ಬಸ್‌ನಲ್ಲಿ ಫುಲ್‌ ರಶ್‌ – ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಪ್ರಯಾಣಿಕ ಸಾವು

ಬಸ್‌ನಲ್ಲಿ ಫುಲ್‌ ರಶ್‌ – ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಪ್ರಯಾಣಿಕ ಸಾವು

ಮಂಡ್ಯ: ಮಹಿಳೆಯರಿಗೆ ಉಚಿತ ಬಸ್‌ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ  ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಹಿನ್ನೆಲೆ ಬಸ್‌ ಸಾಕಷ್ಟು ಭರ್ತಿಯಾಗಿ ಸಂಚರಿಸುತ್ತಿವೆ. ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್‌ಗಳಲ್ಲಿ ನೂಕುನುಗ್ಗಲು, ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ ಫುಲ್‌ ರಶ್‌ ಇರುವ ಕಾರಣದಿಂದಾಗಿ ಚಲಿಸುತ್ತಿದ್ದ ಬಸ್‌ನಿಂದ ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಇದನ್ನೂ ಓದಿ: ಫ್ರೀ ಬಸ್‌ ಟಿಕೆಟ್‌ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ! – ವಾರಕ್ಕೆ ಮುಂಚೆ ಟಿಕೆಟ್‌ ಬುಕ್ಕಿಂಗ್‌ ಕಡ್ಡಾಯ?

ಹರಕನಕೆರೆ ಗ್ರಾಮದ ನಿವಾಸಿ ಚಲುವೇಗೌಡ (75) ಮೃತ ದುರ್ದೈವಿ. ಜಕ್ಕನಹಳ್ಳಿಯಿಂದ ಮಂಡ್ಯ ಕಡೆ ಹೊರಡಿದ್ದ ಬಸ್‌ನಲ್ಲಿ ಚಲುವೇಗೌಡ ಪ್ರಯಾಣಿಸಿದ್ದಾರೆ. ಬಸ್‌ನಲ್ಲಿ ರಶ್‌ ಇದ್ದ ಕಾರಣ ಬಾಗಿಲ ಬಳಿ ನಿಂತಿದ್ದರು. ರಸ್ತೆಯಲ್ಲಿನ ಗುಂಡಿಗೆ ಬಸ್ ಇಳಿಯುತ್ತಿದ್ದಂತೆ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಸ್​​ನಿಂದ ಬಿದ್ದ ರಭಸಕ್ಕೆ ಚಲುವೇಗೌಡ ಅವರ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ರಕ್ತ ಸ್ರಾವದಿಂದ ಚಲುವೇಗೌಡ ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ.

ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾದ ಬಳಿಕ KSRTC ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ.  ದುರ್ಘಟನೆ ನಡೆದಿರೋದಕ್ಕೆ ಬಸ್​​ನಲ್ಲಿ ಡೋರ್‌ ಇಲ್ಲದೇ ಇರುವುದು ಕಾರಣ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿರ್ಲಕ್ಷ್ಯತೆಯಿಂದ ಪ್ರಾಣ ಹೋಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬರುವವರೆಗೆ ಬಸ್ ಬಿಡಲ್ಲ ಎಂದು ಜನ ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಬಂದ ಅಧಿಕಾರಿಗೆ ಸಾರ್ವಜನಿಕರಿಂದ ತರಾಟೆ ತೆಗೆದುಕೊಂಡಿದ್ದಾರೆ.  ಬಾಗಿಲು ಇಲ್ಲದ ಬಸ್ ಸಂಚಾರಕ್ಕೆ ಬಿಟ್ಟಿದ್ದು ಯಾಕೆ? RTOಯಿಂದ ಬಾಗಿಲಿಲ್ಲದ ಬಸ್ ಸಂಚಾರಕ್ಕೆ ಆನುಮತಿ ಕೊಟ್ಟಿದ್ದಾರಾ? ಈ ದುರ್ಘಟನೆಗೆ ಯಾರು ಹೊಣೆ ಎಂದು ಅಧಿಕಾರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದರಿಂದ ಕೆಎಸ್‌ಆರ್‌ಟಿಸಿಯದ್ದೇ ತಪ್ಪೆಂದು ಒಪ್ಪಿಕೊಂಡ ಅಧಿಕಾರಿ, ನಿಗಮದಿಂದ 2.5 ಲಕ್ಷ ಪರಿಹಾರದ ಭರವಸೆ ನೀಡಲಾಗಿದೆ. ಜೊತೆಗೆ, ಸ್ಥಳದಲ್ಲೇ 25 ಸಾವಿರ ರೂ. ಪರಿಹಾರ ನೀಡಲಾಗಿದೆ.

suddiyaana