ಗಂಧರ್ವರು ರಾಕ್ಷಸರು ಟಾಸ್ಕ್ ನಲ್ಲಿ ಹೋದ ಬಿಗ್ ಬಾಸ್ ಮಾನ ಶಾಲೆಯಲ್ಲಿ ವಾಪಸ್ ಬಂತಾ – ವಿನಯ್-ಸಂಗೀತ ಪ್ರಾಬ್ಲಂ ಏನು?

ಗಂಧರ್ವರು ರಾಕ್ಷಸರು ಟಾಸ್ಕ್ ನಲ್ಲಿ ಹೋದ ಬಿಗ್ ಬಾಸ್ ಮಾನ ಶಾಲೆಯಲ್ಲಿ ವಾಪಸ್ ಬಂತಾ – ವಿನಯ್-ಸಂಗೀತ ಪ್ರಾಬ್ಲಂ ಏನು?

ಅಂತೂ ಬಿಗ್‌ ಬಾಸ್‌ ಮನೆಯಲ್ಲಿ ಹೋದವಾರ ಹೋದ ಮಾನವನ್ನು ಈ ವಾರ ವಾಪಸ್‌ ಗಳಿಸಿಕೊಳ್ಳುವ ಪ್ರಯತ್ನ ಜೋರಾಗಿಯೇ ನಡೆದಿರೋದು ಸ್ಪಷ್ಟವಾಗಿದೆ.. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಸಿಗಲ್ಲ ಅಂತ ಗಾದೆ ಮಾತಿದೆ. ಆದರೆ ಬಿಗ್‌ಬಾಸ್‌ನಲ್ಲಿ ಮಾತ್ರ ವೀಕ್ಷಕರ ಮುಂದೆ ಹೋದ ಮಾನವನ್ನು ಮುಚ್ಚಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ನಡೆಸಿದರೂ ಸ್ಪರ್ಧಿಗಳ ಅಹಂ, ಇನ್ನೊಬ್ಬರ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಹೊಂದಿರುವ ಯೋಚನೆಗಳು ಮಾತ್ರ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬ ಮಾತಿನಂತೆ ಕಣ್ಣಿಗೆ ರಾಚುತ್ತಿವೆ.

ಬಿಗ್‌ಬಾಸ್‌ ರಿಯಾಲಿಟಿ ಶೋ ಸೀಸನ್‌ 10 ಆರಂಭದಲ್ಲಿ ಅತ್ಯಂತ ತಮಾಷೆಯ ಸೀಸನ್‌ ಇದಾಗಿರುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ ಅತ್ಯಂತ ಬೋರಿಂಗ್‌ ಮತ್ತು ಅತೀ ಹೆಚ್ಚು ಜಗಳ, ಕಚ್ಚಾಟ, ಚೀರಾಟದ ಸೀಸನ್‌ ಆಗಿ ಇದು ಸಾಗುತ್ತಿರುವುದು ಜನರಿಗೂ ಅರ್ಥವಾಗಿದೆ. ಕಳೆದ ವಾರದ ಟಾಸ್ಕ್‌ನಲ್ಲಿ ರಾಕ್ಷಸರು ಮತ್ತು ಗಂಧರ್ವರ ಅವತಾರ ತಾಳಿದ್ದ ಬಿಗ್‌ಬಾಸ್‌ ಸ್ಪರ್ಧಿಗಳು ತಮ್ಮಲ್ಲಿದ್ದ ರಾಕ್ಷಸೀ ಮನೋಭಾವವನ್ನು ಲಂಗುಲಗಾಮಿಲ್ಲದೆ ತೋರಿಸಿಕೊಟ್ಟಿದ್ದರು. ಇದರಿಂದಾಗಿಯೇ ಬಿಗ್‌ಬಾಸ್‌ ಮನೆಯಿಂದ ಸಂಗೀತ ಮತ್ತು ಡ್ರೋಣ್‌ ಪ್ರತಾಪ್‌ ಆಸ್ಪತ್ಪೆಯ ಬೆಡ್‌ ಸೇರುವಂತಾಗಿತ್ತು. ಅಷ್ಟಾದ್ರೂ ಬಿಗ್‌ಬಾಸ್‌ ಮನೆಯಲ್ಲಿರುವ ಕೆಲ ಸ್ಪರ್ಧಿಗಳ ಮನಸ್ಥಿತಿ ಮಾತ್ರ ಬದಲಾಗಿಲ್ಲ.. ಆದರಲ್ಲೂ ವಿನಯ್ ಮಾತ್ರ ನಾನಿರೋದೇ ಹೀಗೆ. ನಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬ ರೀತಿಯಲ್ಲೇ ತಮ್ಮ ವಾದ ಮತ್ತು ಅಹಂಕಾರವನ್ನು ಮುಂದುವರಿಸುತ್ತಾ ಹೋಗ್ತಿರೋದು ಹೆಚ್ಚಿನ ವೀಕ್ಷಕರಿಗೆ ಅಸಹ್ಯವಾಗಿಯೇ ತೋರುತ್ತಿದೆ.. ಕಳೆದ ವಾರ ಆದ ತಪ್ಪುಗಳನ್ನು ಮರೆಮಾಚಲು ಈ ವಾರ ಬಿಗ್‌ಬಾಸ್‌ ಕೂಡ ಮಕ್ಕಳಾಟಕ್ಕೆ ಇಳಿದಿದ್ದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರ ರೀತಿಯಲ್ಲಿ ಆ್ಯಕ್ಟ್‌ ಮಾಡಲು ಸ್ಪರ್ಧಿಗಳಿಗೆ ಟಾಸ್ಕ್‌ ಕೊಟ್ಟಿದ್ದರು. ಇದರಲ್ಲಿ ಕೆಲವರು ಸುಧಾರಿಸಿಕೊಂಡರೆ, ಇನ್ನು ಕೆಲವರಿಗಂತೂ ತಮ್ಮೊಳಗಿನ ರಾಕ್ಷಸಿ ಮನೋಭಾವ ಇನ್ನೂ ತಗ್ಗಿಲ್ಲ ಎಂಬುದನ್ನು ತೋರಿಸಿಕೊಳ್ಳುವ ವೇದಿಕೆಯಾಗಿತ್ತು.

ಇದನ್ನೂ ಓದಿ : ಕಿಚ್ಚನ ಬಿಗ್ ಬಾಸ್ ಫಿನಾಲೆ ಸಂದೇಶಕ್ಕೆ ಕುಣಿದು ಕುಪ್ಪಳಿಸಿದ ಕಾರ್ತಿಕ್ – ಸುದೀಪ್ ಮೆಸೇಜ್ ನೋಡಿ ಮನೆ ಮಂದಿ ಥ್ರಿಲ್

