ಬೆಂಗಳೂರಿಗರೇ ಗುಡ್ ನ್ಯೂಸ್: ಶೀಘ್ರವೇ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿಗೆ ಮೆಟ್ರೋ ಸಂಪರ್ಕ

ಬೆಂಗಳೂರಿಗರೇ ಗುಡ್ ನ್ಯೂಸ್: ಶೀಘ್ರವೇ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿಗೆ ಮೆಟ್ರೋ ಸಂಪರ್ಕ

ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನ ಎರಡು ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ನಿವಾಸಿಗಳು ಮತ್ತು ಉದ್ಯೋಗಿಗಳು ಶೀಘ್ರದಲ್ಲೇ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಾಜೆಕ್ಟ್ ಅನ್ನು ಮೂರು ಹಂತಗಳಲ್ಲಿ ವಿಸ್ತರಣೆ ಮಾಡಲಾಗುತ್ತಿದ್ದು, 2023 ರ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 16,328 ಕೋಟಿ ರೂಪಾಯಿ ವೆಚ್ಚದಲ್ಲಿ 3 ಹಂತದ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿದ್ದರು. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ 13 ನಿಲ್ದಾಣಗಳೊಂದಿಗೆ 15 ಕಿ.ಮೀ  ದೂರದವರೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿಗರೇ ಇನ್ಮುಂದೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ಅಷ್ಟೇ…  ಸವಾರರ ಮೇಲೆ ITMS ಹದ್ದಿನ ಕಣ್ಣು!

ನೇರಳೆ ಮಾರ್ಗ: ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋದ ನೇರಳೆ ಮಾರ್ಗವು ಫೆಬ್ರವರಿ-ಮಾರ್ಚ್ 2023 ರ ವೇಳೆಗೆ ಕಾರ್ಯನಿರ್ವಹಿಸಲಿದೆ. ಅಕ್ಟೋಬರ್‌ನಲ್ಲಿ ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಮಾರ್ಗವು ಮಹದೇವಪುರ, ಗರುಡಾಚಾರ್ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.

ಹಸಿರು ಮಾರ್ಗ: ಈ ಮಧ್ಯೆ ನಾಗಸಂದ್ರದವರೆಗೆ ಅಸ್ತಿತ್ವದಲ್ಲಿರುವ ಹಸಿರು ಮಾರ್ಗವನ್ನು ಬೆಂಗಳೂರು ಅಂತರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ವರೆಗೆ ವಿಸ್ತರಿಸಲಾಗುತ್ತಿದೆ. 2023ರಲ್ಲಿ ಈ ಮೆಟ್ರೋ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೇರಳೆ ಮಾರ್ಗವು ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿರುತ್ತದೆ.

ಹಳದಿ ಮಾರ್ಗ: ಮೆಟ್ರೋದ ಎಲೆಕ್ಟ್ರಾನಿಕ್ಸ್ ಸಿಟಿ ಭಾಗವನ್ನು ಜೂನ್ 2023 ರಲ್ಲಿ ಸಾರ್ವಜನಿಕರಿಗೆ ತೆರೆಯಲು ನಿರ್ಧರಿಸಲಾಗಿದೆ. ಈ ರಸ್ತೆ ಬೊಮ್ಮಸಂದ್ರ ದಿಂದ ಹೆಚ್ಚು ದಟ್ಟಣೆಯಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುತ್ತದೆ. ಆರ್ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಸಿಂಗಸಂದ್ರ, ಇಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಸೇರಿದಂತೆ ಹಲವು ಕಡೆ ನಿಲ್ದಾಣಗಳು ಇರಲಿದೆ.

ನೀಲಿ ಮಾರ್ಗ: ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ವರೆಗಿನ ಬ್ಲೂ ಲೈನ್‌ನ 37 ಕಿ.ಮೀ ದೂರದ ವಿಮಾನ ನಿಲ್ದಾಣ-ಲಿಂಕ್ ವಿಭಾಗವು 2025 ರ ವೇಳೆಗೆ ಕಾರ್ಯನಿರ್ವಹಿಸಲಿದೆ.

ಬಿಎಮ್ ಆರ್ ಸಿ ಎಲ್ ಅಧಿಕಾರಿಗಳ ಪ್ರಕಾರ, ಜೂನ್ 2025 ರ ವೇಳೆಗೆ ನಗರದಲ್ಲಿ 175 ಕಿ.ಮೀ ಮೆಟ್ರೋ ವಿಸ್ತರಣೆ ಕಾರ್ಯವನ್ನು ಮಾಡುವ ನಿರೀಕ್ಷೆಯಿದೆ ಮತ್ತು 2041 ರ ವೇಳೆಗೆ ಬೆಂಗಳೂರು 314 ಕಿ.ಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಿರುತ್ತದೆ.

suddiyaana