ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ! – ನಿಷೇಧದ ಬಗ್ಗೆ ನಡೀತಿದೆ ಜೋರು ಚರ್ಚೆ..!
ಅಮೆರಿಕದಲ್ಲಿ ಗ್ಯಾಸ್ ಸ್ಟವ್ ನಿಷೇಧದ ಬಗ್ಗೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ. ಗ್ಯಾಸ್ ಸ್ಟವ್ ನಿಂದ ಬಿಡುಗಡೆಯಾಗುವ ಅನಿಲಗಳಿಂದ ಉಸಿರಾಟದ ಸಮಸ್ಯೆ, ಹೃದಯ ರಕ್ತನಾಳದ ಸಮಸ್ಯೆಗಳು ಮಕ್ಕಳಲ್ಲಿ ಅಸ್ತಮಾದಂತ ಕಾಯಿಲೆಗಳು ಕಂಡು ಬರುತ್ತಿದೆ ಅನ್ನೋ ವಾದ ಜೋರಾಗಿಯೇ ಕೇಳಿ ಬರುತ್ತಿದೆ. ಹೀಗಾಗಿ ಅಮೆರಿಕದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗವು (US Consumer Product Safety Commission) ಗ್ಯಾಸ್ ಸ್ಟವ್ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದನ್ನ ನಿಷೇಧಿಸಬೇಕೆಂದು ಬೈಡನ್ ಸರ್ಕಾರವನ್ನು ಒತ್ತಾಯಿಸಿದೆ.
ಆದರೆ ಬ್ಲೂಮ್ ಬರ್ಗ್ ವರದಿಯ ಪ್ರಕಾರ ಶ್ವೇತ ಭವನವೂ ಗ್ಯಾಸ್ ಸ್ಟವ್ ನಿಷೇಧಕ್ಕೆ ಬೆಂಬಲ ನೀಡುವುದಿಲ್ಲ. ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗದ ಆಯುಕ್ತ ರಿಚರ್ಡ್ ಟ್ರುಮ್ಕಾ ಈ ಬಗ್ಗೆ ಬ್ಲೂಮ್ ಬರ್ಗ್ ಗೆ ಹೇಳಿಕೆ ನೀಡಿದ್ದಾರೆ. ‘ಈಗಾಗಲೇ ಗ್ಯಾಸ್ ಏಜನ್ಸಿಯು ಉತ್ಪನ್ನಗಳನ್ನು ಸುರಕ್ಷಿತವಾಗಿಸುವ ನಿಯಮಗಳನ್ನು ರಚಿಸಲು ಕಾರ್ಯನಿರ್ವಹಿಸುತ್ತಿದೆ ಮತ್ತು ಸುರಕ್ಷಿತವಾಗಿಸಲು ಸಾಧ್ಯವಾಗದೆ ಇರುವ ಉತ್ಪನ್ನಗಳನ್ನು ನಿಷೇಧಿಸಬಹುದು’ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಥೈರಾಯ್ಡ್ ಸಮಸ್ಯೆ ಹೆಚ್ಚು ..!- ಈ ಬಗ್ಗೆ ತಜ್ಞರು ಏನಂತಾರೆ ?
ಅಮೇರಿಕದಲ್ಲಿ ಶೇಕಡಾ 35ರಷ್ಟು ಮನೆಗಳು ಗ್ಯಾಸ್ ಸ್ಟವ್ ಬಳಸುತ್ತಿದ್ದು ಕಾರ್ಬನ್ ಮೊನಾಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ನಂತಹ ಅಪಾಯಕಾರಿ ಅನಿಲಗಳನ್ನ ಬಿಡುಗಡೆ ಮಾಡುತ್ತವೆ. ಇದರಿಂದ ಉಸಿರಾಟದ ಸಮಸ್ಯೆ, ಹೃದಯ ರಕ್ತನಾಳದ ಸಮಸ್ಯೆ ಮತ್ತು ಮಕ್ಕಳಿಗೆ ಅಸ್ತಮಾದಂತ ಕಾಯಿಲೆಗಳು ಕಾಡುತ್ತವೆ ಎಂದು ವರದಿಯಾಗಿತ್ತು.
ಗ್ಯಾಸ್ ಸ್ಟವ್ ಬಗ್ಗೆ ಸಂಶೋಧನೆ ಏನು ಹೇಳುತ್ತೆ?
ಸಂಶೋಧನೆಯ ಪ್ರಕಾರ ಗ್ಯಾಸ್ ಸ್ಟವ್‌ಗಳು ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿವೆ. ಏಕೆಂದರೆ ಅವುಗಳು ಆಫ್ ಆಗಿರುವಾಗ ನಿರಂತರವಾಗಿ ಸಣ್ಣ ಮಟ್ಟದಲ್ಲಿ ಮೀಥೇನ್ ಸೋರಿಕೆಯಾಗುತ್ತವೆ. ಇದು ಎರಡನೇ ಹಸಿರು ಮನೆ ಅನಿಲವಾಗಿದೆ. ಜೊತೆಗೆ ಗ್ಯಾಸ್ ಸ್ಟವ್ ಬಳಕೆಯಲ್ಲಿ ಇದ್ದಾಗ ನೈಟ್ರೋಜನ್ ಡೈಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್ ಹಾಗೇ ಮನುಷ್ಯನ ಆರೋಗ್ಯಕ್ಕೆ ಅಸುರಕ್ಷಿತ ಎಂದು ಪರಿಗಣಿಸಿರುವ ಇತರ ಮಾಲಿನ್ಯಕಾರಕಗಳು ಅಡುಗೆಮನೆಯಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತವೆ ಎಂದೂ ಅಧ್ಯಯನಗಳು ಎಚ್ಚರಿಸಿವೆ.
ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ!
ಡಿಸೆಂಬರ್ ನಲ್ಲಿ ಪ್ರಕಟವಾದ ಇಂಟರ್ ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್ ವರದಿಯ ಪ್ರಕಾರ, ಗ್ಯಾಸ್ ಸ್ಟವ್ ಬಳಕೆಯು ಅಮೇರಿಕದಲ್ಲಿ ಸುಮಾರು 13% ರಷ್ಟು ಮಕ್ಕಳಲ್ಲಿ ಕಂಡು ಬರುವ ಆಸ್ತಮಾ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದು, ಇದನ್ನು ಸೆಕೆಂಡ್ ಹ್ಯಾಂಡ್ (ಧೂಮಪಾನ ) ಹೊಗೆಯಿಂದ ಉಂಟಾಗುವ ಅಪಾಯದ ಮಟ್ಟಕ್ಕೆ ಹೋಲಿಸಬಹುದು ಎಂದು ತಿಳಿಸಿದೆ.