ಗಂಭೀರ್ ಗಿಂತ ದ್ರಾವಿಡ್ ಬೆಸ್ಟ್ – 4 ತಿಂಗಳು.. 3 ಸರಣಿ.. 2 ಸೋಲು!
ಗೌತಮ್ ಫೇಲ್.. BCCI ವಾರ್ನಿಂಗ್
ಹತ್ತಾರು ರೂಲ್ಸ್.. ನೂರೆಂಟು ಕಂಡೀಷನ್ಸ್ ಹಾಕಿಯೇ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೇರಿದ್ರು. ಬಿಸಿಸಿಐ ಸದಸ್ಯರು ಕೂಡ ಗಂಭೀರ್ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಚೇರ್ ಬಿಟ್ಟುಕೊಟ್ಟಿದ್ರು. ಆದ್ರೆ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಪಟ್ಟಕ್ಕೇರಿ 6 ತಿಂಗಳು ಕಳೆಯೋ ಅಷ್ಟ್ರಲ್ಲೇ ಗಂಭೀರ್ ಕುರ್ಚಿಗೆ ಕುತ್ತು ಬಂದಿದೆ. ಸಾಲು ಸಾಲು ಸೋಲು ವಿಶ್ವಕ್ರಿಕೆಟ್ನಲ್ಲಿ ಟೀಂ ಇಂಡಿಯಾಗೆ ಭಾರೀ ಮುಖಭಂಗ ತಂದಿಟ್ಟಿದೆ. ಮಾಜಿ ಕ್ರಿಕೆಟಿಗರು ಕೆಂಡ ಕಾರ್ತಿದ್ದಾರೆ. ಅಷ್ಟೇ ಯಾಕೆ ದಿಗ್ಗಜ ಆಟಗಾರರೆಲ್ಲಾ ಈಗ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ರನ್ನ ನೆನಪು ಮಾಡಿಕೊಳ್ತಿದ್ದಾರೆ. ದ್ರಾವಿಡ್ ಅಧಿಕಾರಾವಧಿಯಲ್ಲಿ ಇದ್ದ ತಂಡಕ್ಕೂ ಈಗಿರೋ ತಂಡಕ್ಕೂ ತುಂಬಾನೇ ಡಿಫರೆನ್ಸಸ್ ಇದೆ ಅಂತಾ ವಿಶ್ಲೇಷಣೆ ಮಾಡ್ತಿದ್ದಾರೆ. ಹಾಗಾದ್ರೆ ಕೋಚ್ ಸ್ಥಾನದಲ್ಲಿದ್ದು ಎಡವಿದ್ರಾ ಗಂಭೀರ್? ದ್ರಾವಿಡ್ ಯಾಕೆ ಬೆಸ್ಟ್ ಎನಿಸಿಕೊಳ್ತಿದ್ದಾರೆ.? 3 ಸರಣಿಗಳ ಪೈಕಿ 2 ಸರಣಿ ಸೋಲು ಎಂಥಾ ಪರಿಣಾಮ ಬೀರಿದೆ? ಬಿಸಿಸಿಐಗೆ ಆಗಿರೋ ತಲೆಬಿಸಿ ಏನು? ಗಂಭೀರ್ ಕೋಚ್ ಗೆ ಗೇಟ್ ಪಾಸ್ ಕೊಡ್ತಾರಾ? ಈ ಬಗೆಗಿನ ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಕೊಹ್ಲಿ Or ಕೆಎಲ್? – ಐವರ ರೇಸ್.. ವಿದೇಶಿಗನಿಗೆ ಲಕ್?
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತು ಕಿವೀಸ್ ಪಡೆ ಎದುರು ವೈಟ್ ವಾಶ್ ಅವಮಾನ ಅನುಭವಿಸಿದೆ. ಭಾರತೀಯ ಆಟಗಾರರ ಈ ಕಳಪೆ ಆಟ ಭಾರತೀಯ ಅಭಿಮಾನಿಗಳ ತಾಳ್ಮೆ ಕೆಡಿಸಿದೆ. ಮಾಜಿ ಆಟಗಾರರು, ಫ್ಯಾನ್ಸ್ ಸೇರಿದಂತೆ ಬಹುತೇಕರು ಕೋಚ್ ಗೌತಮ್ ಗಂಭೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲಂಕಾ ಸರಣಿಯ ಸೋಲು, ತವರಿನಲ್ಲಿ ಆದ ಈ ಮುಖಭಂಗವನ್ನ ಬಿಸಿಸಿಐ ಸೀರಿಯಸ್ಸಾಗಿ ತೆಗೆದುಕೊಂಡಿದೆ. ಗಂಭೀರ್ ಮುಂದೆ ಸಾಲು ಸಾಲು ಪ್ರಶ್ನೆಗಳನ್ನ ಇಟ್ಟಿದೆ.
