ಪೂನಂ ಪಾಂಡೆ ಸಾವಿನ ಬೆನ್ನಲ್ಲೇ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಆತಂಕ – 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಅಭಿಯಾನ

ಪೂನಂ ಪಾಂಡೆ ಸಾವಿನ ಬೆನ್ನಲ್ಲೇ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಆತಂಕ – 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಅಭಿಯಾನ

ಹಾಟ್ ಫೋಟೋಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡಿದ್ದ ನಟಿ ಪೂನಂ ಪಾಂಡೆ. ಹಿಂದೊಮ್ಮೆ ವಿಶ್ವಕಪ್ ಮ್ಯಾಚ್ ವೇಳೆ ಇಡೀ ಜಗತ್ತೇ ಇವರ ಬಗ್ಗೆ ಮಾತನಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯಲ್ಲಿ ಜನಪ್ರಿಯರಾಗಿದ್ದ ಪೂನಂ ಪಾಂಡೆ ಇಂದು ನಮ್ಮೊಂದಿಗಿಲ್ಲ. 32ನೇ ವಯಸ್ಸಿನಲ್ಲೇ ಸರ್ವಿಕಲ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ರಿಯಾಲಿಟಿ ಶೋ, ಮಾಡೆಲಿಂಗ್, ಆಲ್ಬಂ ವಿಡಿಯೋಗಳ ಮೂಲಕ ಪ್ರಸಿದ್ಧಿ ಗಳಿಸಿ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಆದ್ರೆ ಅವ್ರ ದಿಢೀರ್ ನಿಧನದ ಸುದ್ದಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಇನ್ನು ಪೂನಂ ನಿಧನದ ಬೆನ್ನಲ್ಲೇ ಸರ್ವಿಕಲ್ ಕ್ಯಾನ್ಸರ್ ಅಂದ್ರೆ ಗರ್ಭಕಂಠ ಕ್ಯಾನ್ಸರ್​ ಭಾರೀ ಚರ್ಚೆ ಹುಟ್ಟು ಹಾಕಿದೆ. ಅದ್ರಲ್ಲೂ ಹೆಣ್ಮಕ್ಕಳನ್ನು ಕಾಡುವ ಈ ಕ್ಯಾನ್ಸರ್​ ತಡೆಯಲು ಭಾರತ ಸರ್ಕಾರ ಗುರುವಾರವಷ್ಟೇ ಬಜೆಟ್​ನಲ್ಲಿ ಘೋಷಣೆ ಮಾಡಿತ್ತು.

ಇದನ್ನೂ ಓದಿ: ಬಾಲಿವುಡ್‌ನ ಹಾಟ್ ನಟಿ ಪೂನಂ ಪಾಂಡೆ ಇನ್ನು ನೆನಪು ಮಾತ್ರ – ಕ್ಯಾನ್ಸರ್ಗೆ ಬಲಿಯಾದ ನಟಿಗೆ ಅಭಿಮಾನಿಗಳ ಅಂತಿಮ ನಮನ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ದೇಶದ ಮಧ್ಯಂತರ ಬಜೆಟ್ ಮಂಡಿಸಿದ್ದರು. ಬಜೆಟ್​ನಲ್ಲಿ ಆರೋಗ್ಯ ವಿಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಹಳಷ್ಟು ಕೊಡುಗೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಮಿಷನ್ ‘ಇಂದ್ರಧನುಷ್’ ಅಡಿಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ಸೀರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸೆರ್ವಾವಾಕ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಇದು HPV – 16, 18, 6 ಮತ್ತು 11 ರ ನಾಲ್ಕು ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಈಗಾಗಲೇ ಲಸಿಕೆ ಬೆಲೆ 200 ರಿಂದ 400 ರೂಪಾಯಿ ನಿಗದಿಪಡಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಗರ್ಭಕಂಠದ ಲಸಿಕೆಗಳು ಲಭ್ಯವಿದೆ. ಆ ಲಸಿಕೆಗಳ ಬೆಲೆ ಪ್ರತಿ ಡೋಸ್‌ಗೆ 2,500-3,300 ರೂಪಾಯಿ ಆಗಿದೆ. ಹೀಗಾಗೇ ಕೇಂದ್ರ ಸರ್ಕಾರ 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಕ್ಯಾನ್ಸರ್ ಅನ್ನೋದೇ ಮಾರಣಾಂತಿಕ ಕಾಯಿಲೆ. ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರಲ್ಲಿ ಉಂಟಾಗುವ ಸಾವಿನ ಪ್ರಮಾಣದಲ್ಲಿ ಸಹ ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರ ಪಾಲಿಗೆ ಗರ್ಭಕಂಠದ ಕ್ಯಾನ್ಸರ್ ಅಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ. 2020ರಲ್ಲಿ ಅಂದಾಜು 6,04,000 ಹೊಸ ಪ್ರಕರಣಗಳು ಮತ್ತು 3,42,000 ಸಾವುಗಳು ಸಂಭವಿಸಿವೆ. ಅಷ್ಟಕ್ಕೂ ಗರ್ಭಕಂಠದ ಕ್ಯಾನ್ಸರ್‌ ಎಂದರೇನು? ಈ ಕ್ಯಾನ್ಸರ್ ಯಾಕೆ ಇಷ್ಟು ಡೇಂಜರಸ್ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.

ಗರ್ಭಕಂಠ ಕ್ಯಾನ್ಸರ್ ಲಕ್ಷಣಗಳು!   

