ತಿರುಪತಿ ಲಡ್ಡು ಮಾಡಲು 50 ಕೋಟಿ ರೂಪಾಯಿಯ ಯಂತ್ರ – ಒಂದೇ ದಿನದಲ್ಲಿ 6 ಲಕ್ಷ ಲಡ್ಡುಗಳು ತಯಾರು
ತಿರುಪತಿ: ತಿರುಪತಿ ದೇವಸ್ಥಾನ ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದು. ಭಕ್ತರ ನೆಚ್ಚಿನ ದೇಗುಲವೂ ಹೌದು. ಇದರ ಜೊತೆಗೆ ತಿರುಪತಿ ಲಡ್ಡು ಕೂಡಾ ಅಷ್ಟೇ ಖ್ಯಾತಿ ಪಡೆದುಕೊಂಡಿದೆ. ಎಲ್ಲೇ ಲಡ್ಡು ತಿಂದರೂ ತಿರುಪತಿ ಲಡ್ಡು ತಿಂದಷ್ಟು ತೃಪ್ತಿಯಾಗಲ್ಲ ಅನ್ನೋ ಮಾತು ಕೂಡಾ ಅಷ್ಟೇ ನಿಜ. ದಿನನಿತ್ಯ ಇಲ್ಲಿ ಲಕ್ಷಾಂತರ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ನೀಡಲಾಗುತ್ತದೆ. ಇಲ್ಲಿಯವರೆಗೆ ತಿರುಪತಿಯಲ್ಲಿ ನೂರಾರು ಮಂದಿ ತಮ್ಮ ಕೈಯಾರೆ ಲಡ್ಡು ತಯಾರಿಸುತ್ತಿದ್ದರು. ಇನ್ಮುಂದೆ, ಒಂದೇ ದಿನದಲ್ಲಿ 6 ಲಕ್ಷ ಲಡ್ಡುಗಳು ತಯಾರಾಗುತ್ತವೆ. ಇದನ್ನು ತಯಾರು ಮಾಡಲು ಬರೋಬ್ಬರಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಯಂತ್ರಗಳು ಸದ್ಯದಲ್ಲೇ ತಿರುಪತಿ ತಲುಪಲಿವೆ.
ಇದನ್ನೂ ಓದಿ: ತಲೆ ಮೇಲೆ ಕೊಡಪಾನ ಹೊತ್ತ ಸಿದ್ದರಾಮಯ್ಯ – ಲಂಬಾಣಿ ಮಹಿಳೆಯರ ಜೊತೆ ಹೇಗಿತ್ತು ಗೊತ್ತಾ ಡ್ಯಾನ್ಸ್..!?
ಪ್ರತಿದಿನ 6 ಲಕ್ಷ ಲಡ್ಡುಗಳನ್ನು ತಯಾರಿಸುವ ಸಲುವಾಗಿ ಸುಮಾರು 50 ಕೋಟಿ ವೆಚ್ಚದಲ್ಲಿ ಎರಡು ಯಂತ್ರಗಳನ್ನು ರಿಲಯನ್ಸ್ ಕಂಪನಿಯು ದೇಗುಲಕ್ಕೆ ನೀಡಲಿದೆ. ಈ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಟಿಟಿಡಿ ವಿದೇಶದಿಂದ ಆಮದು ಮಾಡಿಕೊಳ್ಳಲಿದೆ. ಕೊನೆಯಲ್ಲಿ ಕೈಯಿಂದ ಲಡ್ಡುಗಳಿಗೆ ಅಂಡಾಕಾರದ ಆಕಾರ ನೀಡಬೇಕಾಗುವುದನ್ನು ಬಿಟ್ಟರೆ ಸಂಪೂರ್ಣ ತಯಾರಿಕೆ ಸ್ವಯಂಚಾಲಿತ ಯಂತ್ರದಲ್ಲೇ ಆಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಹೇಳಿದ್ದಾರೆ. ಯಂತ್ರ ಬಳಕೆಯಿಂದ ಉತ್ತಮ ಗಾತ್ರ ಮತ್ತು ಗುಣಮಟ್ಟದ ಆರೋಗ್ಯಕರವಾದ ಲಡ್ಡುಗಳನ್ನು ತಯಾರಿಸಬಹುದು. ಶುಚಿತ್ವ ಕಾಪಾಡಲೂ ಸಾಧ್ಯವಾಗುತ್ತದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಹೇಳಿದ್ದಾರೆ.
ಬೇಳೆ ಹಿಟ್ಟಿನ ಮಿಶ್ರಣವನ್ನು ಇತರ ಕಚ್ಚಾ ಪದಾರ್ಥಗಳೊಂದಿಗೆ ನೇರವಾಗಿ ಸ್ವಯಂಚಾಲಿತ ‘ಬೂಂದಿ ಪೋಟು’ಗೆ ಕಳುಹಿಸಲಾಗುತ್ತದೆ. ಆಗ ಯಂತ್ರವು ಹೆಚ್ಚಿನ ತಾಪಮಾನದಲ್ಲಿ ಕುದಿಯುತ್ತಿರುವ ಶುದ್ಧ ತುಪ್ಪವನ್ನು ಪ್ಯಾನ್‌ಗೆ ಮಿಶ್ರಣ ಮಾಡುತ್ತದೆ. ಈ ಯಂತ್ರವು ಕುದಿಯುವ ತುಪ್ಪದಿಂದ ಬೂಂದಿಯನ್ನು ಬೇರ್ಪಡಿಸಿ ಮತ್ತೊಂದು ಯಂತ್ರಕ್ಕೆ ಕಳುಹಿಸಿ ಅಲ್ಲಿ ಗೋಡಂಬಿ, ಏಲಕ್ಕಿ, ಒಣದ್ರಾಕ್ಷಿ, ಸಕ್ಕರೆ ಮಿಠಾಯಿ ಮತ್ತು ಸಕ್ಕರೆ ಪಾಕವನ್ನು ಬೆರೆಸುತ್ತದೆ. ಬಳಿಕ ಲಡ್ಡು ಪೋಟು ಕೆಲಸಗಾರರು ಸ್ವಯಂಚಾಲಿತ ಯಂತ್ರಗಳಿಂದ ಲಭ್ಯವಿರುವ ಮಿಶ್ರಣದಿಂದ ಲಡ್ಡುಗಳನ್ನು ತಯಾರಿಸಿ ಸಂಬಂಧಪಟ್ಟ ಕೌಂಟರ್‌ಗಳಿಗೆ ಕಳುಹಿಸುತ್ತಾರೆ.
ಇನ್ನು ತಿರುಪತಿ ದೇಗುಲದ ಪ್ರಸಾದ ಮಾರಾಟದ ಮೂಲಕ 2022-2023ರ ಆರ್ಥಿಕ ವರ್ಷದಲ್ಲಿ 365 ಕೋಟಿ ರೂ. ಆದಾಯವನ್ನು ಗಳಿಸಬಹುದು ಎಂದು ಟಿಟಿಡಿ ಅಂದಾಜಿಸಿದೆ.