ಸಂಪೂರ್ಣ ಸ್ವಾತಂತ್ರ್ಯ ನೀಡಿದ್ರೂ ನೋ ಯೂಸ್!
ಟಿ-20 ವಿಶ್ವಕಪ್ ಬಳಿಕ ಕನ್ನಡಿಗ ರಾಹುಲ್ ದ್ರಾವಿಡ್ ಅವ್ರ ಟೀಂ ಇಂಡಿಯಾದ ಹೆಡ್ ಕೋಚ್ ಅಧಿಕಾರಾವಧಿ ಮುಗಿದಿತ್ತು. ಆ ನಂತ್ರ ದ್ರಾವಿಡ್ ಸ್ಥಾನಕ್ಕೆ ಐಪಿಎಲ್ ಚಾಂಪಿಯನ್ ತಂಡ ಕೆಕೆಆರ್ ನ ಮೆಂಟರ್ ಆಗಿದ್ದ ಗಂಭೀರ್ರನ್ನ ಆ ಹುದ್ದೆಗೆ ತಂದು ಕೂರಿಸಲಾಗಿತ್ತು. ಬಿಸಿಸಿಐ ಅಂತೂ ಗಂಭೀರ್ ಗೆ ತಂಡದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಗಂಭೀರ್ ತಮ್ಮ ಆಯ್ಕೆಯ ಕೋಚಿಂಗ್ ಸಿಬ್ಬಂದಿಯನ್ನು ನೇಮಕ ಮಾಡಿದ್ರು. ಆದರೆ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಓನ್ ಡಿಸಿಷನ್ಸ್ ತೆಗೆದುಕೊಳ್ಳುವಂಥ ಪರ್ಮಿಷನ್ ನೀಡಿದ್ರೂ ಗಂಭೀರ್ ಟೆಸ್ಟ್ ಮತ್ತು ಏಕದಿನ ಮಾದರಿ ಕ್ರಿಕೆಟ್ ಎರಡರಲ್ಲೂ ಫೇಲ್ಯೂರ್ ಆಗಿದ್ದಾರೆ. ಮೂರು ಸರಣಿಗಳ ಪೈಕಿ 2ರಲ್ಲಿ ಸೋತು ಸುಣ್ಣವಾಗಿದ್ದಾರೆ. ಇದೀಗ ಎಚ್ಚೆತ್ತಿರೋ ಬಿಸಿಸಿಐ ಗಂಭೀರ್ ಅವರ ಕೆಲಸವನ್ನು ಪರಿಶೀಲಿಸುತ್ತಿದೆ. ಟೀಮ್ ಇಂಡಿಯಾದ ಹೀನಾಯ ಸೋಲಿನ ನಂತರ ಪ್ರಶ್ನೆಗಳು ಮೂಡುತ್ತಿವೆ.
ದ್ರಾವಿಡ್-ಶಾಸ್ತ್ರಿಗೂ ಇಲ್ಲದ ಅವಕಾಶ ಗಂಭೀರ್ ಗೆ ಸಿಕ್ಕಿತ್ತು!