ಶಾಲಾ ಮಕ್ಕಳ ಟಾಸ್ಕ್‌ನಲ್ಲಿ ವಿನಯ್‌ ಒಳ್ಳೆಯ ಸ್ಟೂಡೆಂಟ್‌ ರೀತಿಯಲ್ಲೇ ವರ್ತಿಸಿದ್ದರು.. ಜಾಸ್ತಿ ತಮಾಷೆ ಮಾಡಲು ವಿನಯ್‌ಗೆ ಬರೋದಿಲ್ಲ ಅನ್ನೋದು ಬೇರೆ ಮಾತು.. ಹೀಗಾಗಿ ತಮಾಷೆ ಮಾಡೋದಕ್ಕಿಂತ ಮುಖದಲ್ಲಿ ನಗುತ್ತಾ, ನೇರವಾದ ಉತ್ತರ ಕೊಟ್ಟು ಮುಗಿಸೋಣ ಎಂಬ ರೀತಿಯಲ್ಲೇ ವಿನಯ್‌ ತಂತ್ರ ರೂಪಿಸಿದ್ದರು.. ಇದರಲ್ಲಿ ಯಶಸ್ವಿ ಕೂಡ ಆಗಿದ್ದರು.. ಹಾಗಿದ್ದರೂ ವಿನಯ್‌ ತನ್ನೊಳಗೆ ಸಂಗೀತ ಬಗ್ಗೆ ಇರುವ ದ್ವೇಷವನ್ನು ಮುಚ್ಚಿಡಲು ಸಾಧ್ಯವಾಗ್ಲೇ ಇಲ್ಲ.. ಇತರೆ ಸ್ಪರ್ಧಿಗಳ ವಿಚಾರದಲ್ಲೂ ತಾನು ಹೊಂದಿರುವ ಅಹಂ ಇನ್ನೂ ವಿನಯ್‌ ಅವರನ್ನು ಕಾಡುತ್ತಿದೆ.. ಬಿಗುಮಾನ ಬಿಟ್ಟು ಈ ವಿನಯ್‌ ಸಹಜವಾಗಿ ಕಾಣಿಸೋದು ಯಾವಾಗ? ಅಥವಾ ಈ ಮನುಷ್ಯ ಹೀಗೇನೇ ಇರೋದಾದ್ರೆ ಉಳಿದ ಸ್ಪರ್ಧಿಗಳಿಗೆ ವಿನಯ್‌ ಇಷ್ಟವಾಗೋದು ಯಾಕೆ ಎಂಬುದು ಮಾತ್ರ ವೀಕ್ಷಕರಿಗೆ ಇನ್ನೂ ಅರ್ಥವಾಗಿಲ್ಲ.. ಮೋಸ್ಟ್‌ಲಿ ಬಿಗ್‌ಬಾಸ್‌ ಸೀಸನ್‌ ಮುಗಿದ್ರೂ ವಿನಯ್‌ ಜನರಿಗೆ ಅರ್ಥವಾಗೋದು ಸ್ವಲ್ಪ ಕಷ್ಟವೇ ಇದ್ದಂತೆ ಭಾಸವಾಗುತ್ತಿದೆ.

ಕಳೆದ ವಾರದ ರಾಕ್ಷಸತನವನ್ನು ಮುಚ್ಚಿಕೊಳ್ಳಲು ತುಕಾಲಿ ಸಂತೋಷ್‌ ಈ ವಾರ ಕಂಪ್ಲೀಟ್‌ ತಮಾಷೆ ಮೋಡ್‌ಗೆ ಜಾರಿದ್ದರು. ಸ್ಕೂಲ್‌ ಸ್ಟ್ಯೂಡೆಂಟ್‌, ಟೀಚರ್‌ ರೋಲ್‌ಗಳಲ್ಲಿ ಸಖತ್ತಾಗಿಯೇ ನಗು ತರಿಸಿದ್ದರು.. ಬಿಗ್‌ ಬಾಸ್‌ ಅಂದ್ರೆ ಕೋಳಿ ಮೊಟ್ಟೆ ಇದ್ದಂಗೆ ಎಂದು ಚಿತ್ರ ಬಿಡಿಸಿ ನಗುವಿನ ಪಟಾಕಿ ಸಿಡಿಸಿದ್ದರು.. ಇಷ್ಟಾದ್ರೂ ಎಲ್ಲಾ ಟಾಸ್ಕ್‌ ಮುಗಿದ್ಮೇಲೆ ತನಿಷಾ ಅವರನ್ನು ಟಾರ್ಗೆಟ್‌ ಮಾಡಿ, ವಿನಯ್‌ ಮತ್ತು ವರ್ತೂರು ಸಂತೋಷ್‌ ಎದುರು, ನಿನ್ನ ಬೆಂಕಿ ನೋಡು.. ಮೂಗು ಹಿಂಗೆ ಬಿಟ್ಕೊಂಡು.. ಎಂದು ಅಸಹ್ಯಕರ ರೀತಿಯಲ್ಲಿ ಮಾತಾಡಿದ್ದನ್ನು ಕಂಡರೆ ಈ ಮನುಷ್ಯ ನಿಜಕ್ಕೂ ಮನಸ್ಪೂರ್ತಿಯಾಗಿ ಹಾಸ್ಯ ಮಾಡೋದಿಲ್ವಲ್ಲಾ ಅಂತ ಅನ್ನಿಸುತ್ತೆ.. ಇಷ್ಟೆಲ್ಲಾ ಅಸಹ್ಯಗಳನ್ನು ಮನಸ್ಸಲ್ಲಿ ತುಂಬ್ಕೊಂಡು ಹಾಸ್ಯ ಮಾಡೋಕೆ ಹೋಗೋದ್ರಿಂದಲೇ ತುಕಾಲಿ ಸಂತೋಷ್‌ ಅಲ್ಲಲ್ಲಿ ಅಪಘಾತ ಮಾಡಿಕೊಳ್ಳೋದ್ರಲ್ಲಿ ಯಾವುದೇ ಅನುಮಾನ ಉಳಿದಿಲ್ಲ.. ಹಾಸ್ಯ ಮಾಡುವ ವ್ಯಕ್ತಿಗೆ ಇನ್ನೊಬ್ಬರ ಬಗ್ಗೆ ಗೌರವ ಇರಬೇಕು.. ಆದ್ರೆ ಈ ಸಂತೋಷ್‌ ಮಾತ್ರ ತನ್ನೆದುರು ಇಟ್ಕೊಂಡಿರುವ ತುಕಾಲಿ ಹೆಸರಿನಂತೆಯೇ ಹಲವು ಬಾರಿ ಅಪಹಾಸ್ಯ ಮಾಡಲು ಹೋಗಿ ತಾನು ನಿಜಕ್ಕೂ ತುಕಾಲಿ ಎಂದು ಸಾಬೀತು ಮಾಡ್ಕೊಳ್ತಿದ್ದಾರೆ.. ಇಂತವ್ರಿಂದ ಅರುಣ್‌ ಸಾಗರ್‌ ರೀತಿಯಲ್ಲೋ.. ಒಳ್ಳೆ ಹುಡುಗ ಪ್ರಥಮ್‌ ರೀತಿಯಲ್ಲಿ ಹೆಚ್ಚಿನದನ್ನು ನಿರೀಕ್ಷಿಸುವುದು ನಮ್ಮದೂ ತಪ್ಪು ಅಂತ ವೀಕ್ಷಕರೂ ಅಂದುಕೊಳ್ಳುವಂತಾಗಿದೆ..

ಇಡೀ ಶೋನಲ್ಲಿ ಮೇಲ್ನೋಟಕ್ಕೆ ಕಾರ್ತಿಕ್‌ ಒಂದು ಟೀಂ ಮೆಂಬರ್‌ ಆಗಿದ್ದರೆ, ವಿನಯ್‌ ಇನ್ನೊಂದು ಟೀಮನ್ನು ಲೀಡ್‌ ಮಾಡ್ತಿದ್ದಾರೆ. ಸಂಗೀತ ಟೀಂನಲ್ಲಿ ಕಾರ್ತಿಕ್‌ ಇರುವಂತಿದೆಯೇ ಹೊರತು ಈ ತಂಡವನ್ನು ಕಾರ್ತಿಕ್‌ ಲೀಡ್‌ ಮಾಡ್ತಿರುವಂತೆ ಕಾಣ್ತಿಲ್ಲ.. ಯಾಕಂದ್ರೆ ಹೆಚ್ಚಾಗಿ ಸಂಗೀತ ಅವರ ಬೆಣ್ಣೆ ಮಾತಿಗೆ ಕರಗುತ್ತಿದ್ದ ಕಾರ್ತಿಕ್‌ ಆರಂಭದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳೋದಿಕ್ಕೂ ಹಿಂದೆ ಮುಂದೆ ನೋಡ್ತಿದ್ದರು.. ಕಿಚ್ಚ ಸುದೀಪ್‌ ಕಿಚಾಯಿಸಿದ ಮೇಲೆ ಸ್ವಲ್ಪ ಬದಲಾದ್ರೂ ಕಾರ್ತಿಕ್‌ ಪೂರ್ತಿಯಾಗಿ ತನಿಷಾ ಹಾಗೂ ಸಂಗೀತ ಪ್ರಭಾವದಿಂದ ಹೊರಬಂದಿಲ್ಲ.. ಟಾಸ್ಕ್‌ಗಳಲ್ಲಿ ಸಖತ್ತಾಗಿಯೇ ಆಡುವ ಕಾರ್ತಿಕ್‌ ಕೆಲವೊಮ್ಮೆ ಓವರ್‌ ಆಗಿ ಕಿರುಚಾಡಿ, ವೀಕ್ಷಕರ ಕಿವಿಗಳಿಗೂ ಪರೀಕ್ಷೆ ಕೊಡ್ತಾರೆ. ಇಂತ ಕಾರ್ತಿಕ್‌ ಟಾಸ್ಕ್‌ ಮುಗಿದ್ಮೇಲೆ ವಿನಯ್‌ ಜೊತೆಗೆ ಆದಷ್ಟು ಹೊಂದಾಣಿಕೆಯ ಪ್ರಯತ್ನ ಮಾಡ್ತಿರುತ್ತಾರೆ. ವಿನಯ್‌ ಗೆ ಇರುವ ಅಹಂ ಕಾರ್ತಿಕ್‌ಗಿಲ್ಲ.. ಒಂದಿಷ್ಟು ತಮಾಷೆ ಮಾಡುತ್ತಾ ರಂಜಿಸುವ ತಾಕತ್ತು ಕಾರ್ತಿಕ್‌ಗೆ ಇದೆ. ಎಲ್ಲರೊಳಗೊಂದಾಗುವ ಪ್ರಯತ್ನ ಮಾಡುತ್ತಿರುವ ಕಾರ್ತಿಕ್‌ ದಿನದಿಂದ ದಿನಕ್ಕೆ ಕಪ್‌ ಗೆಲ್ಲುವ ನೆಚ್ಚಿನ ಸ್ಪರ್ಧಿಯಂತೆ ಕಾಣ್ತಿದ್ದಾರೆ. ಈ ವಾರ ನಿಜಕ್ಕೂ ಕಾರ್ತಿಕ್‌ ಹೆಚ್ಚು ಇಷ್ಟವಾಗುವ ರೀತಿಯಲ್ಲೇ ಕಾಣಿಸಿಕೊಂಡಿದ್ರು.

ಬಿಗ್‌ ಬಾಸ್‌ ಮನೆಯಲ್ಲಿ ವಿನಯ್‌ ಗೆ ಠಕ್ಕರ್‌ ಕೊಡುವ ಏಕೈಕ ಗಟ್ಟಿಗಿತ್ತಿ ಅಂದ್ರೆ ಅದು ಸಂಗೀತ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಇದೇ ಸಂಗೀತ ಕೂಡ ಕೆಲವೊಮ್ಮೆ ವೀಕ್ಷಕರ ಕಣ್ಣೆದುರಿಗೆ ಪರಮಸ್ವಾರ್ಥಿಯಂತೆಯೂ ಕಾಣಿಸಿಕೊಳ್ತಾರೆ. ಒಂದು ವಾರ ವೀಕ್ಷಕರಿಗೆ ಇಷ್ಟವಾಗುವ ಸಂಗೀತ ಇನ್ನೊಂದು ವಾರ ಕಷ್ಟವಾಗ್ತಾರೆ. ಕಳೆದ ವಾರ ಆಸ್ಪತ್ರೆಗೆ ಹೋಗಿ ಬಂದ್ಮೇಲೆ ಕಪ್‌ ಗೆಲ್ಲೋವರೆಗೂ ಬಿಡಲ್ಲ ಅಂತೆಲ್ಲಾ ಹೇಳ್ಕೊಂಡಿದ್ದ ಸಂಗೀತ ಇದ್ದಕ್ಕಿದ್ದಂತೆ ರಿಯಾಲಿಟಿ ಶೋನಲ್ಲಿ ಡೌನ್‌ ಆದವರಂತೆ, ಸುಸ್ತಾದವರಂತೆ ಕಾಣಿಸಿಕೊಳ್ತಾರೆ. ಹೀಗೆ ಬಿಗ್‌ಬಾಸ್‌ ಸ್ಪರ್ಧಿಗಳ ನಡುವಿನ ಬಿಗುವಿನ ಸ್ಪರ್ಧೆ ಹಾಗೂ ಕಳೆದ ವಾರದ ಕೆಟ್ಟ ಫೈಟ್ ನೋಡಿದ್ದ ವೀಕ್ಷಕರಲ್ಲಿ ಕಿಚ್ಚ ಸುದೀಪ್‌ ಆದ್ರೂ ಇವರಿಗೆಲ್ಲಾ ಸರಿಯಾಗಿ ಬಿಸಿ ಮುಟ್ಟಿಸ್ತಾರೆ ಎಂಬ ನಂಬಿಕೆಯಿತ್ತು. ಆದ್ರೆ ಅದು ಹುಸಿಯಾದ್ಮೇಲೆ ಸುದೀಪ್‌ ಬಗ್ಗೆಯೂ ಸ್ವಲ್ಪ ಬೇಸರವಾಗಿದ್ದು ನಿಜ. ಇದೇ ಕಾರಣಕ್ಕೋ ಏನೋ ಈ ವಾರ ಕಿಚ್ಚ ಕೈಯಡುಗೆ ಸ್ಪರ್ಧಿಗಳ ಹೊಟ್ಟೆ ಸೇರಿದೆ. ಈ ಮೂಲಕ ವೀಕ್ಷಕರು ಕೂಡ ಕಳೆದ ವಾರ ಬಿಗ್‌ಬಾಸ್‌ ಶೋನಲ್ಲಿ ಆದ ತಪ್ಪುಗಳನ್ನು ಹೊಟ್ಟೆಗೆ ಹಾಕ್ಕೊಳ್ಳಲಿ ಎಂಬ ಸಂದೇಶವನ್ನು ಬಿಗ್‌ಬಾಸ್‌ ರವಾನಿಸಿದ್ದಾರೆ.. ಗ್ರ್ಯಾಂಡ್‌ ಫಿನಾಲೆಗೆ ಹತ್ತಿರವಾಗುತ್ತಿರುವ ಬಿಗ್‌ಬಾಸ್‌ ಶೋದಲ್ಲಿ ಇನ್ನಾದ್ರೂ ಒಂದಿಷ್ಟು ಹಾಸ್ಯ, ನಗು, ಪ್ರೀತಿ, ಸ್ನೇಹ, ಒಳ್ಳೆಯ ಬಾಂಧವ್ಯ ಮೂಡಿಬರಬೇಕಿದೆ.. ಅದು ಬಿಟ್ಟು ಟೀಚರ್‌ ಸಂಗೀತ ವಿರುದ್ಧವೂ ಸ್ಟೂಡೆಂಟ್‌ ನಮ್ರತಾ ಬೋರ್ಡ್‌ನಲ್ಲಿ ಬಯಾಸ್ಡ್‌ ಅಂತ ಬರೆಯುವಂತಹ ಮನಸ್ಥಿತಿಯೇ ಮುಂದುವರಿದ್ರೆ ಈ ಸ್ಪರ್ಧಿಗಳ ಗ್ರಾಫ್‌ ಕೂಡ ಇಳಿಯುತ್ತಾ ಸಾಗುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

Shantha Kumari