ಹೋಟೆಲ್ ಉದ್ಯಮಕ್ಕೆ ತಟ್ಟಿದ ಯುದ್ದದ ಬಿಸಿ! – ಸಿಬ್ಬಂದಿ ಸಂಬಳ ಕಡಿತ.. ಉದ್ಯೋಗ ಕಳೆದುಕೊಳ್ಳುವ ಭೀತಿ!

ಇರಾನ್ – ಇಸ್ರೇಲ್ ಯುದ್ದದ ಪರಿಣಾಮ ದೇಶದಲ್ಲಿ ಅಡುಗೆ ಅನಿಲ ಅಭಾವ ಉಂಟಾಗಿದೆ. ಇದೀಗ ಕರ್ನಾಟಕಕ್ಕೂ ಇದ್ರ ಎಫೆಕ್ಟ್ ತಟ್ಟಿದೆ. ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಕಮರ್ಷಿಯಲ್ ಗ್ಯಾಸ್ ಪೂರೈಕೆ ವ್ಯತ್ಯಯಗೊಂಡಿದ್ದು, ಹಲವು ಹೋಟೆಲ್‌ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಒಡಿಶಾದ SBA ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ – 10ಕ್ಕೂ ಹೆಚ್ಚು ರೋಗಿಗಳು ಸಾ*ವು, 11 ಜನಕ್ಕೆ ಗಂಭೀರ ಗಾಯ
ಕರ್ನಾಟಕದಲ್ಲಿ ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ ಉದ್ಯಮದ ಮೇಲೆ ಎಫೆಕ್ಟ್ ಆಗಿದೆ. ಇದೀಗ ಕೆಲ ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸಿಕೊಂಡು ಸೀಮಿತ ಮೆನುಗಳೊಂದಿಗೆ ಆಹಾರ ತಯಾರಿಸುತ್ತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಐಡಿಸಿ ಹೋಟೆಲ್, ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಹೋಳಿಗೆ ಮನೆ, ಬಸವನಗುಡಿಯ ಬೈಟು ಕಾಫಿ ಹೋಟೆಲ್, ಆನಂದರಾವ್ ಸರ್ಕಲ್‌ನ ಕೃಷ್ಣಸಾಗರ ಹೋಟೆಲ್ ಮತ್ತು ಬಸವನಗುಡಿಯ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಸೇರಿದಂತೆ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ.
ಇನ್ನು ಚಾಮರಾಜನಗರ ಜಿಲ್ಲೆಯ ಒಂದರಲ್ಲೇ 18ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಚನ್ನಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೆಂಕಟಾದ್ರಿ ಹೋಟೆಲ್, ಧಾರವಾಡದ 100 ವರ್ಷಗಳ ಇತಿಹಾಸವಿರುವ ಬಾಂಬೆ ರೆಸ್ಟೋರೆಂಟ್, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಾಜಭವನ ಹೋಟೆಲ್, ಸಕಲೇಶಪುರದ ಮೈತ್ರಿ ಹಾಗೂ ಕರ್ನಾಟಕ ಹೋಟೆಲ್‌ಗಳು, ಯಾದಗಿರಿ ಬಸ್ ನಿಲ್ದಾಣದ ಬಳಿ ಇರುವ ಗುರುಮೂರ್ತಿ ಖಾನಾವಳಿ ಮತ್ತು ತುಮಕೂರಿನ ಅಂತರಸನಹಳ್ಳಿ ಇಂದಿರಾ ಕ್ಯಾಂಟೀನ್ ಕೂಡ ಸಿಲಿಂಡರ್ ಕೊರತೆಯಿಂದ ಬಂದ್ ಆಗಿವೆ.
ಇದೇ ರೀತಿಯಾಗಿ ಇನ್ನೂ ನೂರಾರು ಹೋಟೆಲ್‌ಗಳು ಸಿಲಿಂಡರ್ ಸಿಗದೆ ಅನಿವಾರ್ಯವಾಗಿ ಶಟರ್ ಎಳೆಯಬೇಕಾದ ಪರಿಸ್ಥಿತಿಗೆ ತಲುಪಿವೆ. ಕೆಲವರು ಸಿಲಿಂಡರ್ ಸಿಗದೆ ಹೋಟೆಲ್ ಮುಚ್ಚಿದರೆ, ಇನ್ನೂ ಕೆಲವರು ಕಾಳಸಂತೆಯಲ್ಲಿ ದುಪ್ಪಟ್ಟು ಹಣ ನೀಡಿ ಹೋಟೆಲ್ ನಡೆಸುತ್ತಿದ್ದಾರೆ.
ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಂದ್ ಆಗಿರುವುದು ಹಾಗೂ ಮೆನು ಕಡಿತಗೊಂಡಿರುವುದರಿಂದ ಕಳೆದ ಐದು ದಿನಗಳಲ್ಲಿ ಹೋಟೆಲ್ ಉದ್ಯಮಕ್ಕೆ 100 ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಉದ್ಯಮಿಗಳು ಅಂದಾಜಿಸಿದ್ದಾರೆ.
ಹೋಟೆಲ್‌ಗಳು ಬಂದ್ ಆಗುತ್ತಿದ್ದಂತೆ ಸಿಬ್ಬಂದಿಗೂ ಸಂಕಷ್ಟ ಎದುರಾಗಿದೆ. ಸಂಪಾದನೆ ಇಲ್ಲದಿದ್ದರೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವೆಡೆ 200ಕ್ಕೂ ಹೆಚ್ಚು ಮಂದಿ ಹೋಟೆಲ್ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕಲಬುರಗಿಯ ಇಂದಿರಾ ಕ್ಯಾಂಟೀನ್ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳೆಯರು ಕೂಡ ಉದ್ಯೋಗ ಕಳೆದುಕೊಂಡಿದ್ದಾರೆ. ಚಪಾತಿ ಹಾಗೂ ರೊಟ್ಟಿ ತಯಾರಿಸುತ್ತಿದ್ದ ಸಿಬ್ಬಂದಿಗೆ ಸಿಲಿಂಡರ್ ಸಿಗುವವರೆಗೆ ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೆದಾರರು ತಿಳಿಸಿರುವುದಾಗಿ ಹೇಳಲಾಗಿದೆ.
ರಾಜ್ಯದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಅನಿಲ ಪೂರೈಕೆ ಕಂಪನಿಗಳೊಂದಿಗೆ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೋಟೆಲ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದರ ಮಧ್ಯೆ ಗ್ಯಾಸ್ ಕೊರತೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪರ್ಯಾಯ ವ್ಯವಸ್ಥೆ ಮಾಡುವುದು ಕೇಂದ್ರದ ಜವಾಬ್ದಾರಿ’ ಎಂದು ಹೇಳಿದ್ದಾರೆ.

ನೋಡಿರಿ

