ಗೌತಮ್ COACH.. ಕೊಹ್ಲಿ OUT? – IPL ಸೇಡು ತೀರಿಸಿಕೊಳ್ತಾರಾ ಗಂಭೀರ್?
ರೋHITಗೂ ಇದು ಲಾಸ್ಟ್ ವಿಶ್ವಕಪ್?

ಗೌತಮ್ COACH.. ಕೊಹ್ಲಿ OUT? – IPL ಸೇಡು ತೀರಿಸಿಕೊಳ್ತಾರಾ ಗಂಭೀರ್?ರೋHITಗೂ ಇದು ಲಾಸ್ಟ್ ವಿಶ್ವಕಪ್?

ಐಪಿಎಲ್​ ಮೂಡ್​ನಲ್ಲಿದ್ದ ಆಟಗಾರರೆಲ್ಲಾ ಈಗ ಟಿ-20 ವಿಶ್ವಕಪ್​ಗೆ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ತಂಡಕ್ಕೆ ಆಯ್ಕೆಯಾಗದ ಪ್ಲೇಯರ್ಸ್ ರಿಲ್ಯಾಕ್ಸ್ ಮೋಡ್​ಗೆ ಜಾರಿದ್ದಾರೆ. ಅತ್ತ ವಿಶ್ವಯುದ್ಧಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ದೊಡ್ಡ ಬೆಳವಣಿಗೆಗಳು ನಡೆದಿದ್ದು ಬಿಸಿಸಿಐ ಬಿಗ್ ಸರ್ಪ್ರೈಸ್ ಕೊಟ್ಟಿದೆ. ರಾಹುಲ್​ ದ್ರಾವಿಡ್​ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಆಯ್ಕೆ ಬಹುತೇಕ ಖಚಿತವಾಗಿದೆ. ಸೋ ವರ್ಲ್ಡ್ ಕಪ್ ಮುಗಿದ ಬಳಿಕ ಟೀಂ ಇಂಡಿಯಾಗೆ ಗೌತಿ ಸಾರಥಿ ಆಗೋದು ಫಿಕ್ಸ್ ಆಗಿದೆ. ಬಟ್ ಗಂಭೀರ್ ಕ್ಯಾಪ್ಟನ್ ಆದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಎಫೆಕ್ಟ್ ಆಗುತ್ತೆ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ. ಅರೆ ಗಂಭೀರ್ ಕೋಚ್ ಆಗೋದಕ್ಕೂ ಇದಕ್ಕೂ ಏನ್​ ಸಂಬಂಧ..? ಗಂಗೂಲಿ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದೇಕೆ? ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   World Cupಗೆ ಕೈ ಕೊಟ್ರಾ ಕೊಹ್ಲಿ? – ಮೊದಲ ಪಂದ್ಯದಲ್ಲಿ ಆಡ್ತಿಲ್ಲ ಯಾಕೆ?

2024ರ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅತ್ಯದ್ಬುತ ಪ್ರದರ್ಶನದ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ. ಕೆಕೆಆರ್ ಗೆಲುವಿನ ಸೂತ್ರಧಾರಿ ಗೌತಮ್ ಗಂಭೀರ್ ಅನ್ನೋದು ಗೊತ್ತಿರೋ ವಿಚಾರನೇ. ಮೆಂಟರ್ ಆಗಿ ಇಡೀ ತಂಡವನ್ನ ಲೀಡ್ ಮಾಡಿ ಸೈ ಎನಿಸಿಕೊಂಡ ಗಂಭೀರ್ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇಂಥಾ ಟೈಮಲ್ಲಿ ತಿಂಗಳಿಂದ್ಲೂ ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆಗೆ ಹುಡುಕಾಡ್ತಿದ್ದ ಬಿಸಿಸಿಐ ಕಣ್ಣಿಗೆ ಬಿದ್ದಿದ್ದೇ ಗೌತಮ್ ಗಂಭೀರ್. ಇದೇ ಕಾರಣಕ್ಕೆ ಐಪಿಎಲ್ ಫಿನಾಲೆ ಮ್ಯಾಚ್ ಮುಗಿತಾ ಇದ್ದಂತೆ  ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​​​ ಅವರೊಂದಿಗೆ ಮಾತುಕತೆ ನಡೆಸಿದ್ರು. ಕೊನೆಗೂ ಗಂಭೀರ್ ಜಯ್ ಶಾ ಮಾತಿಗೆ ಮಣಿದಿದ್ದು ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂಬ ನಿರ್ಧಾರ ಬಂದಿದ್ದಾರೆ. ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಆಗಿ ಸದ್ಯದಲ್ಲೇ ಗೌತಮ್​​ ಗಂಭೀರ್​ ಹೆಸರನ್ನ ಅಧಿಕೃತವಾಗಿ ಅನೌನ್ಸ್ ಮಾಡಲಾಗುತ್ತೆ. ಸದ್ಯ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಟಿ20 ವಿಶ್ವಕಪ್​ವರೆಗೆ ಇದೆ. 2021 ರ ಟಿ-20 ವಿಶ್ವಕಪ್ ನಂತರ ರವಿಶಾಸ್ತ್ರಿ ಅವರಿಂದ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಮೇಲ್ವಿಚಾರಣೆಯಲ್ಲಿ ಭಾರತ ತಂಡವು 2022 T20 ವಿಶ್ವಕಪ್ ಸೆಮಿಸ್, 2023 ಏಕದಿನ ವಿಶ್ವಕಪ್ ಫೈನಲ್, 2023 ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಳಿಸಿತು. ಆದರೆ ಐಸಿಸಿ ಟೂರ್ನಿ ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಟೀಮ್​ ಇಂಡಿಯಾದ ಕೋಚ್​ ಆಗಿ ಗಂಭೀರ್​ ನೇತೃತ್ವ ವಹಿಸಿಕೊಳ್ಳೋದು ಕನ್ಫರ್ಮ್ ಆಗಿದೆ.

ಹಾಗೆ ನೋಡಿದ್ರೆ ಗೌತಮ್ ಗಂಭೀರ್‌ಗೆ ಕೋಚ್ ಹುದ್ದೆ ಬಗ್ಗೆ ಯಾವ್ದೇ ಎಕ್ಸ್​ಪೀರಿಯನ್ಸ್ ಇಲ್ಲ. ದೇಶೀಯ ಅಥವಾ ಅಂತಾರಾಷ್ಟ್ರೀಯ ಯಾವುದೇ ತಂಡಕ್ಕೆ ತರಬೇತುದಾರನಾಗಿ ಕೆಲಸ ಮಾಡಿಲ್ಲ. ಗೌತಮ್ ಗಂಭೀರ್ 2022 ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದರು. ಈ ವೇಳೆ  ತಂಡವು ಎರಡೂ ಸಂದರ್ಭಗಳಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತ್ತು. 2024ರ ಐಪಿಎಲ್ ಋತುವಿನಲ್ಲಿ ಗೌತಮ್ ಗಂಭೀರ್ ಕೆ‌ಕೆ‌ಆರ್ ತಂಡದ ಮಾರ್ಗದರ್ಶಕರಾಗಿ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ದೇ 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಐಪಿಎಲ್ ಟ್ರೋಫಿಗಳನ್ನು ಕೆಕೆಆರ್ ಗೆದ್ದಿತ್ತು. ಹೀಗಾಗಿ ಗೌತಮ್ ಗಂಭೀರ್ ಅವರನ್ನೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡುವಂತೆ ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಎಕ್ಸ್​ಪರ್ಟ್ಸ್ ಕೂಡ ಸಜೇಶನ್ ನೀಡಿದ್ರು. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು, ಕೆ‌ಕೆ‌ಆರ್ ತಂಡದ ಗೆಲುವಿಗೆ ಪಣತೊಟ್ಟಿದ್ದ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್‌ಗೆ ಅಗ್ರ ಸ್ಪರ್ಧಿ ಎಂದು ಬರೆದುಕೊಂಡಿದ್ರು.

