40 ಪರ್ಸೆಂಟ್ ಕಮೀಷನ್ ಆರೋಪದ ಬೆನ್ನಲ್ಲೇ ಸರ್ಕಾರ ಅಲರ್ಟ್ – ಗುತ್ತಿಗೆದಾರರ 600 ಕೋಟಿ ರೂ. ಬಿಡುಗಡೆ

40 ಪರ್ಸೆಂಟ್ ಕಮೀಷನ್ ಆರೋಪದ ಬೆನ್ನಲ್ಲೇ ಸರ್ಕಾರ ಅಲರ್ಟ್ – ಗುತ್ತಿಗೆದಾರರ 600 ಕೋಟಿ ರೂ. ಬಿಡುಗಡೆ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರ ಕೋಲಾಹಲ ಎಬ್ಬಿಸಿತ್ತು. ಟೆಂಡರ್​ಗಳ ಬಿಲ್ ಕ್ಲಿಯರ್ ಮಾಡಲು ಬಿಜೆಪಿ ಶಾಸಕರು, ಸಚಿವರು 40 ಪರ್ಸೆಂಟ್ ಕಮಿಷನ್ ಕೇಳ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿತ್ತು. ವಿಧಾನಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಕಾಂಗ್ರೆಸ್​ ಇದನ್ನೇ ದೊಡ್ಡ ಅಸ್ತ್ರ ಮಾಡಿಕೊಂಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸಹ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೊಸ ಬಾಂಬ್ ಸಿಡಿಸಿದ್ದರು. ಈ ಸರ್ಕಾರದಲ್ಲಿ ಶಾಸಕರು, ಸಚಿವರು ಹಣ ಕೇಳ್ತಿಲ್ಲ. ಅಧಿಕಾರಿಗಳೇ ಕಮಿಷನ್ ಕೇಳುತ್ತಿದ್ದಾರೆ ಎಂದು ಹೋರಾಟದ ಎಚ್ಚರಿಕೆ ನೀಡಿದ್ದರು. ಗುತ್ತಿಗೆದಾರರ ಸಂಘ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡ್ತಿದ್ದಂತೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ರು. ಈ ಜಟಾಪಟಿ ನಡುವೆಯೇ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ನೀಡಿದೆ.

ಇದನ್ನೂ ಓದಿ: ವಿಧಾನಸಭಾ ಕಲಾಪದಲ್ಲಿ 40% ಕಮಿಷನ್ ಕಚ್ಚಾಟ – ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ!

40 ಪರ್ಸೆಂಟ್ ಕಮೀಷನ್ ಜಟಾಪಟಿ ನಡುವೆಯೇ ಸರ್ಕಾರ ಗುತ್ತಿಗೆದಾರರ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ರಾಜ್ಯದ 1,054 ಸಣ್ಣ ಗುತ್ತಿಗೆದಾರರ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್​​ ಇರುವ 600 ಕೋಟಿ ರೂಪಾಯಿ ಹಣವನ್ನು ಲೋಕೋಪಯೋಗಿ ಇಲಾಖೆ ಯಾವುದೇ ಲಂಚ ಪಡೆಯದೆ ಬಿಡುಗಡೆ ಮಾಡಿದೆ. ಈ ಬಗ್ಗೆ ಸ್ವತಂಃ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಕೂಡ ಸಹಕಾರ ನೀಡುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಬಾಕಿ ಬಿಲ್​​ಗಳ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಹಾಗೇ ಪ್ಯಾಕೇಜ್ ಸಿಸ್ಟಂ ಆರೋಪಕ್ಕೆ ಗುತ್ತಿಗೆದಾರರ ಸಂಘ ಬದ್ಧವಿದೆ. ಪ್ಯಾಕೇಜ್ ಸಿಸ್ಟಂನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಪ್ಯಾಕೇಜ್ ಸಿಸ್ಟಂ ರದ್ದು ಮಾಡುವ ಒತ್ತಾಯಕ್ಕೆ ನಮ್ಮ ಸಂಘ ಬದ್ಧವಾಗಿದೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಾಲ್ಕು ದಿನಗಳ ಹಿಂದಷ್ಟೇ ಪ್ರೆಸ್ ಮೀಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದರು. ಬಿಜೆಪಿ ಸರ್ಕಾರದಲ್ಲೂ ಲಂಚ ಕೇಳ್ತಿದ್ರು, ಈಗ್ಲೂ ಲಂಚ ಕೇಳ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಕೆಂಪಣ್ಣ ಆರೋಪದ ಬೆನ್ನಲ್ಲೇ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದರು. ಕಾಂಗ್ರೆಸ್‌ ಸರ್ಕಾರ ಕಮಿಷನ್ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಆಗ್ರಹಿಸಿದ್ದರು. ಅಲ್ಲದೆ ಇದೇ ಕೆಂಪಣ್ಣ ನಮ್ಮ ಸರಕಾರದ ಅವಧಿಯಲ್ಲಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯನವರು ಪೇಸಿಎಂ ಎಂಬ ಪೋಸ್ಟರ್‌ ಅಂಟಿಸಿದ್ದರು. ಈಗ ಯಾರ ಮುಖದ ಮೇಲೆ ಯಾವ ಪೋಸ್ಟರ್‌ ಅಂಟಿಸಿಕೊಳ್ಳುತ್ತಾರೆ? ಪೇ ಸಿದ್ದರಾಮಯ್ಯ, ಎಟಿಎಂ ಸಿದ್ದರಾಮಯ್ಯ ಎಂದು ಅಂಟಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಬಹಳಷ್ಟು ಮುಜುಗರ ಉಂಟು ಮಾಡಿತ್ತು. ಇದೇ ಕಾರಣಕ್ಕೆ ಮೊದಲ ಹಂತವಾಗಿ ಗುತ್ತಿಗೆದಾರರ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ ಎನ್ನಲಾಗಿದೆ.

Sulekha