ಮಂಡ್ಯದಿಂದ ಸುಮಲತಾಗೆ ಗೇಟ್‌ಪಾಸ್..! – ಹೆಚ್.ಡಿ ಕುಮಾರಸ್ವಾಮಿ ತಂತ್ರ ಫಲಿಸುತ್ತಾ?

ಮಂಡ್ಯದಿಂದ ಸುಮಲತಾಗೆ ಗೇಟ್‌ಪಾಸ್..! – ಹೆಚ್.ಡಿ ಕುಮಾರಸ್ವಾಮಿ ತಂತ್ರ ಫಲಿಸುತ್ತಾ?

ಹೊಸ ವರ್ಷ ಬಂದಾಯ್ತು.. 2024ಕ್ಕೆ ಕಾಲಿಟ್ಟಾಯ್ತು.. ಲೋಕಸಭಾ ಚುನಾವಣಾ ಕಾವು ನಿಧಾನಕ್ಕೆ ರಂಗೇರ್ತಿದೆ. ಈಗಾಗಲೇ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟದ ಕಸರತ್ತು ಶುರುವಾಗಿದೆ. ಇಡೀ ರಾಜ್ಯ ಎಂಪಿ ಎಲೆಕ್ಷನ್​​ಗೆ ಸಜ್ಜಾಗುತ್ತಿದ್ರೆ ಮಂಡ್ಯದ ಅಖಾಡ ಮಾತ್ರ ಜಟಿಲವಾಗುತ್ತಲೇ ಹೋಗ್ತಿದೆ. ಮಂಡ್ಯ ನಮ್ಮದು ಅಂತಾ ಕುಮಾರಣ್ಣ ಕಡ್ಡಿ ತುಂಡು ಮಾಡಿದಂತೆ ಹೇಳ್ತಿದ್ದಾರೆ. ಅತ್ತ ಪಕ್ಷೇತರ ಸಂಸದೆ ಸುಮಲತಾ ನಾನು ಮತ್ತೊಮ್ಮೆ ಲೋಕಸಭೆಗೆ ಇಲ್ಲಿಂದಲೇ ಹೋಗೋದು ಅಂತಾ ಘೋಷಣೆ ಮಾಡಿದ್ದಾರೆ. ಇವರ ಜಟಾಪಟಿ ನಡುವೆ ಕಾಂಗ್ರೆಸ್ ಸಕ್ಕರೆನಗರಿಯ ಕಬ್ಬಿನ ರಸ ಹೀರೋಕೆ ಹವಣಿಸುತ್ತಿದೆ.

ಇದನ್ನೂ ಓದಿ: ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ತಪ್ಪದ ಕಾನೂನು ಸಂಕಷ್ಟ – ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಆಪ್ತರಿಗೂ ಸಿಬಿಐ ನೋಟಿಸ್‌!

ಈಗ ಮಂಡ್ಯ ಪಾಲಿಟಿಕ್ಸ್​ನಲ್ಲಿ ಒಂದು ಬ್ರೇಕಿಂಗ್ ಸುದ್ದಿ ಹರಿದಾಡ್ತಿದೆ. ಸಂಸದೆ ಸುಮಲತಾಗೆ ಮಂಡ್ಯದಿಂದ ಗೇಟ್​ಪಾಸ್ ನೀಡಲಾಗುತ್ತೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 28 ಸ್ಥಾನಗಳನ್ನೂ ಗೆಲ್ಲಬೇಕೆಂಬ ಪಣ ಬಿಜೆಪಿಯದ್ದು.  ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ರೂ ಮೂರ್ನಾಲ್ಕು ಕ್ಷೇತ್ರಗಳನ್ನಷ್ಟೇ ಜೆಡಿಎಸ್​ಗೆ ಬಿಟ್ಟುಕೊಡುವ ಮಾತುಕತೆ ನಡೆದಿದೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಸಚಿವರನ್ನೇ ಕಣಕ್ಕಿಳಿಸಿ ಗೆಲ್ಲೋ ತಂತ್ರ ಹೆಣೆಯುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದ ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಕ್ಷೇತ್ರದ ರಾಜಕೀಯದ ಬಗ್ಗೆ ಇನ್ನೂ ಕ್ಲೈಮ್ಯಾಕ್ಸ್ ಪಿಕ್ಚರ್ ಸಿಗ್ತಿಲ್ಲ. ಸೋತ ಜಾಗದಲ್ಲೇ ಗೆಲ್ಲಬೇಕೆಂಬ ಕುಮಾರಣ್ಣನ ಹಠ, ಮತ್ತೆ ಸಂಸದೆಯಾಗಬೇಕೆಂಬ ಸುಮಲತಾರ ಛಲ ಭಾರೀ ಚರ್ಚೆಯಾಗ್ತಿದೆ. ಮಂಡ್ಯದ ಚುನಾವಣಾ ಲೆಕ್ಕಾಚಾರದ ಜೊತೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ  ಥಳಕು ಹಾಕಿಕೊಳ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲೇ ಇತ್ತೀಚಿನವರೆಗೆ ಮಂತ್ರಿಯಾಗಿದ್ದ ಸದಾನಂದ ಗೌಡರು ಪ್ರತಿನಿಧಿಸುತ್ತಿರುವ ಕ್ಷೇತ್ರ ಇದು. ಆದ್ರೆ ಡಿವಿಎಸ್​ ಬಹಿರಂಗವಾಗಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಹೊಸಬರಿಗೆ ಟಿಕೆಟ್ ನೀಡುವುದು ನಿಶ್ಚಿತ ಎಂದೇ ಹೇಳಲಾಗ್ತಿತ್ತು. ಆದ್ರೆ ಸ್ಪರ್ಧೆಗೆ ಜನರ ಒತ್ತಾಯವಿದೆ ಎನ್ನುವ ಮೂಲಕ ಡಿವಿಎಸ್​ ಮತ್ತೊಮ್ಮೆ ಸ್ಪರ್ಧಿಸುವ ಆಸೆ ಹೊರಹಾಕಿದ್ದಾರೆ. ಇಷ್ಟಾದ್ರೂ ಇಲ್ಲಿ ಸುಮಲತಾರನ್ನ ಕಣಕ್ಕಿಳಿಸೋ ಚರ್ಚೆ ಶುರುವಾಗಿದೆ.

