ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅನರ್ಹ – 6 ವರ್ಷ ಸ್ಪರ್ಧಿಸುವಂತಿಲ್ವಾ? ಮುಂದಿನ ಆಯ್ಕೆ ಏನು?

ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅನರ್ಹ – 6 ವರ್ಷ ಸ್ಪರ್ಧಿಸುವಂತಿಲ್ವಾ? ಮುಂದಿನ ಆಯ್ಕೆ ಏನು?

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಮರುದಿನವೇ ಜೆಡಿಎಸ್ ಗೆ ದೊಡ್ಡ ಆಘಾತ ತಟ್ಟಿದೆ. ಜೆಡಿಎಸ್ ಹಾಲಿ ಶಾಸಕನನ್ನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನ್ಯಾಯಾಲಯ ಆದೇಶ ನೀಡಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸ್ಥಾನದಿಂದ ಗೌರಿಶಂಕರ್ ಅನರ್ಹರಾಗಿದ್ದರು ಕೂಡ ತಿಂಗಳ ಮಟ್ಟಿಗೆ ರಿಲೀಫ್ ಸಿಕ್ಕಿದೆ.

ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ (JDS) ಶಾಸಕ ಡಿ.ಸಿ ಗೌರಿಶಂಕರ್  (DC Gourishankar)  ಅನರ್ಹಗೊಂಡಿದ್ದಾರೆ ಎಂದು ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸುನಿಲ್ ದತ್ ನೇತೃತ್ವದ ಕಲಬುರಗಿ ಏಕಸದಸ್ಯ ಪೀಠ ಈ ತೀರ್ಪನ್ನು ಹೊರಡಿಸಿದೆ. ತುಮಕೂರು (Tumakuru) ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ವಿರುದ್ಧ ನಕಲಿ ಬಾಂಡ್ ಹಂಚಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ : ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ?

2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ದೂರು ನೀಡಿದ್ದರು. ಗೌರಿಶಂಕರ್ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಸುರೇಶ್ ಗೌಡರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸುದೀರ್ಘ 5 ವರ್ಷಗಳ ಕಾಲ ವಿಚಾರಣೆ ನಡೆಸಿರುವ ಕೋರ್ಟ್ ಇಂದು ತೀರ್ಪು ನೀಡಿದೆ.

ತೀರ್ಪಿನ ಬೆನ್ನಲ್ಲೇ ಶಾಸಕ ಗೌರಿಶಂಕರ್ ಅನರ್ಹತೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಶಾಸಕ ಸ್ಥಾನದಿಂದ ಗೌರಿಶಂಕರ್ ಅನರ್ಹ ಆದೇಶಕ್ಕೆ ಕೋರ್ಟ್ 1 ತಿಂಗಳು ತಡೆ ನೀಡಿದೆ. ಕಲಬುರಗಿ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.. ಮತ್ತೊಂದೆಡೆ ಜೆಡಿಎಸ್ ನ ಮೊದಲ ಪಟ್ಟಿಯಲ್ಲೇ ಗೌರಿಶಂಕರ್ ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್ ಕೂಡ ಘೋಷಣೆ ಮಾಡಲಾಗಿತ್ತು.

suddiyaana