ಗದಗದಲ್ಲಿ “ಮೊಗ್ಯಾಂಬೋ, ರಾಮು ಕಾಕಾ” ಪ್ರತ್ಯಕ್ಷ! – ಸಂಶೋಧಕರೇ ಬೆರಗಾಗಿದ್ದೇಕೆ?

ಗದಗದಲ್ಲಿ “ಮೊಗ್ಯಾಂಬೋ, ರಾಮು ಕಾಕಾ” ಪ್ರತ್ಯಕ್ಷ! – ಸಂಶೋಧಕರೇ ಬೆರಗಾಗಿದ್ದೇಕೆ?

ಪ್ರಕೃತಿ ವೈವಿಧ್ಯತೆಗಳ ತಾಣ.  ಅದರಲ್ಲೂ ಕೀಟಗಳ ಲೋಕ ಒಂದು ಅದ್ಭುತವಾದ ಕುತೂಹಲಕಾರಿ ಪ್ರಪಂಚ. ಭೂಮಿ ಮೇಲೆ ಲಕ್ಷಾಂತರ ಕೀಟಗಳು ಜೀವಿಸುತ್ತವೆ. ಅವುಗಳಲ್ಲಿ ಕೆಲವೊಂದು ಸುಲಭವಾಗಿ ಕಣ್ಣಿಗೆ ಕಂಡರೆ ಇನ್ನೂ ಕೆಲವು ಕಣ್ಣಿಗೆ ಕಾಣಿಸದೇ ಮರೆಯಲ್ಲೇ ಬದುಕುತ್ತಿರುತ್ತವೆ. ಇಂತಹ ಅಪರೂಪದ ಜೀವಿಗಳು ಆಗಾಗ ಪತ್ತೆಯಾಗಿ ವಿಜ್ಞಾನ ಲೋಕಕ್ಕೆ ಅಚ್ಚರಿ ಮೂಡಿಸುತ್ತವೆ. ಇದೀಗ ಗದಗದಲ್ಲಿ ಅಪರೂಪದ ಕೀಟಗಳು ಪತ್ತೆಯಾಗಿದೆ.

ಅಪೆಫ್ಲೈಪುಪಾ, ಹ್ಯಾಲಿಮೊರ್ಫಾ ಹ್ಯಾಲಿಸ್‌ ಎಂಬ ಕೀಟಗಳು ಪತ್ತೆಯಾಗಿವೆ. ಈ ಕೀಟಗಳು ಬುರುಡೆ ಆಕಾರವನ್ನು ಹೋಲುತ್ತಿದೆ. ಇವುಗಳಿಗೆ ಖ್ಯಾತ ಕಲಾವಿದರಾದ ಅಮರೇಶ್ ಪುರಿ ಮತ್ತು ಎ.ಕೆ. ಹಂಗಲ್ ನಟಿಸಿರುವ ಪಾತ್ರಗಳಾದ ಮೊಗ್ಯಾಂಬೋ, ರಾಮು ಕಾಕಾ ಎಂಬ ಹೆಸರನ್ನು ಇಡಲಾಗಿದೆ.

ಇದನ್ನೂ ಓದಿ: ಡ್ಯಾನ್ಸ್ ನಲ್ಲೇ ಗಿನ್ನೆಸ್ ದಾಖಲೆ ಬರೆದ 14 ಶ್ವಾನಗಳು! – ನೃತ್ಯ ಹೇಗಿದೆ ನೋಡಿ…

ಸಾಮಾನ್ಯವಾಗಿ ಹೊಸ ಜೀವಿ ಪತ್ತೆಯಾದಾಗ ಲ್ಯಾಟಿನ್ ಅಥವಾ ಗ್ರೀಕ್ ಪದಗಳನ್ನು ಬಳಸಿ ವೈಜ್ಞಾನಿಕವಾಗಿ ಹೆಸರು ನೀಡುವುದು ಪದ್ಧತಿಯಾಗಿದೆ. ಆದರೆ, ಬಹುತೇಕ ಕೀಟಗಳಿಗೆ ಕನ್ನಡದ ಹೆಸರುಗಳಿಲ್ಲ. ಭಾರತೀಯ ಹೆಸರುಗಳನ್ನು ನೀಡುವುದು ಕಷ್ಟಕರವಾಗಿದೆ. ಈ ಕಾರಣದಿಂದ ಭಾರತೀಯರಿಗೆ ಹಲವು ಜೀವಿಗಳ, ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕೂಡ ಕಷ್ಟಕರವಾಗಿದೆ. ಹೀಗಾಗಿ ಈ ಸಮಸ್ಯೆಗೆ ಮುಕ್ತಿ ನೀಡಲು ಗದಗ ಜಿಲ್ಲೆಯ ಸಂಶೋಧಕರು ಹೊಸ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಹೊಸದಾಗಿ ಪತ್ತೆಯಾದ ಕೀಟಗಳಿಗೆ ಭಾರತದ ಪ್ರಸಿದ್ಧ ಸಿನಿಮಾಗಳ ಪಾತ್ರ, ಸಾಧಕರ ಮತ್ತು ರಾಜಕಾರಣಿಗಳ ಹೆಸರನ್ನು ಇಡಲಾಗುತ್ತಿದೆ. ಇದರಂತೆ ಪತ್ತೆಯಾದ ಅಪೆಫ್ಲೈಪುಪಾ ಎಂಬ ಕೀಟಕ್ಕೆ ಮೊಗ್ಯಾಂಬೋ, ಹ್ಯಾಲಿಮೊರ್ಫಾ ಹ್ಯಾಲಿಸ್‌ಗೆ ರಾಮು ಕಾಕಾ ಎಂಬ ಹೆಸರನ್ನು ನೀಡಿದ್ದಾರೆ.

ಇದನ್ನೂ ಓದಿ: ಮುಳ್ಳು ಹಂದಿ ಮರಿಗಳ ಬೇಟೆಗೆ ಚಿರತೆ ಸಂಚು – ಹೇಗಿದೆ ಪುಟಾಣಿಗಳಿಗೆ ಟೈಟ್ ಸೆಕ್ಯೂರಿಟಿ?

ಕೀಟಗಳಿಗೆ ನಟರ ಪಾತ್ರಗಳ ಹೆಸರಿಡಲು ಎರಡು ಉದ್ದೇಶಗಳಿವೆ. ಒಂದು ಆ ನಟರಿಗೆ ಗೌರವ ಸಲ್ಲಿಸಲು. ಮತ್ತೊಂದು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಕುರಿತು ಆಸಕ್ತಿ ಹುಟ್ಟಿಸಲು ಹಾಗೂ ಸುಲಭವಾಗಿ ಪತ್ತೆ ಮಾಡುವ ಸಲುವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರಾದ ಸಂಗಮೇಶ ಕಡಗದ್ ಮತ್ತು ಮಂಜುನಾಥ ನಾಯಕ್ ಮಾತನಾಡಿ, ಕಿರಿಯ ಸಂಶೋಧಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಇಂತಹ ಹೆಸರುಗಳನ್ನು ಇಡುತ್ತಿದ್ದೇವೆ. ಮೊದಲು ವೈಜ್ಞಾನಿಕ ಹೆಸರುಗಳನ್ನು ಇಡುತ್ತಿದ್ದೆವು. ನಂತರ ದಂತಕಥೆಯುಳ್ಳ ನಾಯಕರ ಹೆಸರನ್ನು ಇಡಲು ಆರಂಭಿಸಿದ್ದೆವು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗಲು ರಾಜಕೀಯ ನಾಯಕರು, ಕ್ರಿಕೆಟರ್ ಗಳು, ಸಿನಿಮಾಗಳ ಪಾತ್ರಗಳ ಹೆಸರನ್ನು ನೀಡುತ್ತಿದ್ದೇವೆ. ಈ ಹೆಸರುಗಳು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಗದಗ ಜಿಲ್ಲೆಯ ಗಜೇಂದ್ರಗಡ ಬಳಿಯ ಭೈರಾಪುರ ಗುಡ್ಡದ ಮೇಲೆ ‘ಹಿಟ್ಲರ್ ಮುಖ’ ಹೋಲುವ ಅಪರೂಪದ ಕೀಟಗಳು ಪತ್ತೆಯಾಗಿತ್ತು. ಕೀಟವು ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖವನ್ನೇ ಹೋಲುವಂತಿತ್ತು. ಹೀಗಾಗಿ ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಈ ಅಪರೂಪದ ಕೀಟಕ್ಕೆ ಹಿಟ್ಲರ್ ಎಂದೇ ಹೆಸರಿಡಲಾಗಿತ್ತು. ಇದಾದ ಬಳಿಕ ಹೊಸದಾಗಿ ಪತ್ತೆ ಮಾಡಿದ ಕೀಟಕ್ಕೆ ರಾಜಕೀಯ ನಾಯಕರು, ಪ್ರಮುಖರ ಹೆಸರುಗಳನ್ನಿಡುವ ಪ್ರವೃತ್ತಿ ಮುಂದುವರಿದಿತ್ತು. ಕಳೆದ ವಾರ ಕೂಡ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಸೋಲಿಗ ಎಂಬ ಹೆಸರಿಡಲಾಗಿತ್ತು. ಅರಣ್ಯ ಮತ್ತು ಜೀವವೈವಿಧ್ಯದ ಸಂರಕ್ಷಣೆಗೆ ಅವರ ಕೊಡುಗೆಯನ್ನು ಗುರುತಿಸಿ ಈ ಹೆಸರನ್ನು ಕಣಜಕ್ಕೆ ಇಡಲಾಗಿತ್ತು. ಸೋಮವಾರ ಕೂಡ ಗದಗದಲ್ಲಿ ಬಹಳ ದಿನಗಳ ನಂತರ ಹೊಸ ಜೇಡವೊಂದು ಕಾಣಿಸಿಕೊಂಡಿತ್ತು. ಇದಕ್ಕೆ ಬಾಹುಬಲಿ ಖ್ಯಾತಿಯ ಬಲ್ಲಾಳ ಎಂದು ಹೆಸರಿಡಲಾಗಿತ್ತು. ಜೇಡದ ದೇಹವು ಚಿತ್ರದಲ್ಲಿ ಬಲ್ಲಾಳ ಬಳಸಿದ್ದ ರಥದಂತೆ ಹೋಲುತ್ತಿತ್ತು. ಹೀಗಾಗಿಯೇ ಇದಕ್ಕೆ ಬಲ್ಲಾಳ ಎಂದು ಹೆಸರಿಡಲಾಗಿತ್ತು ಎಂದು ಹೇಳಿದ್ದಾರೆ.

 

suddiyaana