ನಮ್ಮ ಮೆಟ್ರೋಗೆ ‘ಶಕ್ತಿ’ ತುಂಬಿದ ಫ್ರೀ ಬಸ್ ಯೋಜನೆ – ಬಿಎಂಆರ್‌ಸಿಎಲ್‌ಗೆ ಪ್ರತಿ ದಿನ 15 ಲಕ್ಷ ಆದಾಯ!

ನಮ್ಮ ಮೆಟ್ರೋಗೆ ‘ಶಕ್ತಿ’ ತುಂಬಿದ ಫ್ರೀ ಬಸ್ ಯೋಜನೆ – ಬಿಎಂಆರ್‌ಸಿಎಲ್‌ಗೆ ಪ್ರತಿ ದಿನ 15 ಲಕ್ಷ ಆದಾಯ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ. ಮಹಿಳೆಯರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಮೆಟ್ರೋಗೆ ನಷ್ಟವಾಗುತ್ತಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋಗೆ ಲಾಭವಾಗುತ್ತಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಶಕ್ತಿ ಯೋಜನೆಯ ನಂತರ ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯು ಜುಲೈ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಪ್ರಕಾರ ಮೇ ತಿಂಗಳಲ್ಲಿ ಪ್ರತಿದಿನ ಸರಾಸರಿ 5.6 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿಯಾದ ನಂತರ ನಮ್ಮ ಮೆಟ್ರೋ ಬಳಸುವರ ಸಂಖ್ಯೆಯಲ್ಲಿ ಸರಿಸುಮಾರು ದಿನಕ್ಕೆ 40ಸಾವಿರ ಹೆಚ್ಚಾಗಿದೆ. ಇದು ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಕ್ಕೆ ತೊಂದರೆ ಉಂಟು ಮಾಡಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್‌ ಸಿಬ್ಬಂದಿಗೆ ಎಲ್ಲಾ ವಾರದಲ್ಲೂ 2 ದಿನ ರಜೆ.. ನಿತ್ಯ 40 ನಿಮಿಷ ಹೆಚ್ಚು ಕೆಲಸ?

ಶಕ್ತಿ ಯೋಜನೆ ಜಾರಿ ನಂತರ ಈ ಪ್ರಯಾಣಿಕರ ಸಂಖ್ಯೆ ಪ್ರತಿದಿನ 6.1 ಲಕ್ಷಕ್ಕೆ ಹೆಚ್ಚಾಗಿದೆ. ಜುಲೈ 21ರವರೆಗೆ ಪ್ರತಿದಿನ ಪ್ರಯಾಣಿಕರ ಸಂಖ್ಯೆ 6.1 ಲಕ್ಷ ಗಡಿ ದಾಟಿದೆ. ಅದರ ಹಿಂದಿನ ವಾರ ಜುಲೈ 15 ರಂದು ದೈನಂದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ 6.7 ಲಕ್ಷಕ್ಕೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ನೀಡಿದೆ. ಇದರಿಂದಾಗಿ ಜನರು ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜಿಸಿದಂತಾಗಿದೆ. ಆದರೆ ಈ ಯೋಜನೆಯಿಂದ ನಮ್ಮ ಮೆಟ್ರೋ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಬದಲಾಗಿ, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಸೋಮವಾರದಿಂದ ಶುಕ್ರವಾರವರೆಗೆ 6.2 ರಿಂದ 6.3 ಲಕ್ಷ ಜನರು ನಮ್ಮ ಮೆಟ್ರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಿನಕ್ಕೆ 40 ಸಾವಿರ ಪ್ರಯಾಣಿಕರು ಹೆಚ್ಚಾಗಿದೆ. ಎಂದರೆ ನಮಗೆ ಪ್ರತಿ ದಿನ 15 ಲಕ್ಷ ರೂಪಾಯಿಗೆ ಹೆಚ್ಚುವರಿ ಆದಾಯ ಬರುತ್ತಿದೆ. ಕೆಲವು ದಿನ ಈ ಸಂಖ್ಯೆ 6.6 ಲಕ್ಷದ ಗಡಿ ದಾಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

suddiyaana