ಇಸ್ರೋ ತಂತ್ರಜ್ಞಾನಕ್ಕೆ ಫುಲ್‌ ಡಿಮ್ಯಾಂಡ್!‌ – ‘ಚಂದ್ರಯಾನ-3’ ರಾಕೆಟ್ ನೋಡಿ ತಂತ್ರಜ್ಞಾನ ಕೇಳಿತ್ತು ಅಮೆರಿಕ

ಇಸ್ರೋ ತಂತ್ರಜ್ಞಾನಕ್ಕೆ ಫುಲ್‌ ಡಿಮ್ಯಾಂಡ್!‌ – ‘ಚಂದ್ರಯಾನ-3’ ರಾಕೆಟ್ ನೋಡಿ ತಂತ್ರಜ್ಞಾನ ಕೇಳಿತ್ತು ಅಮೆರಿಕ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಸಕ್ಸಸ್‌ ಕಂಡಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಭಾರತೀಯ ಇಸ್ರೋ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಅಚ್ಚರಿಯ ವಿಚಾರವನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಭಾರತ ಈಗ ಉನ್ನತ ಮಟ್ಟದ ಬಾಹ್ಯಾಕಾಶ ಸಂಶೋಧನಾ ಉಪಕರಣಗಳು ಹಾಗೂ ರಾಕೆಟ್‍ಗಳನ್ನು ಉತ್ಪಾದಿಸುತ್ತಿದೆ. ಅವುಗಳ ಗುಣಮಟ್ಟ ಹಾಗೂ ಅತೀ ಕಡಿಮೆ ವೆಚ್ಚವನ್ನು ಕೇಳಿ ನಾಸಾ ವಿಜ್ಞಾನಿಗಳು ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಯಸಿದ್ದಾರೆ. ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ವಿಸ್ತರಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಲೋಹೀಯ ಸಂಪತ್ತುಗಳಿಂದ ಕೂಡಿರುವ ಸೈಕ್ ಕ್ಷುದ್ರಗ್ರಹದ ಅನ್ವೇಷಣೆಗೆ ಹೊರಟ ನೌಕೆ –  6 ವರ್ಷಗಳ ಸುದೀರ್ಘ ಪ್ರಯಾಣ

ನಾವು ಚಂದ್ರಯಾನ-3 ರಾಕೆಟ್ ಹಾಗೂ ಉಪಕರಣಗಳನ್ನು ತಯಾರಿಸುತ್ತಿದ್ದಾಗ ಅಮೆರಿಕದ ನಾಸಾದ ಐದಾರು ಜನ ವಿಜ್ಞಾನಿಗಳು ಇಸ್ರೋಗೆ ಬಂದಿದ್ದರು. ಅವರಿಗೆ ನಮ್ಮ ಉಪಕರಣಗಳನ್ನು ತೋರಿಸಿ ವಿವರಿಸಿದೆವು. ಅಲ್ಲದೇ ನಾವು ಚಂದ್ರನ ಮೇಲೆ ಹೇಗೆ ಇಳಿಯಲಿದ್ದೇವೆ ಎಂಬುದನ್ನು ವಿವರಿಸಿದ್ದೆವು. ಈ ವೇಳೆ ಖರ್ಚಿನ ಬಗ್ಗೆ ಕೇಳಿದ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆ ನೀವು ಅಮೆರಿಕಕ್ಕೆ ಇವುಗಳನ್ನು ಮಾರಾಟ ಮಾಡುವುದಿಲ್ಲ ಎಂದು ನಮ್ಮನ್ನು ಈ ವೇಳೆ ಪ್ರಶ್ನಿಸಿದ್ದರು. ಭಾರತದಲ್ಲಿ ಇಂದು ಖಾಸಗಿ ಕಂಪನಿಗಳೂ ರಾಕೆಟ್ ಉತ್ಪಾದಿಸುತ್ತಿವೆ. ಯುವ ವಿಜ್ಞಾನಿಗಳು ಈ ಕ್ಷೇತ್ರಕ್ಕೆ ಬರಬೇಕು. ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಅವರು ಯುವಜನತೆಗೆ ಕರೆಕೊಟ್ಟಿದ್ದಾರೆ.

Shwetha M