ಈ ಹಿಂದೆ ಟೀಂ ಇಂಡಿಯಾ ಕೋಚ್ ಆಗಿದ್ದಂತ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಸಂಪೂರ್ಣ ಅಧಿಕಾರ ಕೊಟ್ಟಿರಲಿಲ್ಲ. ಆದರೆ ಈ ಸೌಲಭ್ಯವನ್ನು ಗಂಭೀರ್‌ಗೆ ನೀಡಲಾಗಿದೆ. ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಸೆಲೆಕ್ಟ್ ಮಾಡಿದ್ರು. ಬಿಸಿಸಿಐ ಕೂಡ ಗಂಭೀರ್ ಸಲಹೆಗೆ ಓಕೆ ಅಂದಿತ್ತು. ಇದ್ರಿಂದ ಒಳ್ಳೆ ರಿಸಲ್ಟ್ ಬರುತ್ತೆ ಅನ್ನೋದು ಅವ್ರ ನಿರೀಕ್ಷೆ ಆಗಿತ್ತು. ಬಟ್ ಸಿಕ್ಕಿದ್ದು ಮಾತ್ರ ಬರೀ ಸೋಲು. ಬಿಸಿಸಿಐ ನಿಯಮ ಪುಸ್ತಕದ ಪ್ರಕಾರ, ಮುಖ್ಯ ಕೋಚ್ ಆದವ್ರು ಆಯ್ಕೆ ಸಮಿತಿ ಸಭೆಯ ಭಾಗವಾಗಿಲ್ಲ. ಆದ್ರೂ ಕೂಡ ಆಸ್ಟ್ರೇಲಿಯಾ ಪ್ರವಾಸದ ಮಹತ್ವವನ್ನು ಪರಿಗಣಿಸಿ ಗಂಭೀರ್‌ಗೆ ನಿಯಮಗಳನ್ನು ಬದಿಗಿಟ್ಟು ಅದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಗಂಭೀರ್ ಕೋರಿಕೆಯ ಮೇರೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ವೇಗದ ಬೌಲರ್ ಹರ್ಷಿತ್ ರಾಣಾ ಮತ್ತು ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಬ್ಬರು ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ. ಈ ಹಿಂದಿನ ಸರಣಿಗಳಲ್ಲೂ ಗಂಭಿರ್ ಮಾತಿಗೆ ಮಣೆ ಹಾಕಿದ್ರು. ಆದ್ರೆ ರಿಸಲ್ಟ್ ನಲ್ಲಿ ಮಾತ್ರ ಗಂಭೀರ್ ಮಂತ್ರ ಫೇಲ್ಯೂರ್ ಆಗ್ತಿದೆ.
ಲಂಕಾ ಏಕದಿನ ಸರಣಿ ಸೋಲು.. ನ್ಯೂಜಿಲೆಂಡ್ ಎದುರು ಟೆಸ್ಟ್ ಸೋಲು!
ಇದೇ ವರ್ಷದ ಜುಲೈನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ತೆರಳಿತ್ತು. ಇಲ್ಲಿ ಟಿ20 ಹಾಗೂ ಏಕದಿನ ಸರಣಿಗಳು ನಡೆದಿದ್ದವು. ಆದರೆ, 27 ವರ್ಷಗಳಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡ ಸೋಲೊಪ್ಪಿಕೊಳ್ತು. ಇದು ಗಂಭೀರ್‌ಗೆ ಮೊದಲ ಸರಣಿ ಆಗಿತ್ತು. ಹಾಗೇ ಇತ್ತೀಚೆಗೆ ನ್ಯೂಜಿಲೆಂಡ್ ತಂಡ ತವರು ನೆಲದಲ್ಲಿ ಟೀಮ್ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿದೆ. ಭಾರತ ತಂಡ ತನ್ನ ತವರು ನೆಲದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಹಿಂದೆಂದೂ ಇಂತಹ ಕೆಟ್ಟ ಪ್ರದರ್ಶನ ತೋರಿರಲಿಲ್ಲ.
ಪ್ಲೇಯಿಂಗ್ 11ನಲ್ಲಿ ಬದಲಾವಣೆ.. ಪಿಚ್ ಬಗ್ಗೆಯೂ ಇಲ್ಲ ಮಾಹಿತಿ!