ಬಟ್ ಗಂಭೀರ್ ಟೀಂ ಇಂಡಿಯಾದ ಕೋಚ್ ಆಗ್ತಿರೋದು ಕೊಹ್ಲಿ ಅಭಿಮಾನಿಗಳಿಗೆ ಟೆನ್ಷನ್ ತಂದಿದೆ.  ಗಂಭೀರ್ ಕೋಚ್ ಆಗೋದ್ರಿಂದ ವಿರಾಟ್ ಕೊಹ್ಲಿಗೆ ಸಮಸ್ಯೆ ಆಗಲಿದೆ ಎಂಬ ವಾದವೂ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕೊಹ್ಲಿ ಭವಿಷ್ಯ ಕೂಡ ಗಂಗೂಲಿಯಂತೆಯೇ ಆಗುತ್ತಾ ಎಂಬ ಚರ್ಚೆ ಶುರುವಾಗಿದೆ. ಕೊಹ್ಲಿಗೂ ಗಂಗೂಲಿಗೂ ಏನ್ ಸಂಬಂಧ ಅಂತಾ ನಿಮಗೆ ಅನ್ನಿಸಬಹುದು. 2 ದಶಕಗಳ ಹಿಂದೆ ಟೀಂ ಇಂಡಿಯಾದಲ್ಲಿ ನಡೆದಿದ್ದ ಅಂಥದ್ದೇ ಘಟನೆ ಮತ್ತೊಮ್ಮೆ ಮರುಕಳಿಸೋ ಆತಂಕ ಇದೆ. ಈ ಹಿಂದೆ ಜಾನ್ ರೈಟ್ ಭಾರತದ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಭಾರತದ ಕೋಚ್ ಆಗಿದ್ರು. ಚಾಪೆಲ್​ ಅವರು 2005ರಿಂದ 2007ರ ಅವಧಿಯಲ್ಲಿ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದರು. ಆದ್ರೆ ಇವರು ಕೋಚಿಂಗ್​ಗಿಂತ ವಿದಾದದಲ್ಲೇ ಹೆಚ್ಚು ಸುದ್ದಿಯಾಗಿದ್ದರು. 2005ರಲ್ಲಿ ಚಾಪೆಲ್ ಕೋಚಿಂಗ್ ವಹಿಸಿಕೊಂಡ ನಂತರ ಭಾರತ ಮೊದಲ ಸರಣಿ ಆಡಲು ಲಂಕೆಗೆ ಪ್ರಯಾಣ ಬೆಳೆಸಿತ್ತು. ಆದರೆ ಸೌರವ್ ಗಂಗೂಲಿಗೆ ಅದರ ಹಿಂದಿನ ಸರಣಿಯಲ್ಲಿ ನಿಧಾನಗತಿಯ ಓವರ್ ಗಳ ಕಾರಣದಿಂದ 4 ಪಂದ್ಯಗಳ ನಿಷೇಧ ಹೇರಲಾಗಿತ್ತು. ಹೀಗಾಗಿ ದ್ರಾವಿಡ್ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಈ ಸರಣಿಯಲ್ಲಿ ಚಾಪೆಲ್ ಅವರು ಸುರೇಶ್ ರೈನಾರನ್ನು ಅಂತಾರಾಷ್ಟೀಯ ಕ್ರಿಕೆಟ್​ಗೆ ಪರಿಚಯಿಸಿದ್ದರು. ನಿಷೇಧದಿಂದ ಹೊರಬಂದ ಗಂಗೂಲಿ ಮತ್ತೆ ತಂಡದ ಚುಕ್ಕಾಣಿ ಹಿಡಿದರು. ಬಳಿಕ ಭಾರತ ಜಿಂಬಾಬ್ವೆ ಸರಣಿಗೆ ಹೊರಟಿತ್ತು. ಅಲ್ಲೇ ನೋಡಿ ಚಾಪೆಲ್‌ ರ ಹೊಸ ಆವಿಷ್ಕಾರಗಳು ಆರಂಭವಾಗಿದ್ದು. ಒಂದು ಅಭ್ಯಾಸ ಪಂದ್ಯವಾದ ನಂತರ ಅಷ್ಟೇನು ಫಾರ್ಮ್‌ನಲ್ಲಿ ಇರದ ಗಂಗೂಲಿಗೆ ಚಾಪೆಲ್‌ ನಾಯಕತ್ವದಿಂದ ಕೆಳಗಿಳಿಯುವಂತೆ ಹೇಳಿದ್ರು. ಯುವರಾಜ್‌ ಅವ್ರನ್ನ ಗಂಗೂಲಿ ಸ್ಥಾನಕ್ಕೆ ತರಬೇಕೆಂಬುದು ಚಾಪೆಲ್ ಇಚ್ಛೆಯಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಚಾಪೆಲ್, ತಂಡದ ನಾಯಕತ್ವದಲ್ಲಿ ಮುಂದುವರಿಯಲು ಸೌರವ್‌ ಗಂಗೂಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಾಗಿಲ್ಲ ಎಂದು ಬರೆದು ಬಿಸಿಸಿಐಗೆ ಇ ಮೇಲ್​ ಕಳುಹಿಸಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಮಾತ್ರವಲ್ದೇ ಮುಂದಿನ ಸರಣಿಯಲ್ಲಿ ಗಂಗೂಲಿಯನ್ನು ಟಾರ್ಗೆಟ್​ ಮಾಡಿದ್ದ ಚಾಪೆಲ್ ಸುಳ್ಳು ಗಾಯದ ನೆಪವೊಡ್ಡಿ ಬೆಂಚ್‌ ಕಾಯಿಸಿದ್ದರು. ಇದ್ರಿಂದ ಚಾಪೆಲ್‌ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳೂ ಕೂಡ ನಡೆದಿದ್ದವು. ಅಚ್ಚರಿ ಎಂದರೆ ಲೋಕಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಸೌರವ್​ ಗಂಗೂಲಿ ಜತೆಗಿನ ಕಿತ್ತಾಟದಿಂದ ಕೊನೆಗೆ ಚಾಪೆಲ್ ಕೋಚಿಂಗ್​ ಹುದ್ದೆಯನ್ನೂ ತ್ಯಜಿಸಿದ್ದರು. ಇದೇ ಕಾರಣಕ್ಕೆ ಗಂಭೀರ್ ಕೋಚ್ ಆಗಿದ್ದರೆ, ಗಂಗೂಲಿ ಅನುಭವಿಸಿದ ಪಾಡು ಕೊಹ್ಲಿಗೂ ಆಗಲಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ಗಂಭೀರ್ ಮತ್ತು ಕೊಹ್ಲಿ ನಡುವಿನ ಮುನಿಸು.

ಅಸಲಿಗೆ ಕೊಹ್ಲಿ ಮತ್ತು ಗಂಭೀರ್ ನಡುವಿನ ಗುದ್ದಾಟ ಜಗಜ್ಜಾಹೀರಾಗಿದೆ. ವಿರಾಟ್‌ ಕೊಹ್ಲಿ ಮತ್ತು ಗೌತಮ್ ಗಂಭೀರ್‌ ಹಲವು ಬಾರಿ ಐಪಿಎಲ್‌ ಅಖಾಡದಲ್ಲಿ ಮುಖಾಮುಖಿಯಾಗಿ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. 2013ರ ಐಪಿಎಲ್‌ನಲ್ಲಿ ಮೊದಲ ಬಾರಿ ಇವರಿಬ್ಬರ ನಡುವೆ ಆನ್‌ ಫೀಲ್ಡ್‌ನಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಆರ್​​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಕೊಹ್ಲಿ ಔಟಾದ ಬಳಿಕ ಇಬ್ಬರ ನಡುವೆ ಘರ್ಷಣೆ ಉಂಟಾಗಿತ್ತು. ಇದಾದ ಮೂರು ವರ್ಷಗಳ ನಂತರ ಮತ್ತೆ ಮಾತಿಕ ಚಕಮಕಿ ನಡೆಸಿದ್ದರು. ಐಪಿಎಲ್‌ 2023 ಟೂರ್ನಿಯಲ್ಲಿ ಲಖನೌ ಸೂಪರ್ ಜೇಂಟ್ಸ್‌ ತಂಡಕ್ಕೆ ಗಂಭೀರ್‌ ಮೆಂಟರ್ ಆಗಿದ್ದ ಸಂದರ್ಭದಲ್ಲೂ ವಿರಾಟ್‌ ಕೊಹ್ಲಿ ಎದುರು ಕಾಲ್ಕೆರೆದು ಜಗಳ ಮಾಡಿದ್ದರು. ಲಕ್ನೋ ಪರ ಆಡುತ್ತಿದ್ದ ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಮತ್ತು ಕೊಹ್ಲಿ ನಡುವೆ ಮೈದಾನದಲ್ಲಿಯೇ ವಾಗ್ವಾದ ಉಂಟಾಗಿತ್ತು. ಈ ವೇಳೆ ಗಂಭೀರ್ ತಮ್ಮ ಆಟಗಾರರನ್ನು ಕೊಹ್ಲಿಯೊಂದಿಗೆ ಮಾತನಾಡದಂತೆ ತಡೆದಿದ್ದರು. ಇದ್ರಿಂದ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಇಬ್ಬರು ಕೂಡ ಮೈದಾನದಲ್ಲೇ ಬೈದಾಡಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿತ್ತು. ಬಳಿಕ ಇಬ್ಬರ ವಿರುದ್ಧ ಬಿಸಿಸಿಐ ದಂಡ ವಿಧಿಸಿ ಕಠಿಣ ಕ್ರಮವನ್ನೂ ತೆಗೆದುಕೊಂಡಿತ್ತು.ಗಂಭೀರ್ ಮತ್ತು ಕೊಹ್ಲಿ ನಡುವೆ ದೀರ್ಘಕಾಲದಿಂದಲೂ ವೈರತ್ವ ನಡೆಯುತ್ತಿದೆ. ಒಬ್ಬರ ಮೇಲೆ ಒಬ್ಬರಿಗೆ ಅಸಮಾಧಾನ ಇದೆ. ಇಬ್ಬರು ಸಹ ಮುಖಾಮುಖಿಯಾದರೆ ಮಾತಿನ ಚಕಮಕಿ ನಡೆಯುವುದು ಖಂಡಿತ ಎಂದು ನಿರೀಕ್ಷಿಸಲಾಗುತ್ತದೆ. ಅಲ್ಲದೆ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯಕ್ಕೂ ಮುನ್ನವೇ ಗಂಭೀರ್​ ಅವರನ್ನು ಕೊಹ್ಲಿ ಗುರಾಯಿಸಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿತ್ತು.  