ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜನ – ಸರ್ಕಾರದಿಂದಲೂ ಗೌರವ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಜಿಗಣಿಯ ಕ್ಯಾಪ್ಟನ್ ಪ್ರಾಂಜಲ್ ಮೃತದೇಹವನ್ನು ಶುಕ್ರವಾರ ಬೆಂಗಳೂರಿಗೆ ತರಲಾಗಿದೆ. ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಪ್ರಾಂಜಲ್ ಅಂತ್ಯಕ್ರಿಯೆ ನೆರವೇರಲಿದೆ.
ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಶುಕ್ರವಾರ ರಾತ್ರಿಯೇ ಬೆಂಗಳೂರು ತಲುಪಿದೆ. ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ತರಲಾದ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಹೊರಗೆ ತರಲಾಯಿತು. ಆ ಬಳಿಕ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಅವರ ತಂದೆ-ತಾಯಿ ಮೊದಲಿಗೆ ಪುಷ್ಪಗುಚ್ಛ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ , ಕೆ.ಜೆ ಜಾರ್ಜ್, ಬಿ ವೈ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಡಿಸೆಂಬರ್ 14 ಕೊನೇ ದಿನ!
ಬಳಿಕ ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ತರಲಾಗಿದ್ದು, ಶನಿವಾರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಅಂತಿಮ ದರ್ಶನ ಬಳಿಕ ಅವರ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ. ಜಿಗಣಿ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್ ರೋಡ್, ಕೋನಪ್ಪನ ಅಗ್ರಹಾರ ಸರ್ಕಲ್, ಕೂಡ್ಲುಗೇಟ್ ಮೂಲಕ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು. ಅಂತಿಮ ಯಾತ್ರೆ ಸಾಗಲಿರುವ 30 ಕಿ.ಮೀ ರಸ್ತೆಯುದ್ದಕ್ಕೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಕ್ಯಾಪ್ಟನ್ ಅಂತ್ಯಕ್ರಿಯೆ ನಡೆಯಲಿದೆ.