ಗಂಭಿರ್ ಟೀಂ ಇಂಡಿಯಾ ಕೋಚ್ ಆದ್ಮೇಲೆ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡ್ತಿದ್ದಾರೆ. ಅದ್ರಲ್ಲೂ ಬ್ಯಾಟಿಂಗ್ ಆರ್ಡರ್ ಕಂಪ್ಲೀಟ್ ಚೇಂಜ್ ಮಾಡಿದ್ದಾರೆ. ಇತ್ತೀಚೆಗೆ ಕಿವೀಸ್ ವಿರುದ್ಧದ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದ ಸಂಜೆ ಸಿರಾಜ್ ಅವರನ್ನು ನೈಟ್ ವಾಚ್ ಮ್ಯಾನ್ ಆಗಿ ಕಳುಹಿಸಲಾಗಿತ್ತು. ಸರ್ಫರಾಜ್ ಅವರನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಎಂಟನೇ ಸ್ಥಾನದಲ್ಲಿ ಕೈಬಿಡಲಾಯಿತು. ಗಂಭೀರ್ ಅವರ ಈ ಯಾವುದೇ ಕಾರ್ಯತಂತ್ರ ವರ್ಕ್ ಆಗಲಿಲ್ಲ.
ಗಂಭೀರ್ ಮತ್ತು ಆಟಗಾರರ ನಡುವೆ ಇಲ್ಲ ಕೋ ಆರ್ಡಿನೇಷನ್!
ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿದ್ದೇ ಎಷ್ಟೋ ಆಟಗಾರರಿಗೆ ಇಷ್ಟ ಇರಲಿಲ್ಲ. ಯಾಕಂದ್ರೆ ರಾಹುಲ್ ದ್ರಾವಿಡ್ ರಂಥ ಕೂಲ್ ಌಂಡ್ ಕ್ಲೀನ್ ಕೋಚ್ ಜೊತೆ ಪಳಗಿದ್ದ ಆಟಗಾರರಿಗೆ ಗಂಭೀರ್ರಂಥ ಸ್ಟ್ರಿಕ್ಟ್ ದಿಗ್ಗಜನ ಜೊತೆ ಹೊಂದಿಕೊಳ್ಳೋದು ಕಷ್ಟವಿತ್ತು. ಅಲ್ದೇ ರಾಹುಲ್ ದ್ರಾವಿಡ್ ಭಾರತದ ಕೋಚ್ ಆಗಿದ್ದಾಗ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಗೆಲುವು ಸಾಧಿಸುತ್ತಿರಲಿಲ್ಲ. ಅಲ್ದೇ ಸರಣಿಗಳಲ್ಲೂ ತಂಡದ ಪ್ರದರ್ಶನ ಅಮೋಘವಾಗಿತ್ತು. ದ್ರಾವಿಡ್ ಅವಧಿ ಮುಗಿಯುವ ವೇಳೆಗೆ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನೂ ಗೆದ್ದುಕೊಂಡಿತ್ತು. ಆದರೆ ಗೌತಮ್ ಗಂಭೀರ್ ವಿಷಯದಲ್ಲಿ ಹಾಗಾಗುತ್ತಿಲ್ಲ. ದ್ವಿಪಕ್ಷೀಯ ಸರಣಿಯಲ್ಲೂ ಭಾರತ ತಂಡದ ಪ್ರದರ್ಶನ ಕಳಪೆಯಾಗಿದೆ. ಇದಕ್ಕೆ ಕಾರಣ ಗೌತಮ್ ಮತ್ತು ಆಟಗಾರರ ನಡುವೆ ಸಮನ್ವಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಂಭೀರ್ ಮತ್ತು ಇಡೀ ತಂಡದಲ್ಲಿ ಇನ್ನೂ ಒಗ್ಗಟ್ಟು ಮೂಡಬೇಕಿದೆ. ಹಾಗೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನವು ಹಳ್ಳ ಹಿಡಿದಿದೆ. ಇವ್ರೂ ಕೂಡ ಮರಳಿ ಫಾರ್ಮ್ ಕಂಡುಕೊಳ್ಬೇಕು.
ಒಟ್ನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಗೆ ಈಗ ಕೇವಲ ನಾಲ್ಕು ತಿಂಗಳಾಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದಿದ್ದು ಅಷ್ಟೇ. ಈ ನಾಲ್ಕು ತಿಂಗಳಲ್ಲಿ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ತಂಡವು ಗೆಲುವಿಗಿಂತ ಹೆಚ್ಚು ಅವಮಾನಗಳನ್ನೇ ಎದುರಿಸಿದೆ. ಹೀಗಾಗಿ ಗಂಭೀರ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅಂದ್ರೆ ಕೆಲವು ಅಧಿಕಾರಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ.