ಪುಸ್ತಕದ ಹಾಳೆ ಹರಿದಿದ್ದಕ್ಕೆ ಇದೆಂಥಾ ಶಿಕ್ಷೆ! – ಪ್ರಜ್ಞೆ ತಪ್ಪುವಂತೆ ವಿದ್ಯಾರ್ಥಿಗೆ ಥಳಿಸಿದ ನಾಲ್ವರು ಶಿಕ್ಷಕರು!

ಪುಸ್ತಕದ ಹಾಳೆ ಹರಿದಿದ್ದಕ್ಕೆ ಇದೆಂಥಾ ಶಿಕ್ಷೆ! – ಪ್ರಜ್ಞೆ ತಪ್ಪುವಂತೆ ವಿದ್ಯಾರ್ಥಿಗೆ ಥಳಿಸಿದ ನಾಲ್ವರು ಶಿಕ್ಷಕರು!

ಸ್ಕೂಲ್‌ ಅಂದ್ಮೇಲೆ ವಿದ್ಯಾರ್ಥಿಗಳು ಸಣ್ಣಪುಟ್ಟ ತಪ್ಪು ಮಾಡೋದು ಕಾಮನ್‌. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಬುದ್ದಿ ಹೇಳುತ್ತಾರೆ. ಆದ್ರೆ ಇಲ್ಲೊಂದು ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಹಪಾಠಿಯ ಪುಸ್ತಕದ ಹಾಳೆ ಹರಿದ ಅನ್ನೋ ಕಾರಣಕ್ಕೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರೀಲ್ಸ್‌ ಮಾಡಲು ಕುತ್ತಿಗೆಗೆ ಹಗ್ಗ ಕಟ್ಟಿಕೊಂಡ್ಲು! – ಅಯ್ಯೋ.. ಕುಣಿಕೆ ಬಿಗಿಯಾಗಿ ಮಹಿಳೆ ಸಾವು

ಗೌರಿಬಿದನೂರು ನಗರದ ಖಾಸಗಿ ವಿದ್ಯಾನಿಧಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಶಿಕ್ಷಕರು ಸೇರಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ನಿವಾಸಿಯಾದ ಸುಶಾಂತ್ ಎಂಬ ಎಂಟನೇ ತರಗತಿ ವಿದ್ಯಾರ್ಥಿ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತರಗತಿಯಲ್ಲಿ ಸಹಪಾಠಿಯೊಬ್ಬರ ಪುಸ್ತಕದ ಪುಟ ಹರಿದಿದ್ದಾನೆ ಎಂಬ ಕಾರಣಕ್ಕೆ, ಶಾಲೆಯ ಶಿಕ್ಷಕರು ಆತನಿಗೆ ಮನಬಂದಂತೆ ಬೈದಿದ್ದಾರೆ. ಬಳಿಕ ನಾಲ್ವರು ಶಿಕ್ಷಕರು ಸೇರಿ ಸುಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಶಿಕ್ಷಕರ ಹಲ್ಲೆಯಿಂದ ಸುಶಾಂತ್ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಾಲಾ ಸಿಬ್ಬಂದಿಯೇ ತಕ್ಷಣವೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದ್ದು, ವೈದ್ಯರ ಪ್ರಕಾರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸುಶಾಂತ್ ಪೋಷಕರು ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಹಲ್ಲೆ ನಡೆಸಿರುವುದು ಕ್ಷಮಿಸಲಾಗದ ಅಪರಾಧ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಸುಶಾಂತ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿಕ್ಷಕರಾದ ದೇವರಾಜು, ಹೇಮಾವತಿ, ವನಜಾಕ್ಷಿ ಸೇರಿದಂತೆ ಇತರ ಸಿಬ್ಬಂದಿಗಳ ಹೆಸರುಗಳು ಕೇಳಿಬಂದಿವೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.

Shwetha M

Leave a Reply

Your email address will not be published. Required fields are marked *