ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗೆ ರಾಜಾತಿಥ್ಯ! ಚಿನ್ನ-ಬೆಳ್ಳಿ ಲೇಪಿತ ಪಾತ್ರೆಗಳಲ್ಲಿ ಔತಣ!
ರಾಷ್ಟ್ರ ರಾಜಧಾನಿ ದೆಹಲಿ ಜಿ20 ಶೃಂಗಸಭೆಗೆ ಮದುವಣಗಿತ್ತಿಯಂತೆ ಸಿದ್ಧವಾಗುತ್ತಿದೆ. ಐತಿಹಾಸಿಕ ಸಭೆಗೆ ವಿಶೇಷ ಅತಿಥಿಗಳ ಆತಿಥ್ಯಕ್ಕೆ ಯಾವುದೇ ಕೊರತೆಯಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಜಾಗರೂಕತೆಯಿಂದ ಮುಂಜಾಗೃತಕ್ರಮ ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ: ಜಿ20 ಶೃಂಗಸಭೆಗೆ ಆಗಮಿಸುವ ವಿಶ್ವನಾಯಕರಿಗೆ ಟೈಟ್ ಸೆಕ್ಯೂರಿಟಿ – ದೆಹಲಿಯಲ್ಲಿ ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ನಿಯೋಜನೆ
ದೆಹಲಿಯ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವನಾಯಕರಿಗೆ ಅಪರೂಪದ ಗೌರವವನ್ನು ಒದಗಿಸಲು ಭಾರತ ಸರ್ಕಾರ ಸಜ್ಜಾಗಿದ್ದು, ವಿವಿಧ ದೇಶಗಳಿಂದ ಆಗಮಿಸುವ ಅತಿಥಿಗಳಿಗಾಗಿ ಚಿನ್ನ ಮತ್ತು ಬೆಳ್ಳಿಯ ತಟ್ಟೆಗಳಲ್ಲಿ ಭಕ್ಷ್ಯಗಳನ್ನು ಬಡಿಸಲು ಸಿದ್ಧತೆ ನಡೆಸಲಾಗಿದೆ.
ಭಾರತದ ಸಾಂಸ್ಕೃತಿಕ ಕೆತ್ತನೆಯಿರುವ ಚಿನ್ನದ ಲೇಪಿತ ಹಾಗೂ ಬೆಳ್ಳಿ ತಟ್ಟೆಯಲ್ಲಿ ಊಟವನ್ನು ನೀಡಲಾಗುತ್ತದೆ. ಊಟಕ್ಕೆ ಬಡಿಸುವ ಪಾತ್ರೆಗಳು ಸ್ಟೀಲ್ ಮತ್ತು ಹಿತ್ತಾಳೆಯ ತಳವನ್ನು ಹೊಂದಿವೆ. ಮಿಶ್ರಲೋಹಗಳ ಪಾತ್ರೆಗೆ ಬೆಳ್ಳಿಲೇಪನ ಮಾಡಲಾಗಿದೆ. ಆದರೆ, ಊಟೋಪಚಾರಕ್ಕೆ ಬಳಸುವ ತಟ್ಟೆ ಮತ್ತು ಲೋಟಗಳು ಚಿನ್ನದ ಲೇಪನ ಮತ್ತು ಬೆಳ್ಳಿಯ ಪಾತ್ರೆಗಳೇ ಆಗಿವೆ. ಈಗಾಗಲೇ 15 ಸಾವಿರ ಬೆಳ್ಳಿಯ ಪಾತ್ರೆಗಳನ್ನು 200 ಜನ ಕುಶಲಕರ್ಮಿಗಳು ಸಿದ್ದಪಡಿಸಿದ್ದಾರೆ. ಕರ್ನಾಟಕ, ರಾಜಸ್ಥಾನ, ಪಶ್ಚಿಮಬಂಗಾಳ, ಉತ್ತರ ಪ್ರದೇಶ ರಾಜ್ಯಗಳ ಕುಶಲಕರ್ಮಿಗಳು ಈ ಬೆಳ್ಳಿ ಪಾತ್ರೆಗಳನ್ನು ಸಿದ್ಧಪಡಿಸಿದ್ದಾರೆ.