲೀಕ್ ಆಗಿದ್ದಕ್ಕೆ ಗಂಭೀರ್ ಸಿಟ್ಟಾಗಿದ್ದರು. ಈಗ, ಸರ್ಫರಾಜ್ ಖಾನ್ ಮೇಲೆ ನೇರ ಆರೋಪ ಹೊರಿಸುವ ಮೂಲಕ, ಮುಂದಿನ ಕ್ರಮವನ್ನು ಬಿಸಿಸಿಐಗೆ ಬಿಟ್ಟಿದ್ದಾರೆ.
ಬಿಸಿಸಿಐ ನಡೆಸಿದ ಸಭೆ ವೇಳೆ ಈ ಹಿಂದೆ ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಇಲ್ಲದ ಅಸಮಾಧಾನ, ಈಗ ಯಾಕೆ ಬಂತು ಅಂತ ಬಿಗ್ಬಾಸ್ಗಳು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ಗೆ ಪ್ರಶ್ನೆ ಮಾಡಿದ್ದಾರೆ, ಜೊತೆಗೆ ಟೀಮ್ ಮ್ಯಾನೇಜರ್ ಜೈದೇವ್ ಶಾ ನೀಡಿದ್ದ ವರದಿಯ ಬಗ್ಗೆಯೂ ಅಧಿಕಾರಿಗಳು ಚರ್ಚಿಸಿದ್ರು. ಟೀಮ್ ಮ್ಯಾನೇಜರ್ ಜೈದೇವ್ ಶಾ ಅವರು ತಮ್ಮ ವರದಿಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಮೊದಲಿಗೆ ಕೆಲವು ಹಿರಿಯ ಆಟಗಾರರು ಗಂಭೀರ್ ಕೋಚಿಂಗ್ ಸ್ಟೈಲ್ ಬಗ್ಗೆ ಅಸಮಾಧಾನಗೊಂಡಿದ್ರು. ಆಟಗಾರರು ಹೋಟೆಲ್ ಬದಲಾವಣೆ ಬಗ್ಗೆ ಮನವಿ ಮಾಡಿದಾಗ ಕೋಚ್ ಸರಿಯಾಗಿ ಸ್ಪಂದಿಸಲಿಲ್ಲ. ಬದಲಿಗೆ ಅವರ ಮೇಲೆ ಫುಲ್ ಗರಂ ಆಗಿದ್ರು. ಪ್ರಾಕ್ಟೀಸ್ಗೆ ನಿಗಧಿತ ಸಮಯಕ್ಕೆ ಬಾರದ ಆಟಗಾರರ ವಿರುದ್ಧ ಗಂಭೀರ್ ಸುಖಾಸುಮ್ಮನೇ ರೊಚ್ಚಿಗೆದ್ದು, ವಾರ್ನಿಂಗ್ ನೀಡಿದ್ರು. ತಾವೇ ನೇಮಕ ಮಾಡಿದ್ದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನಡವಳಿಕೆ ಬಗ್ಗೆ ಗಂಭೀರ್, ಗ್ರೌಂಡ್ನಲ್ಲೇ ಸಿಡಿದೆದ್ದಿದ್ರು. ಕೆಲ ಆಟಗಾರರು ಮತ್ತು ಕೋಚ್ ಗಂಭೀರ್ ನಡುವೆ ಉತ್ತಮ ಬಾಂಧವ್ಯ ಇರ್ಲಿಲ್ಲ. ಅವ್ರ ಸಂಬಂಧ ಅಷ್ಟಕಷ್ಟೆ ಇತ್ತು ಎಂದು ಉಲ್ಲೇಖಿಸಿದ್ರು. ಸೋ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆಯಾಗಿದೆ.
ಡ್ರೆಸ್ಸಿಂಗ್ ರೂಮ್ ಸೀಕ್ರೆಟ್ಸ್ ಲೀಕ್ ಆದ್ಮೇಲೆ ಗೌತಮ್ ಗಂಭೀರ್ ಸರ್ಫರಾಜ್ ಮೇಲೆ ಸಿಟ್ಟಾಗಿದ್ದಾರೆ. ಈ ಬಗ್ಗೆ ಸರ್ಫರಾಜ್ ಖಾನ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ. ಹೀಗಾಗಿ ಮುಂದೆ ಗಂಭೀರ್ ಕೋಚ್ ಆಗಿರುವವರೆಗೆ ಸರ್ಫರಾಜ್ ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ತಂಡದ ಆಂತರಿಕ ವಿಚಾರವನ್ನು ಲೀಕ್ ಮಾಡಿರುವುದನ್ನು ಗಂಭೀರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವಿಚಾರಕ್ಕೆ ಮುಂದೆ ಅವರನ್ನು ಆಯ್ಕೆಗೆ ಪರಿಗಣಿಸುವುದು ಅನುಮಾನ ಎನ್ನಲಾಗುತ್ತಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 150 ರನ್ ಗಳಿಸಿದ ಹೊರತಾಗಿಯೂ ಸರ್ಫರಾಜ್ ಖಾನ್ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಆಡಲಿಲ್ಲ. ಈಗ ಇಷ್ಟೆಲ್ಲಾ ಬೆಳವಣಿಗೆಗಳ ನಂತ್ರ ಚಾನ್ಸ್ ಕೊಡ್ತಾರೆ ಅನ್ನೋದು ಡೌಟಿದೆ.