ಕನ್ನಡಿಗ ವಿನಯ್ ಬೌಲಿಂಗ್ ಕೋಚ್? – ಟೀಂ ಇಂಡಿಯಾಗೆ ದಾವಣಗೆರೆ ಎಕ್ಸ್​​ಪ್ರೆಸ್?
RCB ಮಾಜಿ ಆಟಗಾರನ ಸ್ಟ್ರೆಂಥ್ ಏನು?

ಕನ್ನಡಿಗ ವಿನಯ್ ಬೌಲಿಂಗ್ ಕೋಚ್? – ಟೀಂ ಇಂಡಿಯಾಗೆ ದಾವಣಗೆರೆ ಎಕ್ಸ್​​ಪ್ರೆಸ್?RCB ಮಾಜಿ ಆಟಗಾರನ ಸ್ಟ್ರೆಂಥ್ ಏನು?

ಟೀಂ ಇಂಡಿಯಾದಲ್ಲಿ ಈಗ ಮೇಜರ್ ಸರ್ಜರಿ ಆಗ್ತಿದೆ. ಅದು ಆಟಗಾರರು ಹಾಗೇ ಆಯ್ಕೆ ಸಮಿತಿಯಲ್ಲೂ ಕೂಡ ದೊಡ್ಡ ದೊಡ್ಡ ಬದಲಾವಣೆ ನಡೀತಿದೆ. ಇತ್ತೀಚೆಗಷ್ಟೇ ಬಿಸಿಸಿಐ, ಕ್ರಿಕೆಟ್​ ದಿಗ್ಗಜ ಮಾಜಿ ಆರಂಭಿಕ ಬ್ಯಾಟರ್ ಗೌತಮ್​ ಗಂಭೀರ್​ ಅವರನ್ನು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ನೇಮಿಸಿದೆ. ಕನ್ನಡಿಗ ರಾಹುಲ್​ ದ್ರಾವಿಡ್​ ಅವರ ಉತ್ತರಾಧಿಕಾರಿ ಆಗಿ ಗಂಭೀರ್​ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಅನೌನ್ಸ್​ ಮಾಡಿದೆ. ಈ ಬೆನ್ನಲ್ಲೇ ಸಪೋರ್ಟಿಂಗ್​ ಸ್ಟ್ಯಾಫ್​ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಬೌಲಿಂಗ್, ಬ್ಯಾಟಿಂಗ್ ಕೋಚ್ ಸೇರಿದಂತೆ ಇತರೆ ಸಿಬ್ಬಂದಿಯ ಸೆಲೆಕ್ಷನ್​ಗೂ ಕಸರತ್ತು ನಡೀತಿದೆ.  ಸದ್ಯದ ಮಾಹಿತಿ ಪ್ರಕಾರ ಕೆಕೆಆರ್ ತಂಡದ ಸಪೋರ್ಟಿಂಗ್​ ಕೋಚ್​​​ ಆಗಿರೋ ಅಭಿಷೇಕ್​ ನಾಯರ್​ ಭಾರತ ಕ್ರಿಕೆಟ್​ ತಂಡದ ಸಹಾಯಕ ತರಬೇತುದಾರರು ಆಗಲಿದ್ದಾರೆ ಎನ್ನಲಾಗ್ತಿದೆ. ಹಾಗೇ ಬೌಲಿಂಗ್​ ಕೋಚ್​​ ಹುದ್ದೆಗೆ ಲೆಜೆಂಡರಿ ಕ್ರಿಕೆಟರ್ಸ್​ ಆದ ಜಹೀರ್​ ಖಾನ್​ ಮತ್ತು ಲಕ್ಷ್ಮೀಪತಿ ಬಾಲಾಜಿ ಅವರನ್ನು ಬಿಸಿಸಿಐ ಶಾರ್ಟ್​​ ಲಿಸ್ಟ್​ನಲ್ಲಿ ಸೇರಿಸಿದೆ. ಬಟ್ ಈಗ ಬೌಲಿಂಗ್ ಕೋಚ್​ ರೇಸ್​ಗೆ ಕನ್ನಡಿಗ ಮತ್ತು ಆರ್​ಸಿಬಿಯ ಮಾಜಿ ಪ್ಲೇಯರ್ ಹೆಸರೂ ಸೇರಿಕೊಂಡಿದೆ. ಅದುವೇ ದಾವಣಗೆರೆ ಎಕ್ಸ್​ಪ್ರೆಸ್ ಅಂತಾನೇ ಫೇಮಸ್ ಆಗಿರೋ ವಿನಯ್ ಕುಮಾರ್.

