PAK ಬಗ್ಗಿಸಿದ್ದೇ ಪರಾಕ್ರಮಿ ಪಂತ್  – ಟೀಂ ಇಂಡಿಯಾ ಲಕ್ಕಿ ಸ್ಟಾರ್ ಆಗಿದ್ದೇಗೆ?
ಸಾವು ಗೆದ್ದ ವೀರನ ರೋಚಕ ಕಥೆ

PAK ಬಗ್ಗಿಸಿದ್ದೇ ಪರಾಕ್ರಮಿ ಪಂತ್  – ಟೀಂ ಇಂಡಿಯಾ ಲಕ್ಕಿ ಸ್ಟಾರ್ ಆಗಿದ್ದೇಗೆ?ಸಾವು ಗೆದ್ದ ವೀರನ ರೋಚಕ ಕಥೆ

ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ರೋಚಕ ಜಯ ಗಳಿಸಿದೆ. ಬಟ್ ಈ ಮ್ಯಾಚ್​ನಲ್ಲಿ ಭಾರತದ ಗೆಲುವಿನ ಸಾಧ್ಯತೆ ಶೇಕಡಾ 8ರಷ್ಟಿದ್ದ ಸಮಯವೊಂದಿತ್ತು. ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲುವ ಸಾಧ್ಯತೆ ಶೇ.92 ಇತ್ತು. ಭಾರತ ಸೋತೆ ಬಿಡ್ತು ಅಂತಾ ಟಿವಿ ಆಫ್​ ಮಾಡಿದವರೂ ಇದ್ದಾರೆ. ಆದರೆ ಮೈದಾನದಲ್ಲಿ ನಡೆದ ಅದ್ಭುತ ಆಟದಿಂದ ಇಡೀ ಪಂದ್ಯದ ಚಿತ್ರಣವೇ ಬದಲಾಯ್ತು. ಈ ಇಬ್ಬರು ಆಪತ್ಭಾಂದವರು ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದ್ರು. ಅದುವೇ ಪವರ್​ಫುಲ್ ಪಂತ್ & ಬೌಲಿಂಗ್ ಬ್ರಹ್ಮಾಸ್ತ್ರ ಜಸ್​ಪ್ರೀತ್ ಬುಮ್ರಾ. ಬದ್ಧವೈರಿ ಪಾಕಿಸ್ತಾನ ಎದುರಿನ ಕದನದಲ್ಲಿ ಭಾರತ ಗೆದ್ದು ಬೀಗೋಕೇ ಕಾರಣವೇ ಈ ಇಬ್ಬರು ಛಲದಂಕಮಲ್ಲರು. ಬ್ಯಾಟಿಂಗ್ ವಿಭಾಗದಲ್ಲಿ ರಿಷಬ್ ಪಂತ್ ಬ್ಯಾಕ್ ಬೋನ್ ಆಗಿ ನಿಂತ್ರೆ ಬೌಲಿಂಗ್​ನಲ್ಲಿ ಬುಮ್ರಾ ಭಾರತಕ್ಕೆ ಗೆಲುವಿನ ಕಿರೀಟ ತಂದಿಟ್ಟಿದ್ರು. ಇಲ್ಲಿ ಬುಮ್ರಾ ಆಟದ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಬಟ್ ರಿಷಬ್ ಪಂತ್​ಗೆ ನಿಜಕ್ಕೂ ಹ್ಯಾಟ್ಸ್​ಆಫ್ ಹೇಳಲೇಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಕೈಕೊಟ್ರೂ ಪಂತ್ ಮಾತ್ರ ನಿಂತು ಭಾರತದ ಪರ ರನ್ ಪೇರಿಸುವಲ್ಲಿ ಆಸರೆಯಾಗಿದ್ರು. ಆದ್ರೆ ಪಂತ್ ಈ ಆಟದ ಹಿಂದೆ ಅವ್ರ ಅವಿರತ ಶ್ರಮ ಇದೆ. ಒಂದೂವರೆ ವರ್ಷದಲ್ಲಿ ನಡೆದ ಘಟನೆಗಳು ಪಂತ್ ಬದುಕಿನ ದಿಕ್ಕನ್ನೇ ಬದಲಿಸಿದೆ.

ಇದನ್ನೂ ಓದಿ: ಪಾಕ್ ಬೆಂಡೆತ್ತಿದ ಕನ್ನಡಿಗ – ಚಿಕ್ಕಮಗಳೂರು To ಅಮೆರಿಕ ಜರ್ನಿ ಹೇಗಿತ್ತು?

ಭಾರತದ ಅದೃಷ್ಟವಂತ ಪಂತ್!

ಟಿ-20 ವಿಶ್ವಕಪ್​ನಲ್ಲಿ ರಿಷಬ್ ಪಂತ್ ನಿಜಕ್ಕೂ ಭಾರತದ ಪಾಲಿಗೆ ಅದೃಷ್ಟವಂತ ಅಂತಾನೇ ಹೇಳ್ಬೇಕು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ರಿಯಲ್​​ ಮ್ಯಾಚ್​ ವಿನ್ನರ್ ಇದೇ ಪಂತ್. ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿದ್ದಾಗ ನಂಬರ್​ 3 ಸ್ಲಾಟ್​​ನಲ್ಲಿ ಕಣಕ್ಕಿಳಿದಿದ್ದ ಪಂತ್​ ಮುಂದಿದ್ದಿದ್ದು ಬಿಗ್​ ಚಾಲೆಂಜ್​. ಆರಂಭಿಕ ಆಘಾತದ ಶಾಕ್​ ಒಂದೆಡೆಯಾದ್ರೆ, ಕ್ರಿಸ್​​ಗೆ ಸೆಟ್​ ಆಗೋದ್ರೊಳಗೆ ಇನ್ನೊಂದು ತುದಿಯಲ್ಲಿ ಪೆವಿಲಿಯನ್​ ಪರೇಡ್​ ನಡೀತಿತ್ತು. ಇಂತಹ ಟೈಮಲ್ಲಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ಜೀವದಾನಗಳು ಪಂತ್​ಗೆ ಸಿಕ್ವು. ಈ ಜೀವದಾನಗಳ ಲಾಭ ಪಡೆದ ಪಂತ್​ 42 ರನ್​ಗಳ ಅಮೂಲ್ಯ ಕಾಣಿಕೆ ನೀಡಿದ್ರು. ಟೀಮ್​ ಇಂಡಿಯಾ ಪರ ಪಾಕ್ ವಿರುದ್ಧದ ಪಂದ್ಯದಲ್ಲಿ ದಾಖಲಾದ ವೈಯಕ್ತಿಕ ಹೈಯೆಸ್ಟ್​ ಸ್ಕೋರ್ ಇದೇ. ಈ 42 ರನ್​ಗಳಿಂದಲೇ ಟೀಮ್​ ಇಂಡಿಯಾ ಗೌರವಯುತ ಸ್ಕೋರ್​ ಕಲೆ ಹಾಕಿತು. ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಲ್ಲೂ ಪಂತ್​ ಮಿಂಚಿದ್ರು. ರಿಷಭ್​ ಪಂತ್ ಹಿಡಿದ 3 ಕ್ರೂಶಿಯಲ್​​ ಕ್ಯಾಚ್​ಗಳು ಪಂದ್ಯದ ಗತಿಯನ್ನೇ ಬದಲಾಯಿಸಿದ್ವು. ಜೊತೆಗೆ ಉಸ್ಮಾನ್​​ ಖಾನ್​​ LBW ವಿಚಾರದಲ್ಲಿ DRS ಗೊಂದಲ ಊಂಟಾಯ್ತು. ಆಗ ಪಂತ್​ ನೀಡಿದ ರೈಟ್​ ಸಜೇಶನ್​, ವಿಕೆಟ್​​ನ ಗಿಫ್ಟ್​ ನೀಡಿತು. ಇದೇ ಕಾರಣಕ್ಕೆ ರಿಷಭ್‌ ಪಂತ್‌ ಬಗ್ಗೆ ಮಾಜಿ ಕೋಚ್ ರವಿ ಶಾಸ್ತ್ರಿ ಮನ ಬಿಚ್ಚಿ ಮಾತನಾಡಿದ್ರು. ಪಂತ್ ಗೆ ಅಪಘಾತ ಆದಾಗ ಕಣ್ಣೀರು ಹಾಕಿದ್ದನ್ನ ನೆನಪಿಸಿಕೊಂಡಿದ್ರು.