2019ರ ಲೋಕಸಭಾ ಚುನಾವಣಾ ಸಮರದಲ್ಲೇ ಸುಮಲತಾ ಹಾಗೂ ಕುಮಾರಸ್ವಾಮಿ ನಡುವೆ ವಾಗ್ಯುದ್ಧವೇ ನಡೆದಿತ್ತು. ಚುನಾವಣೆಯಲ್ಲಿ ಸುಮಲತಾ ಗೆದ್ದ ಬಳಿಕವೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವಿನ ತಿಕ್ಕಾಟ ಮುಂದುವರಿದಿತ್ತು. ಗಣಿಗಾರಿಕೆಯಿಂದ ಕೆಆರ್‌ ಎಸ್ ಡ್ಯಾಂ ಬಿರುಕು ವಿಚಾರವಾಗಿ ಏಟು ತಿರುಗೇಟು ಕೊಟ್ಟಿದ್ದರು. ಹೀಗಾಗಿ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತಾರಾ? ಅಥವಾ ಬೆಂಗಳೂರು ಉತ್ತರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಅನ್ನೋ ಕುತೂಹಲ ಮೂಡಿದೆ.

ಬೆಂ.ಉತ್ತರದಲ್ಲಿ ಹೇಗಿದೆ ಲೆಕ್ಕಾಚಾರ?  

ಬೆಂಗಳೂರು ಉತ್ತರ ಕ್ಷೇತ್ರ ಅಂದ್ರೆ ಒಂದು ಕಾಲಕ್ಕೆ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. 1999ರವರೆಗೆ 12 ಚುನಾವಣೆಗಳಲ್ಲಿ ಜೆಡಿಎಸ್ ಒಂದು ಬಾರಿ ಗೆದ್ದಿದ್ದು ಬಿಟ್ರೆ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿಕೊಂಡು ಬರ್ತಿದ್ರು. ಆದ್ರೆ ಕಳೆದ 4 ಚುನಾವಣೆಗಳಿಂದ ಇದು ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಕಳೆದ 3 ಚುನಾವಣೆಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳೇ ಜಯ ಗಳಿಸಿದ್ದಾರೆ. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ.  ಹಾಗಾಗಿ, ಬಿಜೆಪಿ- ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್‌ನಿಂದ ಒಕ್ಕಲಿಗ ಅಭ್ಯರ್ಥಿಯೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆದ್ದಿದ್ದರೆ, 3ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಹಜವಾಗಿ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಹೊಂದಿದೆ.

ಮತ್ತೊಂದೆಡೆ ಕಾಂಗ್ರೆಸ್ ಕೂಡ ಒಂದು ಕಾಲದ ತನ್ನ ಭದ್ರಕೋಟೆಯನ್ನ ಮರಳಿ ವಶಕ್ಕೆ ಪಡೆಯೋ ತವಕದಲ್ಲಿದೆ. ಈಗಾಗಲೇ 4 ಬಾರಿ ಸೋತಿರುವ ಕಾಂಗ್ರೆಸ್ ಈ ಸಲ ಶತಾಯ ಗತಾಯ ಕ್ಷೇತ್ರವನ್ನ ವಶಪಡಿಸಿಕೊಳ್ಳೋಕೆ ಕಸರತ್ತು ನಡೆಸ್ತಿದೆ. ಪ್ರಭಾವಿ ಒಕ್ಕಲಿಗ ಮುಖಂಡನನ್ನೇ ಕಣಕ್ಕಿಳಿಸೋಕೆ ತಯಾರಿ ಮಾಡಿಕೊಳ್ತಿದೆ. ಎಸ್​ಟಿ ಸೋಮಶೇಖರ್, ಡಿಕೆ ಸುರೇಶ್, ಕುಸುಮಾ ಹನುಮಂತರಾಯಪ್ಪ, ಕೃಷ್ಣಭೈರೇಗೌಡ ಮತ್ತು ಸಿ.ನಾರಾಯಣಸ್ವಾಮಿ ಹೆಸರು ಹರಿದಾಡ್ತಿದೆ.

 

Sulekha