  • ಗರ್ಭಕಂಠದ ಕ್ಯಾನ್ಸರ್‌ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ
  • ಹಾಗೂ 60 ರಿಂದ 70 ವರ್ಷದ ನಡುವಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ
  • ಆದರೆ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಸೋಂಕು ಬರಲ್ಲ
  • ತುಂಬಾ ಬಿಳಿ ಸ್ರಾವ ಆಗುವುದು, ಬಿಳಿ ಸೊರಗಿನ ಜೊತೆಗೆ ಕೆಂಪು ಅಥವಾ ರಕ್ತಸ್ರಾವ
  • ಗಂಡ, ಹೆಂಡತಿ ಮಿಲನ ಸಮಯದಲ್ಲಿ ರಕ್ತಸ್ರಾವ ಆಗುವುದು ಈ ಮೂರು ಲಕ್ಷಣಗಳು
  • ಆರಂಭಿಕ ಹಂತದಲ್ಲಿ ಬಯಾಪ್ಸಿ ಟೆಸ್ಟಿಂಗ್‌ ಮೂಲಕ ಗರ್ಭಕೋಶದಲ್ಲಿನ ಬದಲಾವಣೆ
  •  ಈ ಪರೀಕ್ಷೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯ
  • ಆದರೆ, 3 ಅಥವಾ 4ನೇ ಹಂತ ತಲುಪಿದ್ದಲ್ಲಿ ಈ ಸೋಂಕಿಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ
  • ರೇಡಿಯೋಥೆರಪಿಗಳನ್ನ ಮಾಡಬೇಕು, ಹೆಣ್ಣಿನ ಜೀವವನ್ನು ಉಳಿಸುವುದು ಕೂಡಾ ಕಷ್ಟ

ಗರ್ಭಕಂಠದ ಕ್ಯಾನ್ಸರ್‌ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಹಾಗೂ 60 ರಿಂದ 70 ವರ್ಷದ ನಡುವಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಸೋಂಕು ಕಾಣಿಸಿಕೊಳ್ಳುವುದಿಲ್ಲ. ತುಂಬಾ ಬಿಳಿ ಸ್ರಾವ ಆಗುವುದು. ಬಿಳಿ ಸೊರಗಿನ ಜೊತೆಗೆ ಕೆಂಪು ಅಥವಾ ರಕ್ತಸ್ರಾವ ಆಗಿದ್ದಲ್ಲಿ ಮತ್ತು ಗಂಡ, ಹೆಂಡತಿ ಮಿಲನ ಸಮಯದಲ್ಲಿ ರಕ್ತಸ್ರಾವ ಆಗುವುದು ಈ ಮೂರು ಲಕ್ಷಣಗಳು ಗರ್ಭಕಂಠ ಕ್ಯಾನ್ಸರ್‌ನ ಸೂಚನೆಗಳಾಗಿವೆ. ಆರಂಭಿಕ ಹಂತದಲ್ಲಿ ಬಯಾಪ್ಸಿ ಟೆಸ್ಟಿಂಗ್‌ ಮೂಲಕ ಸುಲಭವಾಗಿ ಗರ್ಭಕೋಶದಲ್ಲಿನ ಬದಲಾವಣೆಯನ್ನು ಗಮನಿಸಬಹುದಾಗಿದೆ. ಈ ಪರೀಕ್ಷೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಆದರೆ, 3 ಅಥವಾ 4ನೇ ಹಂತ ತಲುಪಿದ್ದಲ್ಲಿ ಈ ಸೋಂಕಿಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಹಾಗೂ ರೇಡಿಯೋಥೆರಪಿಗಳನ್ನ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಹೆಣ್ಣಿನ ಜೀವವನ್ನು ಉಳಿಸುವುದು ಕೂಡಾ ಕಷ್ಟವಾಗಲಿದೆ.

ಆರಂಭಿಕ ಹಂತವನ್ನು ಮೀರಿದ್ದ ಕಾರಣದಿಂದಾಗಿಯೇ ನಟಿ ಪೂನಂ ಪಾಂಡೆ ಸರ್ವಿಕಲ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಉತ್ತರಪ್ರದೇಶದ ಕಾನ್ಪುರದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದಿದ್ದ ಪೂನಂ ಮೊದಲು ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. 2013ರಲ್ಲಿ ನಶಾ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪೂನಂ ಪಾಂಡೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಕನ್ನಡದ ಲವ್ ಈಸ್ ಪಾಯಿಸನ್ ಎಂಬ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು. ಆದ್ರೆ ಬದುಕಿನ ಸಾಕಷ್ಟು ಕ್ಷಣಗಳು ಇರುವಾಗಲೇ ಸರ್ವಿಕಲ್ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಹಾಗಂತ ಈ ಸರ್ವಿಕಲ್ ಕ್ಯಾನ್ಸರ್ ತಡೆಗಟ್ಟೋದು ಸಾಧ್ಯವೇ ಇಲ್ಲ ಅಂತೇನಿಲ್ಲ. ಹೆಚ್‌ಪಿವಿ ಲಸಿಕೆ ಪಡೆಯುವುದು ಗರ್ಭಕಂಠದ ಕ್ಯಾನ್ಸರ್‌ಗಿರುವ ಪರಿಣಾಮಕಾರಿ ಲಸಿಕೆಯಾಗಿದೆ. ಈ ಲಸಿಕೆಯನ್ನು 18 ರಿಂದ 20 ವರ್ಷದ ಹೆಣ್ಮಕ್ಕಳಿಗೆ ನೀಡಿದ್ದಲ್ಲಿ, ಶೇಕಡಾ 98 ರಷ್ಟು ಹೆಣ್ಮಕ್ಕಳು ಕ್ಯಾನ್ಸರ್‌ನಿಂದ ಪಾರಾಗುತ್ತಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ. ಸರ್ಕಾರಗಳು ಕೂಡ ಜಾಗೃತಿ ಮೂಡಿಸಬೇಕಿದೆ.

 

Sulekha