ಚಾರಣ ಪ್ರಿಯರಿಗೆ ಬಿಗ್ ಶಾಕ್! – ಬೆಳ್ತಂಗಡಿಯ ಗಡಾಯಿಕಲ್ಲು ಚಾರಣಕ್ಕೆ ಬ್ರೇಕ್!

ರಾಜ್ಯದ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವರುಣನ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗ್ತಿದೆ. ಇದೀಗ ಬೆಳ್ತಂಗಡಿಯ ಪ್ರಸಿದ್ಧ ಚಾರಣ ತಾಣವಾಗಿರುವ ಗಡಾಯಿಕಲ್ಲು ಚಾರಣಕ್ಕೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಊಟಕ್ಕೆ ಮುನ್ನ ನೀರು ಕುಡಿಯುತ್ತೀರಾ? – ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ!
ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಅತ್ಯಂತ ತೀವ್ರವಾಗಿರಲಿದ್ದು, ಸುಮಾರು 130 ಮಿ.ಮೀ ನಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ. ನಿರಂತರವಾಗಿ ಸುರಿಯಲಿರುವ ಈ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ವಲಯಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಚ್ಚರಿಸಲಾಗಿದೆ. ಇದೀಗ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು ಚಾರಣಕ್ಕೆ ಜುಲೈ 8 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ನಿರಂತರ ಮಳೆಯಿಂದಾಗಿ ಗಡಾಯಿಕಲ್ಲು ಬೆಟ್ಟದ ಕಲ್ಲುಗಳು ಮತ್ತು ಹಾದಿ ವಿಪರೀತ ಜಾರುತ್ತಿದೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ಚಾರಣ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರ ಹಾಗೂ ಚಾರಣಿಗರ ಪ್ರವೇಶಕ್ಕೆ ಕಡ್ಡಾಯ ನಿಬಂಧನೆ ವಿಧಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಅಂದ್ಹಾಗೆ ಈ ವರ್ಷ ಜೂನ್ 1 ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ, ಆರಂಭಗೊಂಡ ಕೆಲವೇ ದಿನಗಳಲ್ಲಿ ಮಳೆಯ ಕಾರಣದಿಂದಾಗಿ ಮೊದಲ ಬಾರಿಗೆ ನಿಷೇಧ ಹೇರಲಾಗಿತ್ತು. ತದನಂತರ ಪರಿಸ್ಥಿತಿ ಸುಧಾರಿಸಿದ್ದನ್ನು ನೋಡಿ ಜೂನ್ 25 ರಂದು ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ, ಜುಲೈ 8 ರಿಂದ ಅನ್ವಯವಾಗುವಂತೆ ಮತ್ತೊಮ್ಮೆ ಟ್ರೆಕ್ಕಿಂಗ್‌ಗೆ ಬ್ರೇಕ್ ಹಾಕಲಾಗಿದೆ.

ನೋಡಿರಿ

