ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿ – ಸದ್ಯದಲ್ಲೇ ಶುರುವಾಗಲಿದೆ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ

ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿ – ಸದ್ಯದಲ್ಲೇ ಶುರುವಾಗಲಿದೆ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನದ್ದೇ ದೊಡ್ಡ ಸಮಸ್ಯೆ. ಪ್ರತಿದಿನ ಸಿಟಿಯಲ್ಲಿ ಒಂದೆಡೆ ಟ್ರಾಫಿಕ್ ಕಿರಿಕಿರಿ ಮತ್ತೊಂದೆಡೆ ಪಾರ್ಕಿಂಗ್ ತಲೆಬಿಸಿ ತಪ್ಪಿದ್ದಲ್ಲ. ಇದರ ಮಧ್ಯೆ ವಾಹನಗಳ ಸಂಖ್ಯೆಯಂತೂ ದಿನೇ ದಿನೇ ಏರುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ 1 ಕೋಟಿಗೂ ಹೆಚ್ಚು ವಾಹನಗಳಿವೆ. ಹೀಗಿರುವಾಗ ಟ್ರಾಫಿಕ್ ಜಾಮ್ ಆಗದೇ ಇರುತ್ತಾ. ಆದರೆ, ಈ ಕಿರಿಕಿರಿಗೆ ಶಾಶ್ವತ ಪರಿಹಾರಕ್ಕಾಗಿ ಈಗ ಬಿಬಿಎಂಪಿ (BBMP) ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ಒಂದು ಯೋಜನೆ ರೂಪಿಸಿದೆ. ಪಾಲಿಕೆ, ಸಂಚಾರಿ ಪೊಲೀಸರು ಗುರ್ತಿಸಿರುವ ನಗರದ 12 ಪ್ರಮುಖ ರಸ್ತೆಗಳಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇದೆ. ಹೀಗಾಗಿ ಈ ರಸ್ತೆಗಳಲ್ಲಿ ಟ್ರಾಫಿಕ್   ತಗ್ಗಿಸಲು ಯೋಜನೆ ರೂಪಿಸಲಾಗಿದೆ. 273 ಕೋಟಿ ವೆಚ್ಚದಲ್ಲಿ ಫ್ರೀ ಕಾರಿಡಾರ್ ರಸ್ತೆಗಳನ್ನ ನಿರ್ಮಿಸಲು ಸಜ್ಜಾಗಿದ್ದು, 3 ವರ್ಷದೊಳಗೆ ಈ ಯೋಜನೆ ಮುಗಿಸಲು ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ:  ಕರ್ನಾಟಕಕ್ಕೆ ಸಿಗಲಿದೆಯಾ ‘ಹುಲಿ ರಾಜ್ಯ’ ಪಟ್ಟ ? – ಹುಲಿಗಣತಿಯಲ್ಲಿ ಸಿಗುತ್ತಾ ನಂಬರ್ 1 ಸ್ಥಾನ ? 

ಸದ್ಯ ಸಂಚಾರ ಪೊಲೀಸರು ಸಿದ್ಧಪಡಿಸಿರುವ ವರದಿ ಪ್ರಕಾರ, ಮ್ಯಾನ್‌ಹೋಲ್ (Manhole) ಹಾಗೂ ಮಳೆ ನೀರು (Rain Water) ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುವುದರಿಂದಲೂ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದೆ. ಸಂಚಾರ ಪೊಲೀಸರ ಪ್ರಕಾರ ನಗರದಲ್ಲಿ 11 ಮ್ಯಾನ್‌ಹೋಲ್‌ಗಳು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿವೆ. ಜೊತೆಗೆ 206 ಕಡೆ ಮಳೆ ನೀರು ರಸ್ತೆಯಲ್ಲಿ ನಿಲ್ಲುತ್ತಿದ್ದು, ಮಳೆಗಾಲದಲ್ಲಿ ವಾಹನಗಳ ಓಡಾಟಕ್ಕೆ ಸಮಸ್ಯೆ ಎದುರಾಗಿದೆ.

ಇನ್ನು, ರಸ್ತೆಗಳಲ್ಲಿ ಮಳೆ ನೀರು ನಿಲ್ಲುವುದನ್ನು ತಡೆಯಲು ಗ್ರೇಟಿಂಗ್‌ಗಳ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ 273 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಿಸಲಾಗುವುದು ಅಂತ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಶೀಘ್ರದಲ್ಲೇ ಕೆಲಸ ಆರಂಭವಾಗಲಿದ್ದು, ಮೂರು ವರ್ಷದಲ್ಲಿ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ ಮುಗಿಸುವ ಚಿಂತನೆ ಕೂಡಾ ನಡೆಯುತ್ತಿದೆ.

suddiyaana