ನಾಡಹಬ್ಬಕ್ಕೆ ಗಜಪಡೆ ಲಿಸ್ಟ್ ರೆಡಿ – ಆಗಸ್ಟ್ 4 ರಂದು ದಸರಾ ಗಜಪಯಣ ಆರಂಭ

ನಾಡಹಬ್ಬಕ್ಕೆ ಗಜಪಡೆ ಲಿಸ್ಟ್ ರೆಡಿ – ಆಗಸ್ಟ್ 4 ರಂದು ದಸರಾ ಗಜಪಯಣ ಆರಂಭ

ಮೈಸೂರು ದಸರಾ ಎಷ್ಟೊಂದು ಸುಂದರ ಅನ್ನೋ ಹಾಗೆ ಜಂಬೂ ಸವಾರಿಗಾಗಿ ನಮ್ಮ ಗಜಪಡೆ ಸಿದ್ಧವಾಗಿದೆ. ಜಂಬೂ ಸವಾರಿಗಾಗಿ ಗಜಪಡೆಯ ಲಿಸ್ಟ್ ಅಂತಿಮವಾಗಿದೆ. ಮೊದಲ ಹಂತವಾಗಿ 9 ಆನೆಗಳು ಆಯ್ಕೆಯಾಗಿವೆ.

ಇದನ್ನೂ ಓದಿ: ವಿಮಾನವೇರಿ ಜಪಾನ್‌ಗೆ ಹೊರಟ ಬನ್ನೇರುಘಟ್ಟದ ಆನೆಗಳು! – ಏನಿದು ಅಂತಾರಾಷ್ಟ್ರೀಯ ವಿನಿಮಯ?

ವಿಶ್ವವಿಖ್ಯಾತ ಮೈಸೂರು ದಸರೆಗೆ ಮೊದಲ ಹಂತದಲ್ಲಿ ಗಜಪಡೆಯ ಲಿಸ್ಟ್ ಮಾಡಲಾಗಿದೆ. ಕಾಡಿನಿಂದ ನಾಡಿಗೆ ಬರುವ 9 ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಜಂಬೂ ಸವಾರಿಗೆ ಮೊದಲ ಹಂತದ ಗಜಪಡೆಯ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಒಟ್ಟು 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.

ಆಗಸ್ಟ್ 4 ರಂದು ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಲಿವೆ. ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸುವ ದಸರಾ ಆನೆಗಳ ಪಟ್ಟಿ ನೋಡುವುದಾದರೆ, ನಾಗರಹೊಳೆಯ ಮತ್ತಿಗೋಡು ಶಿಬಿರದ 59 ವರ್ಷದ ಕ್ಯಾಪ್ಟನ್ ಅಭಿಮನ್ಯು, ಮತ್ತಿಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಗಂಡಾನೆಗಳು ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ ಲಕ್ಷ್ಮೀ (53) ಹೆಣ್ಣಾನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ. ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷದ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಕುಮ್ಕಿ ಆನೆ ಎಂದೇ ಖ್ಯಾತನಾಗಿದ್ದಾನೆ. ಇವನ ಜೊತೆಗೆ ಮತ್ತಿಗೋಡು ಶಿಬಿರದ ಭೀಮ, ದುಬಾರೆ ಶಿಬಿರದ ಪ್ರಶಾಂತ, ಮತ್ತಿಗೋಡು ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಧನಂಜಯ, ಕಂಜನ್, ಮತ್ತಿಗೋಡು ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ, ಬಳ್ಳೆ ಶಿಬಿರದ ಲಕ್ಷ್ಮೀ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ. 2ನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಆಗಸ್ಟ್ 4 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಳ್ಳಿ ನಾಗರಹೊಳೆ ಹೆಬ್ಬಾಗಿಲಿನಿಂದ ಗಜ ಪಯಣ ಆರಂಭವಾಗಲಿದೆ.

Sulekha