ಅಜ್ಜಿ – ಮೊಮ್ಮಗಳಿಗೆ ಫ್ರೀ ಬಸ್‌ ಪ್ರಯಾಣ – ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್!

ಅಜ್ಜಿ – ಮೊಮ್ಮಗಳಿಗೆ ಫ್ರೀ ಬಸ್‌ ಪ್ರಯಾಣ – ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್!

ರಾಜ್ಯದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಲಕ್ಷಾಂತರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಅಜ್ಜಿ – ಮೊಮ್ಮಗಳು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಇವರಿಬ್ಬರಿಗೆ ಶಾಕ್‌ ನೀಡಿದ್ದಾರೆ. ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದ ನಾಲ್ಕು ಲವ್ ಬರ್ಡ್ಸ್​ಗಳಿಗೆ ಕಂಡಕ್ಟರ್ ಬರೋಬ್ಬರಿ 444 ರೂ. ಟಿಕೆಟ್ ನೀಡಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್ – 60 ಕಡೆಗಳಲ್ಲಿ ದಿಢೀರ್ ದಾಳಿ

ಅಷ್ಟಕ್ಕೂ ಆಗಿದ್ದೇನು?

ಬುಧವಾರ ಬೆಳಗ್ಗೆ 08.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆಎಸ್​ಆರ್​ಟಿಸಿ ಬಸ್​ ಹತ್ತಿ ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದಿದ್ದರು. ಆದರೆ ಅಜ್ಜಿ-ಮೊಮ್ಮಗಳ ಕೈಯಲ್ಲಿದ್ದ ಪಂಚರದೊಳಗಿದ್ದ ನಾಲ್ಕು ಲವ್ ಬರ್ಡ್​ ಗಮನಿಸಿದ ಕಂಡಕ್ಟರ್​ ಬರೋಬ್ಬರಿ 444 ರೂಪಾಯಿ ಟಿಕೆಟ್ ಹರಿದಿದ್ದಾರೆ. ಸರ್ಕಾರದ ಫ್ರೀ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ.

ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ. ಈ ಘಟನೆಗೆ ಕೆಲವರು ನಕ್ಕು ಸುಮ್ಮನಾದ್ರೆ, ಮತ್ತೆ ಕೆಲವರು ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಎರಡು ವರ್ಷದ ಹಿಂದೆ ಅಂದ್ರೆ 2022ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಪಕ್ಷಿಗಳಿಗೆ ಟಿಕೆಟ್ ತಗೊಂಡಿಲ್ಲ ಎಂಬ ಕಾರಣಕ್ಕೆ ದಂಡ ತೆತ್ತಂಥ ಘಟನೆ ನಡೆದಿತ್ತು. ಹೈದರಾಬಾದ್ ನಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಪಂಜರದಲ್ಲಿ ಲವ್ ಬರ್ಡ್ಸ್ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಆ ಜೋಡಿ ಹಕ್ಕಿಗಳಿಗೆ ತಲಾ ಅರ್ಧ ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಮನವಿ ಮಾಡಿದ್ರು, ಆದರೆ ಆ ಪ್ರಯಾಣಿಕ ಮಾತ್ರ ಅದಕ್ಕೆ ಒಪ್ಪಲಿಲ್ಲ. ಬಳಿಕ ಸಹ ಪ್ರಯಾಣಿಕರು ಕೂಡ ಪಕ್ಷಿಗಳಿಗೆ ಟಿಕೆಟ್ ಇಲ್ಲ ಎಂದು ವಾದ ಮಾಡಿದ್ದರು. ಬಳಿಕ ಕಂಡಕ್ಟರ್ ಸುಮ್ಮನಾಗಿದ್ದ. ಆದರೆ ದಾರಿ ಮಧ್ಯೆದಲ್ಲಿ ಟಿಕೆಟ್ ಚೆಕ್ ಮಾಡುವ ಸಿಬ್ಬಂದಿ ಬಸ್ ಹತ್ತಿ ಬಂದು ಚೆಕ್ ಮಾಡಿದಾಗ ಪಕ್ಷಿಗಳಿಗೆ ಯಾವುದೇ ರೀತಿಯ ಟಿಕೆಟ್ ತೆಗೆದುಕೊಂಡಿಲ್ಲವೆಂಬುದು ಕಂಡಕ್ಟರ್​ಗೆ ದಂಡ ವಿಧಿಸಿದ್ದರು.

Shwetha M