ಬೌಲಿಂಗ್ ಕೋಚ್ ಆಗ್ತಾರಾ ಕನ್ನಡಿಗ?

ಕನ್ನಡಿಗ ಮತ್ತು ಆರ್​​ಸಿಬಿ ಮಾಜಿ ಪ್ಲೇಯರ್​​ ವಿನಯ್​ ಕುಮಾರ್​​ ಅವರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸಬೇಕು ಎಂದು ಬಿಸಿಸಿಐಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಗಂಭೀರ್​ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಮತ್ತು ಬೌಲಿಂಗ್ ಕೋಚ್ ಆಗಿ ವಿನಯ್ ಕುಮಾರ್ ಬೇಕು ಎಂದು ಗಂಭೀರ್ ಬೇಡಿಕೆ ಇಟ್ಟಿದ್ದಾರಂತೆ. ಬಿಸಿಸಿಐ ಶೀಘ್ರದಲ್ಲೇ ಕೋಚಿಂಗ್ ಸಹಾಯಕ ಸಿಬ್ಬಂದಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಿದೆ. ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ಭಾರತ ತಂಡದ ಮಾಜಿ ಆಟಗಾರ ವಿನಯ್ ಕುಮಾರ್ ಬೌಲಿಂಗ್ ಕೋಚ್ ಆಗುತ್ತಾರೆ ಎನ್ನಲಾಗಿದೆ. 40 ವರ್ಷದ ವಿನಯ್ ಕುಮಾರ್ ಅವರಿಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಯಲ್ಲಿ ಆಡಿರುವ ಅಪಾರ ಅನುಭವ ಇದೆ. ಮುಖ್ಯವಾಗಿ ಕೆಕೆಆರ್ ತಂಡದಲ್ಲಿ ಗಂಭೀರ್ ನಾಯಕರಾಗಿದ್ದ ಅವಧಿಯಲ್ಲಿ ವಿನಯ್ ಕುಮಾರ್ ಮುಖ್ಯ ಬೌಲರ್ ಆಗಿದ್ದರು. ಹೀಗಾಗಿ ವಿನಯ್ ಕುಮಾರ್ ಬಗ್ಗೆ ಗಂಭೀರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ವಿನಯ್ ಮೇಲೆ ಗಂಭೀರ್ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಭಾರತ ತಂಡಕ್ಕಾಗಿ ವಿನಯ್ ಕುಮಾರ್ 1 ಟೆಸ್ಟ್, 31 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. 105 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಅನುಭವ ಇದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಎರಡು ಬಾರಿ ರಣಜಿ ಟ್ರೋಫಿ ಗೆದ್ದಿದೆ. 139 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 504 ವಿಕೆಟ್ ಪಡೆದಿದ್ದಾರೆ.

ಸದ್ಯ ಟೀಂ ಇಂಡಿಯಾದ ಬೌಲಿಂಗ್ ಕೋಚ್ ರೇಸ್​ನಲ್ಲಿರೋ ಕನ್ನಡಿಗ ವಿನಯ್ ಕುಮಾರ್ ಬಗ್ಗೆ ನಾವಿಲ್ಲಿ ಹೇಳಲೇಬೇಕು. ದಾವಣಗೆರೆ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದಿರುವ ವಿನಯ್‌ ಕುಮಾರ್‌ ಭಾರತ ತಂಡದ ಮಾಜಿ ವೇಗದ ಬೌಲರ್‌. ವೇಗದ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಭಾರತ ತಂಡದ ಹಲವು ಗೆಲುವುಗಳಲ್ಲಿ ಇವರೂ ನೆರವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಾಗೇ ಕರ್ನಾಟಕ ತಂಡದ ನಾಯಕರಾಗಿದ್ದಾಗ ಅತ್ಯಂತ ಯಶಸ್ವಿಯಾಗಿ, ಸಮರ್ಥವಾಗಿ ನಿಭಾಯಿಸಿದ್ದಾರೆ. ವಿನಯ್ ಬಳಿ ಸಾಕಷ್ಟು ಅನುಭವವಿದೆ. ನಿವೃತ್ತಿಯ ನಂತರ ಕೋಚ್ ಆಗಿಯೂ ಪಳಗಿರುವ ವಿನಯ್ ಕುಮಾರ್ ಭಾರತದ ಬೌಲಿಂಗ್ ಕೋಚ್ ಆದರೆ ಖಂಡಿತಾ ಯಶಸ್ವಿಯಾಗಬಲ್ಲರು.

Shwetha M