ಎಷ್ಟು ಪ್ರಾರ್ಥನೆ ಸಲ್ಲಿಸಿದರೂ ಉತ್ತರಿಸದ ದೇವರು – ದೇವಸ್ಥಾನದ ಒಳಗೆ ಪೆಟ್ರೋಲ್ ಬಾಂಬ್ ಎಸೆದ ಕುಡುಕ!
ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಾಮಾನ್ಯ. ತನ್ನ ಕಷ್ಟವನ್ನೆಲ್ಲಾ ಪರಿಹರಿಸು ಅಂತಾ ಅನೇಕರು ಏನೇನೋ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ಇಲ್ಲೊಬ್ಬ ಕೂಡ ದೇವರ ಬಳಿ ತನ್ನ ಕಷ್ಟವನ್ನು ಪರಿಹರಿಸುವಂತೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈತನ ಪ್ರಾರ್ಥನೆಗೆ ದೇವರು ಉತ್ತರಿಸಿಲ್ಲ ಅಂತಾ ಕೋಪಕೊಂಡು ದೇವಸ್ಥಾನಕ್ಕೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಅಚ್ಚರಿಯಾದ್ರೂ ಸತ್ಯ. ಈ ವಿಚತ್ರ ಘಟನೆ ತಮಿಳುನಾಡಿನ ಚೆನ್ನೈನ ಪಾರಿಸ್ ಪ್ರದೇಶದಲ್ಲಿ ಇರುವ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಆರೋಪದಲ್ಲಿ ತಮಿಳುನಾಡು ಪೊಲೀಸರು 39 ವರ್ಷದ ಮುರಳಿ ಕೃಷ್ಣನ್ ಎಂಬಾತನನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: ವಿಷಕಾರಿಯಾಯ್ತು ಉಸಿರಾಡುವ ಗಾಳಿ! – ರಾಷ್ಟ್ರ ರಾಜಧಾನಿ ವಾಯುಮಾಲಿನ್ಯಕ್ಕೆ ಕೊಡಗಿನ ಉದ್ಯಮಿ ಬಲಿ!
ಆರೋಪಿ ಮುರಳಿ ಕೃಷ್ಣನ್ ಅತಿಯಾಗಿ ಕುಡಿದಿದ್ದಾನೆ. ಎಣ್ಣೆ ಏಟಲ್ಲಿ ಇದ್ದ ಆತ ದೇವರ ಬಳಿ ಏನೋ ಕೇಳಿಕೊಂಡಿದ್ದಾನೆ. ತಾನು ಎಷ್ಟು ಪ್ರಾರ್ಥನೆ ಸಲ್ಲಿಸಿದರೂ ದೇವರು ಉತ್ತರ ಕೊಡದೆ ಇದ್ದಿದ್ದರಿಂದ ಹತಾಶೆಗೊಂಡಿದ್ದಾನೆ. ತನ್ನ ಪ್ರಾರ್ಥನೆಗೆ ಏನೂ ಪ್ರತಿಕ್ರಿಯಿಸದ ದೇವರ ಮೇಲೆ ಕೋಪಗೊಂಡ ಆತ ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣ ಹಾನಿಸಂಭವಿಸಿಲ್ಲ ಎಂದು ವರದಿಯಾಗಿದೆ.
ಆರೋಪಿ ಕೃಷ್ಣನ್ ವಿಪರೀತ ಕುಡಿದಿದ್ದ. ಆತನನ್ನು ಕೂಡಲೇ ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು. ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಕೃಷ್ಣನ್ ಎಸೆದ ಪೆಟ್ರೋಲ್ ಬಾಂಬ್, ದೇವಸ್ಥಾನದ ಮುಂಭಾಗದಲ್ಲಿ ಬಿದ್ದಿದೆ. ಆತ ಈ ಕೃತ್ಯ ಎಸೆದಾಗ ಅರ್ಚಕರು ದೇವಸ್ಥಾನದಲ್ಲಿ ಪೂಜೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮುರಳಿ ಕೃಷ್ಣನ್ ವಿರುದ್ಧ ಪೊಲೀಸರು ಸ್ಫೋಟಕ ಪದಾರ್ಥಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮುರಳಿ ಕೃಷ್ಣನ್ ವಿರುದ್ಧ ಇನ್ನೂ ಅನೇಕ ಪ್ರಕರಣಗಳು ದಾಖಲಾಗಿದ್ದವು. ಕೆಲವು ದಿನಗಳ ಹಿಂದಷ್ಟೇ ಆತ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಪಾರಿಸ್ ಪ್ರದೇಶದ ದೇವಸ್ಥಾನಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದ.
ಅಂಗಡಿಯೊಂದರ ಮುಂಭಾಗ ಕುಳಿತಿದ್ದ ಕೃಷ್ಣನ್, ಆಲ್ಕೋಹಾಲ್ ಬಾಟಲಿಯಲ್ಲಿ ಪೆಟ್ರೋಲ್ ಅನ್ನು ತುಂಬಿಸಿದ್ದು ಸಿಸಿಟಿವಿ ಕ್ಯಾಮೆರಾದ ವಿಡಿಯೋದಲ್ಲಿ ಸೆರೆಯಾಗಿದೆ.