ಫ್ರೀ ಬಸ್ ಟಿಕೆಟ್ ಗೆ ಹೊರ ರಾಜ್ಯದ ಮಹಿಳೆಯರ ಐನಾತಿ ಐಡಿಯಾ! – ಆಧಾರ್ ಕಾರ್ಡ್ ನೋಡಿ ದಂಗಾದ ಕಂಡಕ್ಟರ್
ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಜಾರಿಗೊಳಿಸಿದೆ. ಮಹಿಳೆಯರೂ ಕೂಡ ಫ್ರೀ.. ಫ್ರಿ.. ಎಂದು ಊರೂರು ಸುತ್ತುತ್ತಿದ್ದಾರೆ. ಇದೀಗ ಹೊರ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಖತರ್ನಾಕ್ ಬುದ್ಧಿಯನ್ನು ತೋರಿಸಿದ್ದಾರೆ.
ಇದನ್ನೂ ಓದಿ: ಉಚಿತ ಬಸ್ ಪ್ರಯಾಣ – ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ
ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾಗಿ ಕೇವಲ ಎರಡು ದಿನ ಆಗಿದೆ. ಆದರೆ ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ತಮ್ಮ ಖತರ್ನಾಕ್ ಐಡಿಯಾವನ್ನು ಉಪಯೋಗಿಸಿ ಬಸ್‌ನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಅವರ ಐಡಿಯಾ ನೋಡಿದ ಬಸ್ ಕಂಡಕ್ಟರ್‌ಗಳು ಒಂದು ಕ್ಷಣ ಶಾಕ್ ಆಗಿದ್ದು, ಹಣ ಕೊಟ್ಟು ಪ್ರಯಾಣ ಮಾಡುವಂತೆ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಮಾಡಿಸಿಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ ಕೂಡ ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಮಾಡಿಸಿಕೊಂಡಿದ್ದಾರೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳಿಗೆ ತಿಳಿದುಬಂದಿದೆ.
ತಮಿಳುನಾಡಿನ ಹಾಗೂ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಕನ್ನಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಲಾಗಿದೆ. ಇಂತಹ ಆಧಾರ್ ಕಾರ್ಡ್ ತೋರಿಸಿದ ಇಬ್ಬರೂ ಮಹಿಳೆಯರು, ಕಂಡಕ್ಟರ್ ಬಳಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಫೊಟೋಗಳನ್ನು ತೆಗೆದುಕೊಂಡು ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.