ಜೀವ ಉಳಿಸಿದವನನ್ನ ನೆರಳಿನಂತೆ ಹಿಂಬಾಲಿಸುತ್ತಿದೆ ಕೊಕ್ಕರೆ – ಅಪರೂಪದ ಬಂಧಕ್ಕೆ ಜನ ಫಿದಾ..

ಜೀವ ಉಳಿಸಿದವನನ್ನ ನೆರಳಿನಂತೆ ಹಿಂಬಾಲಿಸುತ್ತಿದೆ ಕೊಕ್ಕರೆ – ಅಪರೂಪದ ಬಂಧಕ್ಕೆ ಜನ ಫಿದಾ..

ಕಷ್ಟದಲ್ಲಿ ಸಹಾಯ ಮಾಡೋದು ಪ್ರತಿಯೊಬ್ಬರ ಕರ್ತವ್ಯ. ಯಾರಾದರೂ ಕಷ್ಟದಲ್ಲಿ ಇದ್ದಾರೆ ಅಂದಾಗ ಹತ್ತು ಜನರಲ್ಲಿ ಒಬ್ಬರಾದರೂ ಸಹಾಯ ಮಾಡುತ್ತಾರೆ. ಈ ವೇಳೆ ಕಷ್ಟಕ್ಕೆ ಗುರಿಯಾದವರು ಜೀವನ ಪರ್ಯಂತ ಅವರನ್ನ ನೆನಪಿಸಿಕೊಳ್ಳುತ್ತಾರೆ. ಇದು ಪ್ರಾಣಿಗಳಲ್ಲೂ ಹೊರತಾಗಿಲ್ಲ. ಪ್ರಾಣಿಗಳು ಕಷ್ಟದಲ್ಲಿ ಸಿಲುಕಿದ್ದರೆ ಅವುಗಳನ್ನು ರಕ್ಷಿಸಲಾಗುತ್ತದೆ. ಜೀವ ಕಾಪಾಡಿದ ವ್ಯಕ್ತಿಗಳನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ. ನೀಡಿದ ಹಿಡಿ ಪ್ರೀತಿ ಬದಲಿಗೆ ಬೊಗಸೆ ತಂಬಾ ನಿಷ್ಠೆ ತೋರುತ್ತವೆ ಎನ್ನುವ ಮಾತು ಅಕ್ಷರಶಃ ಸತ್ಯ. ಇದಕ್ಕೆ ನಿದರ್ಶನವೆನ್ನುವಂತೆ ಉತ್ತರ ಪ್ರದೇಶದಲ್ಲಿ ಕೊಕ್ಕರೆಯೊಂದು ತನ್ನ ಜೀವ ಉಳಿಸಿದ ವ್ಯಕ್ತಿಯೊಬ್ಬರನ್ನು ನೆರಳಿನಂತೆ ಹಿಂಬಾಲಿಸುತ್ತಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಬಾವಿಗೆ ಎಸೆದ ಮಗುವಿನ ಹೊಟ್ಟೆ ಸುತ್ತಿಕೊಂಡು ಕಾಪಾಡಿತು ನಾಗರಹಾವು – ಗ್ರಾಮಸ್ಥರಿಗೆ ಕಂಡಿದ್ದೆಂಥಾ ಪವಾಡ?

ಸಾರಸ್‌ ಕೊಕ್ಕರೆ ಸಾಮಾನ್ಯ ಕೊಕ್ಕರೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಹಕ್ಕಿಗಳು ಮನುಷ್ಯರ ಕೈಗೆ ಸಿಗುವುದೇ ಅಪರೂಪ. ಅಂಥದರಲ್ಲಿ ಉತ್ತರ ಪ್ರದೇಶದ ಮಂಧಕ ಎಂಬ ಗ್ರಾಮದಲ್ಲಿ ಆರಿಫ್ ಖಾನ್‌ ಗುರ್ಜಾರ್‌ ಎನ್ನುವ ವ್ಯಕ್ತಿಯ ನೆರಳಿನಂತೆ ಹಿಂಬಾಲಿಸುತ್ತಿದೆ. ತೋಟಕ್ಕೆ ಹೋದರೆ ಅಲ್ಲಿಯೂ, ರಸ್ತೆ, ಮನೆ ಎಲ್ಲಿಗೆ ಹೋದರೂ ಆರಿಫ್ ಗೆ ಸಾರಸ್‌ ಜತೆಗಾರನಾಗಿ ನಿಲ್ಲುತ್ತಿದೆ. ಅಲ್ಲದೇ ಆತ ನೀಡಿದ ಆಹಾರವನ್ನಷ್ಟೇ ತಿಂದು, ತಾಳಕ್ಕೆ ತಕ್ಕಂತೆ ಕುಣಿದು, ಮನೆಯ ಸದಸ್ಯನಂತೆ ಬಾಳುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಸಾರಸ್‌ ಮತ್ತು ಆರಿಫ್ ಪ್ರೀತಿಗೆ ಜನರು ವಾಹ್‌ ಎಂದಿದ್ದಾರೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ಆರಿಫ್ ನನ್ನು ಕೊಕ್ಕರೆ ಹಿಂಬಾಲಿಸಿಕೊಂಡು ಹೋಗುತ್ತಿದೆ. ಆರಿಫ್  ಎಷ್ಟು ವೇಗವಾಗಿ ಬೈಕ್ ಚಲಾಯಿಸಿದರೂ ಕೂಡ ಕೊಕ್ಕರೆ ಆತನನ್ನೇ ಹಿಂಬಾಲಿಸುತ್ತಿದೆ. ಆತ ನಿಧಾನವಾಗಿ ಚಲಿಸಿದರೆ ಅದೂ ಕೂಡ ನಿಧಾನವಾಗಿ ಹಾರಾಡುತ್ತಿದೆ. ಈ ದೃಶ್ಯ ಭಾರಿ ವೈರಲ್ ಆಗಿದೆ.

ಇಷ್ಟಕ್ಕೂ ಈ ಸ್ನೇಹಕ್ಕೆ ಕಾರಣ ಆರಿಫ್ ಅವರ ಹೃದಯವಂತಿಕೆ. ಒಂದು ವರ್ಷದ ಹಿಂದೆ ಜಮೀನಿನಲ್ಲಿ ಗಾಯಗೊಂಡು ಬಿದ್ದಿದ್ದ ಈ ಕೊಕ್ಕರೆಯನ್ನು ಮೊಹಮ್ಮದ್ ಆರಿಫ್ ರಕ್ಷಿಸಿ ಆರೈಕೆ ಮಾಡಿದ್ದರು. ಬಳಿಕ ಚೇತರಿಸಿಕೊಂಡ ಈ ಹಕ್ಕಿ ಹಾರಲು ಆರಂಭಿಸಿತ್ತು. ಆದರೆ, ತಾನು ಚೇತರಿಸಿಕೊಂಡ ಬಳಿಕ ಈ ಕೊಕ್ಕರೆ ಆರಿಫ್ ಅವರನ್ನು ಬಿಟ್ಟು ಹೋಗಲಿಲ್ಲ. ಬದಲಾಗಿ ಇವರೊಂದಿಗೇ ಉಳಿದುಕೊಂಡಿದೆ. ಬಳಿಕ ಸಾರಸ್‌, ಆರಿಫ್ ಅವರ ಮನೆಯ ಸದಸ್ಯನೇ ಆಗಿ ಹೋಗಿದ್ದು, ಅಂದಿನಿಂದ ಆರಿಫ್ ನೆರಳಾಗಿಯೇ ಜತೆಗಿದೆ.

suddiyaana