ಟಿ-20 ವಿಶ್ವಕಪ್​ನಲ್ಲಿ ಭಾರತದ ಪರ ಅಬ್ಬರಿಸುತ್ತಿರೋ ಪಂತ್ ಸಾವನ್ನೇ ಗೆದ್ದು ಬಂದಿರೋ ವೀರ. 2022ರ ಡಿಸೆಂಬರ್‌ ತಿಂಗಳಲ್ಲಿ ಭಾರತ ಕ್ರಿಕೆಟ್‌ನಲ್ಲಿ ಕರಿಛಾಯೆ ಆವರಿಸಿತ್ತು. ಭೀಕರ ರಸ್ತೆ ಅಪಘಾತದಿಂದಾಗಿ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ರು. ಅವತ್ತಿನ ಅವ್ರ ಸ್ಥಿತಿ ನೋಡಿದವ್ರು ಅಬ್ಬಾ ಉಳಿದಿದ್ದೇ ಹೆಚ್ಚು ಅಂತಾ ಉದ್ಘಾರ ತೆರೆದಿದ್ರು. ಅದೇ ಪುನರ್ಜನ್ಮವನ್ನ ಬಳಸಿಕೊಂಡ ಪಂತ್ ಮರಳಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದು ಒಂದು ಪವಾಡವೇ ಸರಿ. ಅದೂ ಕೂಡ ನಡೆಯೋಕೂ ಆಗದ ಸ್ಥಿತಿಯಲ್ಲಿದ್ದ ಪಂತ್ ಜಸ್ಟ್ ಒಂದೂವರೆ ವರ್ಷದಲ್ಲೇ ಇಡೀ ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತೆ. 14 ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದ ಫೈಟರ್‌, ಕೊನೆಗೂ ಸಂಪೂರ್ಣ ಚೇತರಿಸಿಕೊಂಡು ಮೈದಾನಕ್ಕಿಳಿದರು. ಐಪಿಎಲ್‌ 2024ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕಣಕ್ಕಿಳಿದು ಮಿಂಚಿದರು. ಆದರೆ, ಆ ಕಂಬ್ಯಾಕ್‌ ಅಷ್ಟು ಸುಲಭವಾಗಿರಲಿಲ್ಲ. ಸಾವು-ಬದುಕಿನ ನಡುವೆ ಹೋರಾಡಿ ಮತ್ತೆ ಮೈದಾನಕ್ಕಿಳಿದ ಪಂತ್‌, ಆ ಒಂದು ವರ್ಷಗಳ ಕಾಲ ನರಕ ಯಾತನೆ ಅನುಭವಿಸಿದ್ದರು. ಮೊದಲ ಎರಡು ತಿಂಗಳವರೆಗೆ ಹಲ್ಲುಜ್ಜಲು ಕೂಡಾ ಸಾಧ್ಯವಾಗಿರಲಿಲ್ಲ. ದೇಹದ ಅನೇಕ ಕಡೆ ಮುರಿತವಾಗಿತ್ತು. ಮೊಣಕಾಲು ಗಾಯಕ್ಕೆ ಅಸ್ಥಿರಜ್ಜು ಚಿಕಿತ್ಸೆಯ ಅಗತ್ಯವಿತ್ತು. ಆದ್ರೆ ವೃತ್ತಿಜೀವನಕ್ಕೆ ಮರಳಬೇಕಂದ್ರೆ ಗಾಯಗಳಿಂದ ಗುಣಮುಖರಾಗುವುದು ನಿರ್ಣಾಯಕವಾಗಿತ್ತು. ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಪಂತ್ ಯಾರೂ ಊಹೆ ಮಾಡೋಕೂ ಆಗದಂತೆ ಚೇತರಿಸಿಕೊಂಡಿದ್ರು. ಅಷ್ಟೇ ಯಾಕೆ ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಭ್ ಪಂತ್ ಮುನ್ನಡೆಸಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ರು. ತಂಡದ ಪರ 13 ಪಂದ್ಯಗಳಲ್ಲಿ ಆಡಿದ ಪಂತ್‌ 3 ಅರ್ಧಶತಕಗಳೊಂದಿಗೆ 446 ರನ್ ಗಳಿಸಿದ್ರು. 155ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸುವ ಮೂಲಕ ತಂಡದ ಅಗ್ರ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. ಇದೇ ಪ್ರದರ್ಶನದಿಂದ ಟಿ20 ವಿಶ್ವಕಪ್​ಗೂ ಸೆಲೆಕ್ಟ್ ಆಗಿ ಈಗ ಭಾರತಕ್ಕೂ ಆಸರೆಯಾಗ್ತಿದ್ದಾರೆ. ಪಂತ್ ಪವರ್ ನೋಡಿ ಫ್ಯಾನ್ಸ್ ಕೂಡ ಬಹುಪರಾಕ್ ಹಾಕ್ತಿದ್ದಾರೆ.

Shwetha M

Leave a Reply

Your email address will not be published. Required fields are marked *