ಆದ್ರೆ 2024ರಲ್ಲಿ ಇಬ್ಬರ ನಡುವಿನ ಸಂಬಂಧ ಸುಧಾರಿಸಿದೆ. ಐಪಿಎಲ್‌ 2024 ಟೂರ್ನಿಯ ಲೀಗ್‌ ಹಂತದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ವು. ಎರಡೂ ಪಂದ್ಯಗಳಲ್ಲಿ ಕೆಕೆಆರ್‌ ಗೆದ್ದಿದೆಯಾದರೂ, ಗಂಭೀರ್‌ ಮತ್ತು ವಿರಾಟ್‌ ನಡುವೆ ಯಾವುದೇ ಜಗಳ ಸಂಭವಿಸಲಿಲ್ಲ. ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಬ್ಬರನ್ನೊಬ್ಬರು ಅಪ್ಪಿಕೊಂಡು ಎಲ್ಲವೂ ಸರಿಯಿದೆ ಎನ್ನುವ ಸಂದೇಶ ರವಾನಿಸಿದರು.

ಕೊಹ್ಲಿ ಮತ್ತು ಗಂಭೀರ್ ನಡುವೆ ಎಲ್ಲವೂ ಸರಿ ಇದೆ ಅಂತಾ ಅನ್ನಿಸಿದ್ರೂ ಭಾರತ ಟಿ20 ತಂಡದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊರಬೀಳೋದು ಪಕ್ಕನೇ. ಯಾಕಂದ್ರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಇದುವೇ ಕೊನೆಯ ಚಾನ್ಸ್​. ಈ ಬಾರಿಯ ಟಿ20 ವಿಶ್ವಕಪ್​ನೊಂದಿಗೆ ಇಬ್ಬರು ಆಟಗಾರರ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಮುಗಿಯಲಿದೆ ಎನ್ನಲಾಗ್ತಿದೆ. ಇದಾದ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಭಾರತ ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ವರದಿಗಳೇ ಹೇಳ್ತಿದೆ.   ಅಲ್ದೇ ಗೌತಮ್ ಗಂಭೀರ್ ಮೊದಲು ಹೊಸ ಟಿ20 ತಂಡವನ್ನು ಕೂಡ ಕಟ್ಟಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ರೋಹಿತ್ ಶರ್ಮಾ ಅವರ ನಿರ್ಗಮನದ ಬಳಿಕ ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬರಲಿದೆ. ಬಿಸಿಸಿಐ ಮುಖ್ಯ ಕೋಚ್ ಆದ ಬಳಿಕ ಗೌತಮ್ ಗಂಭೀರ್ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡುವುದು ಬಹುತೇಕ ಖಚಿತ. ಯಾಕಂದ್ರೆ ಗೌತಮ್ ಗಂಭೀರ್ ಅವರು 2027ರವರೆಗೆ ಭಾರತ ತಂಡದ ಕೋಚ್ ಹುದ್ದೆಯಲ್ಲಿರಲಿದ್ದಾರೆ. ಇದರ ನಡುವೆ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ, 2026ರಲ್ಲಿ ಟಿ20 ವಿಶ್ವಕಪ್ ಮತ್ತು 2027 ರಲ್ಲಿ ಏಕದಿನ ವಿಶ್ವಕಪ್ ಜರುಗಲಿದೆ. ಈ ಮೂರು ಟೂರ್ನಿಗಳನ್ನು ಗಮನದಲ್ಲಿರಿಸಿ ಭಾರತ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಗಂಭೀರ್ ಎಂಟ್ರಿಯೊಂದಿಗೆ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯವಾದರೂ ಅಚ್ಚರಿಪಡಬೇಕಿಲ್ಲ.

Shwetha M