ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ – ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು ಓಡಾಟ
ಮಂಗಳೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಹೊಸ ಪ್ಲಾನ್‌ವೊಂದನ್ನು ಮಾಡಿದೆ. ಜನ ದಟ್ಟಣೆಯನ್ನು ನಿವಾರಿಸಲು ಗಣೇಶ ಚತುರ್ಥಿ ಸಂದರ್ಭದಲ್ಲಿ ಮುಂಬೈ ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸೆ.15ರಿಂದ ವಿಶೇಷ ರೈಲುಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ನೀಡಿದೆ.
ಇದನ್ನೂ ಓದಿ: 50 ದಿನ ಪೂರೈಸಿದ ‘ಡೇರ್ ಡೆವಿಲ್ ಮುಸ್ತಾಫಾ’ – ಚಿತ್ರತಂಡದಿಂದ ಬಿರಿಯಾನಿ, ಪುಳಿಯೊಗರೆ ಪಾರ್ಟಿ
ಈ ಬಗ್ಗೆ ರೈಲ್ವೆ ಇಲಾಖೆ ಪ್ರಕಟನೆ ಹೊರಡಿಸಿದ್ದು, ಸೆ.15ರಿಂದ ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ. ರೈಲು ಸಂಖ್ಯೆ 01166 ಮಂಗಳೂರು ಜಂಕ್ಷನ್ – ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ಸಂಚಾರ ಮಂಗಳೂರು ಜಂಕ್ಷನ್‌ನಿಂದ ಸಂಜೆ 6.40 ಗಂಟೆಗೆ ಹೊರಡಲಿದೆ. ಮತ್ತು ಮುಂಬೈ ಲೋಕಮಾನ್ಯ ತಿಲಕ್‌ನ್ನು ಮರುದಿನ ಮಧ್ಯಾಹ್ನ 1.35 ಗಂಟೆಗೆ ತಲುಪುತ್ತದೆ. ಸೆಪ್ಟೆಂಬರ್ 17, 18, 19, 20, 24 ಮತ್ತು 25, ಅಕ್ಟೋಬರ್ 1 ಮತ್ತು 2 ರಂದು ಕ್ರಮವಾಗಿ ರೈಲು ಸಂಚರಿಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 01165 ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ವಿಶೇಷ ರೈಲು ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ರಾತ್ರಿ 10.15 ಗಂಟೆಗೆ ಹೊರಡಲಿದೆ. ಮರುದಿನ ಸಂಜೆ 5.20 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಸೆ. 15, 16, 17, 18, 22, 23, 29 ಮತ್ತು 30 ರಂದು ರಾತ್ರಿ ಮುಂಬೈನಿಂದ ರೈಲು ಹೊರಡಲಿದೆ ಎಂದು ತಿಳಿಸಿದೆ.
ಇನ್ನು ರೈಲ್ವೆ ಇಲಾಖೆ ವಿಶೇಷ ರೈಲುಗಳು ಯಾವ ಯಾವ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂಬ ಮಾಹಿತಿಯನ್ನು ನೀಡಿದೆ. ಈ ವಿಶೇಷ ರೈಲುಗಳು ಥಾಣೆ, ಪನ್ವೇಲ, ರೋಹಾ, ಮಡ್ಗಾಂವ್, ಖೇಡ್, ಚಿಪ್ಲೂನ್, ಸವರ್ಡೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಳಿ, ರಾಜಾಪುರ ರಸ್ತೆ, ವೈಭವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಅಥವಾ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ಗಳಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖವಾಗಿದೆ.