ಜ.16 ರಿಂದ ಸಸ್ಯಕಾಶಿ ಲಾಲ್‌ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ – ಈ ಬಾರಿಯ ವಿಶೇಷತೆ ಏನು ಗೊತ್ತಾ?
ಸಸ್ಯಕಾಶಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಲಾಲ್ಬಾಗ್ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಶ್ವ ಗುರು ಬಸವಣ್ಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯದ ದರ್ಶನವಾಗಲಿದೆ.
ಹೌದು, 2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 16 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್ ಶೋ ನಡೆಯಲಿದೆ. ಈ ಬಾರಿ ಲಾಲ್‌ಬಾಗ್ ಫ್ಲವರ್‌ಶೋನಲ್ಲಿ ವಿಶ್ವಗುರು ಬಸವಣ್ಣನವರ ಪುಷ್ಪ ಪ್ರತಿಕೃತಿ ಮೈದಳೆಯಲಿದೆ. ಬಸವಣ್ಣರ ಜೀವನ ಚರಿತ್ರೆ, ವಚನಗಳು, ಧಾರ್ಮಿಕ ಚಟುವಟಿಕೆಯ ವಿಷಯಗಳು, ಅನುಭವ ಮಂಟಪ ಹೂಗಳಲ್ಲಿ ಮೂಡಲಿದೆ.
ಇದನ್ನೂ ಓದಿ: ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಉದ್ಘಾಟನೆ ಯಾವಾಗ ಎಂದು ಗೊತ್ತಿತ್ತಾ? – ಏನಿದು ಅಚ್ಚರಿ!
ಕೇವಲ ಬಸವಣ್ಣ ಮಾತ್ರವಲ್ಲ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆಯಂತೆ. ಫಲಪುಷ್ಪ ಪ್ರದರ್ಶನಕ್ಕೆ 80 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ರಜಾ ಅವಧಿಯಲ್ಲಿ 100 ರೂ. ಟಿಕೆಟ್ ದರ ಇರಲಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ.
ಪ್ರಮುಖ ವಿಶೇಷವೇನು..?
10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ. ಅನುಭವ ಮಂಟಪದ ಮೂಲ ಪ್ರತಿರೂಪದ ರಚನೆಯನ್ನು ಐರನ್ ಫ್ರೇಮ್‍ವರ್ಕ್‍ನಿಂದ ರೂಪಿಸಿ, ಅದಕ್ಕೆ 750 ಕೆಜಿಗೂ ಹೆಚ್ಚು ವೈರ್ ಮೆಷ್ ಅಳವಡಿಸಿ, 10 ಸಾವಿರಕ್ಕೂ ಹೆಚ್ಚು ಫ್ಲೋರಲ್ ಫೋಮ್‍ಗಳನ್ನು ಬಳಸಿ ಅಂತಿಮ ರೂಪ ಕೊಡಲಾಗಿದೆ. ಅನುಭವ ಮಂಟಪ 34 ಅಡಿ ಅಗಲ ಮತ್ತು 30 ಅಡಿ ಎತ್ತರವಿರುತ್ತೆ. ಕಡುಗೆಂಪು, ಹಳದಿ ಮತ್ತು ಕಿತ್ತಳೆ ವರ್ಣದ 1.5 ಲಕ್ಷ ಗುಲಾಬಿ ಹೂಗಳು, ಹಳದಿ, ಪಿಂಕ್ ಮತ್ತು ಶ್ವೇತ ವರ್ಣದ 1.55 ಲಕ್ಷ ಆಕರ್ಷಕ ಸೇವಂತಿಗೆ ಹೂಗಳು ಹಾಗೂ 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂವುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಹೂಗಳು ಸೇರಿ 4.8 ಲಕ್ಷ ಹೂಗಳನ್ನು ಒಂದು ಬಾರಿಗೆ ಬಳಸಲಾಗುತ್ತಿದೆ. ಈ ಬಾರಿ ವಚನಕಾರರನ್ನ ಫಲಪುಷ್ಪ ಪ್ರದರ್ಶನದಲ್ಲಿ ಸಂಭ್ರಮಿಸಲು ಹಾಗೂ ಜನತೆಗೆ, ವಿದ್ಯಾರ್ಥಿಗಳಿಗೆ ಫಲಪುಷ್ಪದ ಮೂಲಕ ಅವರನ್ನ ತಲುಪಿಸುವ ಕೆಲಸಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.